ಬೆಂಗಳೂರು: ''ಯೋಗೇಶ್ವರ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿಗೆ ಹುಳಿ ಹಿಂಡಲು ಕೆಲ ಬಿಜೆಪಿಗರು ಕಾಂಗ್ರೆಸ್ ಜೊತೆ ಶಾಮೀಲಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಹಾಳು ಮಾಡುವ ಹುನ್ನಾರ ನಡೆದಿದೆ. ಸಿ.ಪಿ.ಯೋಗೇಶ್ವರ್ ಅವರು ಮೇಲೆ ಇದ್ದಾರೆ. ಅವರ ಬಗ್ಗೆ ನಾನೇನು ಚರ್ಚೆ ಮಾಡಲಿ'' ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಭಾನುವಾರ ಸಂಜೆ ಮಂಡ್ಯ ಜಿಲ್ಲೆಯಿಂದ ಮರಳಿದ ಬಳಿಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು. ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿಯಾಗಿ ಯೋಗೇಶ್ವರ್ಗೆ ಜೆಡಿಎಸ್ ಚಿಹ್ನೆ ಅಡಿ ನಿಲ್ಲಿಸಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿ, ''ಅವರು ಏನು ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಎಲ್ಲವನ್ನೂ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇನೆ. ಅವರು ಬೇರೆ ಬೇರೆ ಪಕ್ಷಗಳ ಮುಖಂಡರ ಜೊತೆ, ಪಕ್ಕದ ಮದ್ದೂರು ಕ್ಷೇತ್ರದ ಶಾಸಕರ ಜೊತೆಯೂ ಸಂಪರ್ಕದಲ್ಲಿದ್ದಾರೆ ಅಂತ ಚರ್ಚೆ ನಡೆಯುತ್ತಿದೆ. ಎಲ್ಲವನ್ನೂ ಬಿಜೆಪಿ ವರಿಷ್ಠರು ಗಮನಿಸುತ್ತಿದ್ದಾರೆ'' ಎಂದು ಹೇಳಿದರು.
ಇನ್ನೂ ನಿರ್ಧಾರ ಮಾಡಿಲ್ಲ:''ಚನ್ನಪಟ್ಟಣ ವಿಚಾರವಾಗಿ ಅಭ್ಯರ್ಥಿ ಘೋಷಣೆ ಬಾಕಿ ಇದೆ. ಈಗಾಗಲೇ ಬಿಜೆಪಿ ವರಿಷ್ಠ ನಾಯಕರೇ ಹಲವು ಬಾರಿ ಹೇಳಿದ್ದಾರೆ. ನೀವು ಪ್ರತಿನಿಧಿಸುತ್ತಿರುವ ಕ್ಷೇತ್ರದ ಬಗ್ಗೆ ನೀವೇ ಅಂತಿಮ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದಾರೆ. ಚನ್ನಪಟ್ಟಣ ಜೆಡಿಎಸ್ ಸ್ಪರ್ಧಿಸಿರುವ ಕ್ಷೇತ್ರ ಎನ್ನುವುದು ಅವರಿಗೆ ಗೊತ್ತಿದೆ. ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಚನ್ನಪಟ್ಟಣದಲ್ಲಿ ನಾವು ಘೋಷಣೆ ಮಾಡುತ್ತೇವೆ. ಚನ್ನಪಟ್ಟಣ ವಿಚಾರದಲ್ಲಿ ಇನ್ನೂ ನಾವು ಯಾವುದೇ ನಿರ್ಧಾರ ಮಾಡಿಲ್ಲ'' ಎಂದರು.
ನನ್ನ ವರ್ಚಸ್ಸು ಕುಗ್ಗಿಸುವ ಹುನ್ನಾರ:''ಕಾಂಗ್ರೆಸ್ ನಾಯಕರಲ್ಲಿ ಏನಾದರೂ ಮಾಡಿ ಕುಮಾರಸ್ವಾಮಿ ವರ್ಚಸ್ಸು ಕುಗ್ಗಿಸಬೇಕು ಅನ್ನುವುದು ಕೆಲವರ ಉದ್ದೇಶ. ನಾನು ಎಲ್ಲಾ ಬಿಜೆಪಿ ನಾಯಕರ ಬಗ್ಗೆ ಹೀಗೆ ಹೇಳುತ್ತಿಲ್ಲ. ಕೆಲವರಿಗೆ ಈ ಮೈತ್ರಿಯನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತಿದೆ'' ಎಂದು ದೂರಿದರು.
''ಮೈತ್ರಿಯನ್ನು ಹಾಳು ಮಾಡಲು ಕೆಲವರು ಹೀಗೆ ಮಾಡುತ್ತಿರಬಹುದು. ನನ್ನ ಗಮನಕ್ಕೂ ಹಲವಾರು ವಿಚಾರಗಳು ಬರುತ್ತಿವೆ. ಯೋಗೇಶ್ವರ್ ಅವರು ಉಪ ಮುಖ್ಯಮಂತ್ರಿಯನ್ನು ಈಗಾಗಲೇ ಎರಡು ಬಾರಿ ಭೇಟಿ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಅವರು ಏತಕ್ಕೆ ಭೇಟಿ ಮಾಡಿದ್ದರು ಎಂಬುದು ನನಗೆ ಬೇಕಿಲ್ಲ'' ಎಂದು ಹೇಳಿದರು.
ಬಿಜೆಪಿಯ ಕೆಲವರು ಕಾಂಗ್ರೆಸ್ ಜೊತೆ ಶಾಮೀಲು:''ಬಿಜೆಪಿಯಲ್ಲಿ ಇರುವಂತಹ ಕೆಲವೇ ಕೆಲವರು ಕುಮಾರಸ್ವಾಮಿಗೆ ದೆಹಲಿಮಟ್ಟದಲ್ಲಿ ಉತ್ತಮ ಬಾಂಧವ್ಯ ಇದೆ. ಹೀಗಾಗಿ, ಅವರಿಗೆ ಏನಾದರೂ ಸಮಸ್ಯೆ ಉದ್ಭವ ಮಾಡಬೇಕು ಎನ್ನುವ ಕಾರಣಕ್ಕೆ ಇಂತಹ ಪ್ರಕರಣಗಳನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಅಂತ ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ. ಅದು ನನ್ನ ಕಿವಿಗೂ ಬಿದ್ದಿದೆ. ಬಿಜೆಪಿ - ಜೆಡಿಎಸ್ ಮೈತ್ರಿಗೆ ಹುಳಿ ಹಿಂಡುವವರು ಬಹಳಷ್ಟು ಜನ ಇದ್ದಾರೆ. ಒಟ್ಟಾರೆ ಕುಮಾರಸ್ವಾಮಿಯನ್ನು ಹಾಳು ಮಾಡಲು ಹೊರಟಿದ್ದಾರೆ. ಅವರ ಪ್ರಯತ್ನ ಫಲ ಕೊಡುವುದಿಲ್ಲ'' ಎಂದು ಕುಮಾರಸ್ವಾಮಿ ಕಿಡಿಕಾರಿದರು.