ಹಾವೇರಿ :ಕಬ್ಬಿನ ಬಾಕಿ ಹಣಕ್ಕಾಗಿ ಸಂಗೂರು ಸಕ್ಕರೆ ಕಾರ್ಖಾನೆಗೆ ರೈತರು ಬೀಗ ಹಾಕಿ ಪ್ರತಿಭಟನೆ ನಡೆಸಿದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ, ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ. ಜಿ.ಎಂ ಶುಗರ್ಸ್ ಕಂಪನಿ ಮಾಲೀಕರಾದ ಜಿ.ಎಂ ಲಿಂಗರಾಜ್ ಪ್ರತಿಭಟನೆ ನಡೆಸಿದ ರೈತರ ಖಾತೆಗೆ ಕಬ್ಬಿನ ಬಾಕಿ ಹಣ ಜಮಾ ಮಾಡಿದ್ದಾರೆ.
ಮೊದಲ ಹಂತದಲ್ಲಿ ಸುಮಾರು ಮೂರೂವರೆ ಕೋಟಿ ರೂಪಾಯಿ ಬಾಕಿ ಹಣ ಪಾವತಿ ಮಾಡಿದ್ದಾರೆ. ಶುಕ್ರವಾರ ಸಹ ರೈತರ ಖಾತೆಗೆ ಎರಡು ಕೋಟಿ ರೂಪಾಯಿ ಹಣ ಜಮಾ ಮಾಡಲಿದ್ದಾರೆ. ಅಲ್ಲದೇ, ಮುಂಬರುವ ಒಂದು ವಾರದೊಳಗೆ ಕಾರ್ಖಾನೆಗೆ ಕಬ್ಬು ಪೊರೈಸಿದ ಎಲ್ಲ ರೈತರ ಬಾಕಿ ಹಣ ನೀಡುವುದಾಗಿ ಜಿ.ಎಂ ಶುಗರ್ಸ್ ಕಂಪನಿ ಹೇಳಿದೆ ಎಂದು ಹಾವೇರಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘಧ ಜಿಲ್ಲಾಧ್ಯಕ್ಷ ಭುವನೇಶ್ವರ್ ಶಿಡ್ಲಾಪುರ ತಿಳಿಸಿದ್ದಾರೆ.
ಹಾವೇರಿ ತಾಲೂಕು ಸಂಗೂರು ಸಕ್ಕರೆ ಕಾರ್ಖಾನೆಯನ್ನು ದಾವಣಗೆರೆ ಮೂಲದ ಜಿ.ಎಂ ಶುಗರ್ಸ್ ಕಂಪನಿ 30 ವರ್ಷಗಳ ಕಾಲ ಗುತ್ತಿಗೆ ಪಡೆದಿದೆ. ಪ್ರಸ್ತುತ ವರ್ಷ 3 ಲಕ್ಷ 60 ಸಾವಿರ ಟನ್ ಕಬ್ಬು ನುರಿಸಿದೆ. ಅದರಲ್ಲಿ ಕೇವಲ 80 ಟನ್ ಕಬ್ಬಿಗೆ ಮಾತ್ರ ಹಣ ಪಾವತಿಸಿತ್ತು. ಆದರೆ, ಕಳೆದ ವರ್ಷ ಡಿಸೆಂಬರ್ 13 ರವರೆಗೆ ಕಬ್ಬು ಪೂರೈಸಿದ ರೈತರಿಗೆ ಕಂಪನಿ ಹಣ ನೀಡಿತ್ತು. ಮುಂದೆ ಕಬ್ಬು ಪೂರೈಸಿದ ರೈತರಿಗೆ ಹಣ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಬುಧವಾರ ಸಂಗೂರು ಸಕ್ಕರೆ ಕಾರ್ಖಾನೆಯ ಸೌಹಾರ್ದ ಬ್ಯಾಂಕ್ ಮತ್ತು ಪ್ರಮುಖ ಗೇಟ್‌ಗಳಿಗೆ ಬೀಗ ಹಾಕಿದ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.