ಮೊಸಳೆಗಳಿದ್ದ ಸ್ಥಳಕ್ಕೆ ತೆರಳಿ ವಿದ್ಯುತ್ ದುರಸ್ತಿ ಕಾರ್ಯ ಕೈಗೊಂಡ ಹೆಸ್ಕಾಂ ಸಿಬ್ಬಂದಿ (ETV Bharat) ಕಾರವಾರ/ಹುಬ್ಬಳ್ಳಿ:ಮಳೆಗಾಲದಲ್ಲಿ ವಿದ್ಯುತ್ ದುರಸ್ತಿ ಹೆಸ್ಕಾಂಗೆ ಸವಾಲಿನ ಕೆಲಸ. ದಟ್ಟ ಕಾಡು, ಹರಿಯುವ ನದಿಗಳ ನಡುವೆ ತೆರಳಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲೂ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ.
ಇತ್ತೀಚಿಗಷ್ಟೇ ಪ್ರವಾಹದ ನೀರಿನಲ್ಲೇ ದುರಸ್ತಿ ಕಾರ್ಯ ಮಾಡಿ ಗಮನ ಸೆಳೆದಿದ್ದ ಸಿಬ್ಬಂದಿ, ಇದೀಗ ಮೊಸಳೆಗಳು ಹೆಚ್ಚಿರುವ ಕಾಳಿ ನದಿ ನಡುಗಡ್ಡೆಗೆ ಹೋಗಿ ದುರಸ್ತಿ ಕಾರ್ಯ ಕೈಗೊಳ್ಳುವ ಮೂಲಕ ಕತ್ತಲೆಯಲ್ಲಿದ್ದ ಗ್ರಾಮಕ್ಕೆ ಬೆಳಕು ನೀಡಿದ್ದಾರೆ.
ದಾಂಡೇಲಿಯ ಕುಳಗಿ ರಸ್ತೆ ಪ್ರದೇಶದ ಕಾಳಿ ನದಿ ನಡುಗಡ್ಡೆ ಪ್ರದೇಶ ವ್ಯಾಪ್ತಿಯಲ್ಲಿರುವ ಕುಳಗಿ- ಬೊಮ್ಮನಹಳ್ಳಿ ಗ್ರಾಮಗಳಿಗೆ ವಿದ್ಯುತ್ ಪೂರೈಸುವ 11 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಮರದ ಟೊಂಗೆ ತಂತಿಯ ಮೇಲೆ ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಇದು ಮೊಸಳೆಗಳ ವಾಸ ಸ್ಥಾನ. ಹತ್ತಾರು ಮೊಸಳೆಗಳು ಇಲ್ಲಿವೆ.
ಇಂತಹ ಪ್ರದೇಶಕ್ಕೆ ತೆರಳಿ ದುರಸ್ತಿ ಮಾಡುವ ಅನಿವಾರ್ಯತೆ ಎದುರಾಗಿತ್ತು. ಕಾರ್ಯನಿರ್ವಾಹಕ ಎಂಜಿನಿಯರ್ ಪುರುಷೋತ್ತಮ ಮಲ್ಯ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ದೀಪಕ ನಾಯಕ ಮಾರ್ಗದರ್ಶನ, ಹೆಸ್ಕಾಂ ಶಾಖಾಧಿಕಾರಿ ರಾಹುಲ್ ನೇತೃತ್ವ ಹಾಗೂ ಶಾಖಾಧಿಕಾರಿ ಉದಯ ಸಹಕಾರದೊಂದಿಗೆ ವಿದ್ಯುತ್ ತಂತಿ ಮೇಲೆ ಬಿದ್ದ ಮರದ ಟೊಂಗೆಯನ್ನು ತೆರವುಗೊಳಿಸಿದ್ದಾರೆ.
ರಿವರ್ ರ‍್ಯಾಪ್ಟಿಂಗ್ ಮೂಲಕ ನದಿಯ ನಡುಗಡ್ಡೆ ಪ್ರದೇಶಕ್ಕೆ ತೆರಳಿ ತಂತಿ ಮೇಲೆ ಬಿದ್ದಿದ್ದ ಟೊಂಗೆಯನ್ನು ತೆರವುಗೊಳಿಸಿದ್ದಾರೆ. ಹೆಸ್ಕಾಂ ಸಿಬ್ಬಂದಿಗೆ ದಾಂಡೇಲಿಯ ಜಂಗಲ್ ಲಾಡ್ಜಸ್ ಮತ್ತು ಪ್ರವಾಸೋದ್ಯಮಿ ವಿಷ್ಣುಮೂರ್ತಿ ರಾವ್ ಹಾಗೂ ರಿವರ್ ರ‍್ಯಾಪ್ಟಿಂಗ್ ತಂಡದವರು ಸಾಥ್ ನೀಡಿದರು.
ಇದನ್ನೂ ಓದಿ:ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಸಮಸ್ಯೆ: ಬೇಕಿದೆ ಶಾಶ್ವತ ಪರಿಹಾರ - Mangaluru Bengaluru Train