ಬೆಂಗಳೂರು:''ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಮಂತ್ರಿಗಳು ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆಲ್ಲ ಜಗ್ಗುವ ಜಾಯಮಾನ ನನ್ನದಲ್ಲ. ಕೈ ನಾಯಕರ ಬೆದರಿಕೆಗೆ ಕೇರ್ ಮಾಡುವುದಿಲ್ಲ'' ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಯಾವುದೋ ಹಳೆಯ ಪ್ರಕರಣವನ್ನು ಕೆದಕಿ, ಸುಪ್ರೀಂ ಕೋರ್ಟ್ನಲ್ಲಿರುವ ಪ್ರಕರಣ ಇಟ್ಟುಕೊಂಡು ರಾಜ್ಯಪಾಲರನ್ನು ಅಪಮಾನಿಸುವ, ನನ್ನನ್ನು ಬ್ಲಾಕ್‌ಮೇಲ್ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ'' ಎಂದರು.
''ನನ್ನ ವಿರುದ್ಧ 2006ರಲ್ಲಿ ಗಣಿ ಆರೋಪ ಮಾಡಿದಾಗ ನಾನೊಬ್ಬನೇ ಎದುರಿಸಿದ್ದೆ. ಶಾಸಕರು, ಸಚಿವರನ್ನು ಅಡ್ಡ ಇಟ್ಟುಕೊಂಡು ರಕ್ಷಣೆ ಪಡೆಯುವ ಕೆಲಸ ಮಾಡಲಿಲ್ಲ. ಹೇಡಿತನ ಪ್ರದರ್ಶಿಸಲಿಲ್ಲ. ಧೈರ್ಯವಾಗಿ ಒಬ್ಬನೇ ಎದುರಿಸಿದೆ. ಶನಿವಾರದಿಂದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಕುಮಾರಸ್ವಾಮಿ ಮೇಲೆ ಏಕೆ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿಲ್ಲ ಎಂದು ಕೇಳುತ್ತಿದ್ದಾರೆ. 2006ರಲ್ಲಿ ನಾನು ಸಿಎಂ ಆದ ಎರಡೇ ತಿಂಗಳಿಗೆ ಗಣಿಗಾರಿಕೆ ಮಾಲೀಕರಿಂದ ಹಣ ಸಂಗ್ರಹ ಮಾಡಿದ್ದೇನೆ ಎಂದು ಆರೋಪ ಮಾಡಿದ್ದರು. ಅದರ ಬಗ್ಗೆ ಒಂದು ಸಿಡಿ ಮಾಡಲು ಸಿಡಿ ಶಿವು ಪ್ರಯತ್ನ ಮಾಡಿದ್ದರು. ವಿಧಾನಸಭೆ ಕಲಾಪಕ್ಕೆ ಬಂದು ಆಪರೇಷನ್ ಸಕ್ಸಸ್ ಎಂದು ಹೇಳಿದ್ದರು. ನನ್ನ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ನಡೆಯಿತು. ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆಯಿತು. ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದೆ. ಸಿದ್ದರಾಮಯ್ಯ ಅವರಿಗೆ ಇದು ನೆನಪಿದೆಯಾ'' ಎಂದು ಪ್ರಶ್ನಿಸಿದರು.