ಹಾವೇರಿ:ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದ 12 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಹಾವೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮುಂಬೈ ಮತ್ತು ಹೈದರಾಬಾದ್ ಕರ್ನಾಟಕದ 6 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ನನ್ನ ಸ್ಪಷ್ಟ ಅನಿಸಿಕೆ ಏನೆಂದರೆ ಈ ಭಾಗದ 12ಕ್ಕೆ 12 ಕಡೆಗಳಲ್ಲಿ ನಾವು ಗೆಲ್ಲುತ್ತೇವೆ ಎಂದರು.
ಗ್ಯಾರಂಟಿಗಳಿಂದ ನಮ್ಮ ಪಕ್ಷಕ್ಕೆ ಬಲ ಬಂದಿದ್ದೆ. ಈ ಹಿಂದೆ ಹೆಣ್ಣು ಮಕ್ಕಳು ಸಾಲ ಮಾಡಿ ಹಬ್ಬದ ಸಂತೆ ಮಾಡಲು ಬರುತ್ತಿದ್ದರು. ಈ ಬಾರಿ ಯಾರಾದರೂ ಸಾಲ ತೆಗೆದುಕೊಂಡಿರುವುದನ್ನು ನೋಡಿದ್ದೀರಾ?. ಇದು ಬಡತನವನ್ನು ನಿರ್ಮೂಲನೆ ಮಾಡಿರುವಂತ ರೀತಿ ಎಂದ ಅವರು, ಕುಮಾರಸ್ವಾಮಿ ಮಹಿಳೆಯರಿಗೆ ಕಳಂಕ ತರುವ ಹೇಳಿಕೆ ನೀಡಿದ್ದಾರೆ. ನೀವು ಹೆಣ್ಣು ಮಕ್ಕಳ ಪಾದ ಮುಟ್ಟಿ ಕ್ಷಮೆ ಕೇಳಬೇಕು, ಇಲ್ಲವೆಂದರೆ ನಿಮ್ಮ ರಾಜಕೀಯ ಭವಿಷ್ಯಕ್ಕೆ ಗಂಡಾಂತರವಿದೆ, ಅದು ಅಂತ್ಯಕ್ಕೂ ಬರಬಹುದು ಎಂದು ಹೆಚ್ ಕೆ ಪಾಟೀಲ್ ಹೇಳಿದರು.