ಬತ್ತಿದ ನದಿಗೆ ಕೊಳವೆ ಬಾವಿಯಿಂದ ನೀರು ಹಾವೇರಿ:ಹಾವೇರಿ ತಾಲೂಕಿನ ಸಂಗೂರು ಗ್ರಾಮದ ರೈತರೊಬ್ಬರು ತಾನು ನೀರು ಪಡೆದ ನದಿಗೆ ತನ್ನ ಜಮೀನಿನಲ್ಲಿರುವ ಕೊಳವೆ ಬಾವಿಯಿಂದ ನೀರು ಹರಿಸುತ್ತಿದ್ದಾರೆ. ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆಯಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
"ಇಷ್ಟು ದಿನ ಈ ವರದಾ ನದಿಯಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಬಳಕೆ ಮಾಡಿಕೊಂಡಿದ್ದೇನೆ. ಆದರೆ ಈಗ ನದಿಯೊಡಲು ಖಾಲಿಯಾಗಿದೆ. ಕಾಡುಪ್ರಾಣಿಗಳು, ದನಕರುಗಳಿಗೆ ನೀರಿಲ್ಲದಂತಾಗಿದೆ. ಜನ, ಜಾನುವಾರುಗಳಿಗೆ ನೀರುಣಿಸುವುದು ನನ್ನ ಕರ್ತವ್ಯ" ಎಂದು ಸಂಗೂರು ಗ್ರಾಮದ ರೈತ ಭುವನೇಶ್ವರ ಶಿಡ್ಲಾಪುರ ಹೇಳಿದರು.
ಇವರು ಕಳೆದ 10 ದಿನದಿಂದ ಜಮೀನಿನ ಪಕ್ಕದಲ್ಲಿರುವ ನದಿಗೆ ಕೊಳವೆ ಬಾವಿಯಿಂದ ನೀರು ಹರಿಸುತ್ತಿದ್ದಾರೆ. ಇವರ ಜಮೀನಿನಲ್ಲಿ ಒಟ್ಟು ಮೂರು ಕೊಳವೆ ಬಾವಿಗಳಿವೆ. ಈ ಕೊಳವೆ ಬಾವಿಗಳಲ್ಲಿ ಭರಪೂರ ನೀರು ಬರುತ್ತಿದೆ. ಕೆಲ ದಿನದ ಹಿಂದಷ್ಟೇ ನದಿ ಸಮೀಪ ಒಂದು ಕೊಳವೆ ಬಾವಿ ಕೊರೆಸಿದ್ದು ಅದರಲ್ಲೂ ಒಳ್ಳೆಯ ಪ್ರಮಾಣದಲ್ಲಿ ನೀರು ಸಿಕ್ಕಿದೆ.
ಹೀಗಾಗಿ ಹೊಸ ಕೊಳವೆ ಬಾವಿಯ ನೀರನ್ನು ನದಿಗೆ ಬಿಟ್ಟಿದ್ದಾರೆ. ರೈತ ನೀರು ಬಿಟ್ಟ ಜಾಗದಲ್ಲಿ ಸಣ್ಣ ಹೊಂಡವೂ ನಿರ್ಮಾಣವಾಗಿದೆ. ಸಂಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು ಇಲ್ಲಿಯೇ ಜಾನುವಾರುಗಳಿಗೆ ನೀರುಣಿಸುತ್ತಿದ್ದಾರೆ. ಬಿಸಿಲ ತಾಪದಿಂದ ಕಂಗೆಟ್ಟ ಜಾನುವಾರುಗಳ ಮೈತೊಳೆಯುತ್ತಾರೆ. ಮಹಿಳೆಯರು ಗ್ರಾಮದಿಂದ ಇಲ್ಲಿಗೆ ಬಂದು ಬಟ್ಟೆ ಶುಚಿ ಮಾಡಿಕೊಂಡು ಹೋಗುತ್ತಿದ್ದಾರೆ. ಕುರಿಗಾಯಿಗಳೂ ತಮ್ಮ ಕುರಿಗಳಿಗೆ ನೀರು ಕುಡಿಸುತ್ತಾರೆ. ರೈತ ಭುವನೇಶ್ವರ ಈ ಕಾಯಕದಿಂದ ಈ ಭಾಗಕ್ಕೆ ಜೀವಕಳೆ ಬಂದಿದೆ.
