ದಾವಣಗೆರೆ: ಯೂನಿಟೆಡ್ ಟೆಕ್ನಾಲಜಿ ಎಂಬ ಖಾಸಗಿ ಕಂಪನಿ ಹೆಸರಿನಲ್ಲಿ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಬಗ್ಗೆ ಟಿಪ್ಸ್ ಹೇಳಿ ಕೊಡುತ್ತೇವೆ ಎಂದು ನಂಬಿಸಿ ವಂಚಿಸುತ್ತಿದ್ದ ಇಬ್ಬರನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಸಂದೀಪ್ ಕುಮಾರ್ (30), ಮುರುಳಿ ಎಲ್ (25) ಬಂಧಿತರು. ಈ ಇಬ್ಬರು ಬೆಂಗಳೂರಿನ ಚೂಡಸಂದ್ರ ನಿವಾಸಿಗಳೆಂದು ತಿಳಿದುಬಂದಿದೆ.
ದಾವಣಗೆರೆಯ ಸರ್ಕಲ್ ದಾವಲ್ ಪೇಟೆಯ ನಿವಾಸಿ ರಾಜೇಶ್ ಎ ಪಾಲಂಕರ್ ದೂರು ನೀಡಿದ ಬೆನ್ನಲ್ಲೇ ಈ ಇಬ್ಬರನ್ನು ಬಂಧಿಸಲಾಗಿದೆ. 2023ರ ನವೆಂಬರ್ 7ರಂದು ದೂರುದಾರ ರಾಜೇಶ್ ಎ ಪಾಲಂಕರ್ ಅವರಿಗೆ ಬಂಧಿತರು ಕರೆ ಮಾಡಿ, ನಾವು ಖಾಸಗಿ (ಯೂನಿಟೆಡ್ ಟೆಕ್ನಾಲಜಿ) ಕಂಪನಿಯಿಂದ ಕರೆ ಮಾಡುತಿದ್ದೇವೆ ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಬಗ್ಗೆ ಟಿಪ್ಸ್ ಹೇಳಿ ಕೊಡುತ್ತೇವೆ ಎಂದು ನಂಬಿಸಿದ್ದಾರೆ.
ನಂತರ, ನೀವು ನಾವು ಕೊಡುವ ಟಿಪ್ಸ್ ಉಪಯೋಗಿಸಿಕೊಂಡು ಹೆಚ್ಚು ಲಾಭಾಂಶ ಗಳಿಸಬಹುದು ಎಂದು ನಂಬಿಸಿ 30,000 ರೂಪಾಯಿಯನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದರು. ರಾಜೇಶ್ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 86/2023 ಕಲಂ: 66 (ಸಿ), 66 (ಡಿ) ಐ.ಟಿ ಆ್ಯಕ್ಟ್ 419, 420 ಐಪಿಸಿ ಪ್ರಕರಣ ದಾಖಲಿಸಿದ್ದರು.