ಬೆಂಗಳೂರು: ವರ್ಷಾಂತ್ಯದ ವೇಳೆಗೆ ಬಾಹ್ಯಾಕಾಶಕ್ಕೆ ಮೂವರು ಬಾಹ್ಯಾಕಾಶಯಾನಿಗಳನ್ನು ಒಳಗೊಂಡಂತೆ ಗಗನಯಾನ ಉಡಾವಣೆಗೆ ಸಿದ್ಧವಾಗಿದೆ. ನಾಸಾದ ಸ್ಟಾರ್ ಲೈನರ್ ಬಾಹ್ಯಾಕಾಶದಲ್ಲಿರುವಂತಹ ಸ್ಥಿತಿ ಬಾರದಂತೆ ಎಚ್ಚರಿಕೆಯಿಂದ ಮುಂದುವರಿಯುವ ಅಗತ್ಯವಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ.
ನಗರದ ಹೊರವಲಯದಲ್ಲಿ ನಡೆದ ಬೆಂಗಳೂರು ಸ್ಪೇಸ್ ಎಕ್ಸ್ ಪೋಗೆ ಭೇಟಿ ನೀಡಿ ಮಾತನಾಡಿದ ಅವರು, ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ ಯೋಜನೆ ಅನ್ವಯ ಗಗನಯಾನ ಭಾರತದ ಮೊದಲ ಮಾನವ ಮಿಷನ್ ಆಗಿರಲಿದೆ. ಕೇಂದ್ರ ಸಂಪುಟ ಅನುಮೋದಿಸಿದ ನಾಲ್ಕು ಯೋಜನೆಗಳಲ್ಲಿ ವೀನಸ್ ಆರ್ಬಿಟರ್ ಮಿಷನ್ ಸಹ ಸೇರಿದ್ದು, ಅದಕಾಗ್ಕಿ 1,236 ಕೋಟಿ ಮೀಸಲಿಡಲಾಗಿದೆ ಎಂದರು.
ಈ ವರ್ಷದ ಜೂನ್ 5 ರಂದು ನಾಸಾದಿಂದ ಉಡಾವಣೆಗೊಂಡ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಸೆಪ್ಟೆಂಬರ್ 7 ರಂದು ಭೂಮಿಗೆ ಗಗನಯಾತ್ರಿಗಳಿಲ್ಲದೇ ಮರಳಿತು. ಅವರನ್ನು ಮತ್ತೆ ಭೂಮಿಗೆ ಕರೆತರಲು 2025ರ ಫೆಬ್ರವರಿಯಲ್ಲಿ ದಿನಾಂಕವನ್ನು ನಿಗದಿಪಡಿಸಲಾಗಿದೆ. ನಮ್ಮ ಯಾನ ಆ ರೀತಿ ಆಗದಂತೆ ಎಚ್ಚರವಹಿಸುವ ಅಗತ್ಯವಿದೆ ಎಂದು ಹೇಳಿದರು.