"ಪ್ರಕೃತಿ ಮಾತೆಯ ಋಣ ನನ್ನ ಮೇಲಿದೆ. ಈ ವರ್ಷ ಎಂದೂ ಕಾಣದ ಬರಗಾಲವಿದೆ. ಜೀವಸಂಕುಲ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸ್ಥಿತಿಯಲ್ಲಿ ನಾನು ಪ್ರಕೃತಿಮಾತೆಯ ಋಣವನ್ನು ಸ್ವಲ್ಪಮಟ್ಟಿಗಾದರೂ ತೀರಿಸುವ ಕೆಲಸ ಮಾಡುತ್ತಿದ್ದೇನೆ. ನಾನು ಹರಿಸುವ ನೀರಿನಿಂದ ಜನ- ಜಾನುವಾರುಗಳು, ಕಾಡುಪ್ರಾಣಿಗಳ ನೀರಿನ ದಾಹ ತೀರಿದರೆ ಸಾಕು, ನನ್ನ ಶ್ರಮ ಸಾರ್ಥಕ."
"ನದಿಗೆ ದಿನದಲ್ಲಿ 6 ಗಂಟೆ ಮಾತ್ರ ನೀರು ಹರಿಸುತ್ತಿದ್ದೇನೆ. ಇದಕ್ಕೆ ಕಾರಣ ವಿದ್ಯುತ್ ಸಮಸ್ಯೆ. ದಿನದ 24 ಗಂಟೆಯಲ್ಲಿ ಕೇವಲ ಆರು ಗಂಟೆ ಮಾತ್ರ ವಿದ್ಯುತ್ ಪೂರೈಸಲಾಗುತ್ತಿದೆ. ಅದೂ ಕೂಡಾ ಹಗಲು ಮೂರು ತಾಸು ರಾತ್ರಿ ಮೂರು ತಾಸು. ಹೀಗಾಗಿ ದಿನಕ್ಕೆ ಕೇವಲ ಆರು ಗಂಟೆ ಮಾತ್ರವೇ ಕೊಳವೆ ಬಾವಿಯಿಂದ ನೀರು ಪೂರೈಸುತ್ತಿದ್ದೇನೆ. ಸರ್ಕಾರ ಹೆಚ್ಚು ವಿದ್ಯುತ್ ಪೂರೈಸಿದರೆ ಇನ್ನೂ ಹೆಚ್ಚು ನೀರನ್ನು ನದಿಗೆ ಬಿಡುತ್ತೇನೆ" ಎಂದು ರೈತ ಭುವನೇಶ್ವರ ಹೇಳಿದರು.
"ಭುವನೇಶ್ವರ ಅವರು ಬಿಟ್ಟಿರುವ ಕೊಳವೆ ಬಾವಿ ನೀರು ಚಿಕ್ಕ ಹೊಂಡದಲ್ಲಿ ಶೇಖರಣೆಯಾಗುತ್ತಿದ್ದು ರಾತ್ರಿ ವೇಳೆ ವನ್ಯಜೀವಿಗಳಾದ ಜಿಂಕೆ, ನವಿಲು ಸೇರಿದಂತೆ ವಿವಿಧ ಪ್ರಾಣಿ-ಪಕ್ಷಿಗಳು ತಮ್ಮ ದಾಹ ತೀರಿಸಿಕೊಳ್ಳುತ್ತಿವೆ. ನಮ್ಮ ನೀರಿನ ಬವಣೆಯೂ ಸ್ವಲ್ಪಮಟ್ಟಿಗೆ ನಿವಾರಣೆಯಾಗಿದೆ. ಸಂಗೂರು ಗ್ರಾಮದಲ್ಲಿ ಅಂತರ್ಜಲಮಟ್ಟ ಕುಸಿದಿದ್ದು, ಈ ನೀರಿನಿಂದ ಜಾನುವಾರುಗಳ ನೀರುಣಿಸುತ್ತಿದ್ದೇವೆ" ಎನ್ನುತ್ತಾರೆ ಗ್ರಾಮಸ್ಥರು.
ಇದನ್ನೂ ಓದಿ:ಬರದಲ್ಲೂ ಜಲಕ್ರಾಂತಿ: 'ಆಧುನಿಕ ಭಗೀರಥ' ಶಿವಾಜಿ ಕಾಗಣಿಕರ್ ಪರಿಶ್ರಮಕ್ಕೆ ಭರಪೂರ ನೀರು - Belagavi Water Revolution