ಮುಂಬೈ (ಮಹಾರಾಷ್ಟ್ರ): ಈಗಷ್ಟೇ ಮುಗಿದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯು ಭರ್ಜರಿ ಗೆಲುವು ಸಾಧಿಸಿದೆ. ನೂತನ ಸರ್ಕಾರದ ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಅವರು ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ಶಿವಸೇನೆ ನಾಯಕ ಏಕನಾಥ್ ಶಿಂಧೆ, ಎನ್ಸಿಪಿಯ ಅಜಿತ್ ಪವಾರ್ ರೇಸ್ನಲ್ಲಿದ್ದಾರೆ. ಇತ್ತೀಚೆಗಿನ ಮಾಹಿತಿಯ ಪ್ರಕಾರ, ಅಜಿತ್ ಪವಾರ್ ಅವರು ದೇವೇಂದ್ರ ಫಡ್ನವೀಸ್ ಅವರಿಗೆ ಬೆಂಬಲ ನೀಡಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಶಿಂಧೆ ಮತ್ತು ಫಡ್ನವೀಸ್ ನಡುವೆ ಯಾರ ಪಾಲಿಗೆ ಪಟ್ಟ ಒಲಿಯಲಿದೆ ಎಂಬುದು ಪ್ರಶ್ನೆಯಾಗಿದೆ.
ಅಜಿತ್ ಪವಾರ್ ಹೇಳಿದ್ದೇನು?: ಈ ಬಗ್ಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಾತನಾಡಿದ್ದು, ಮುಖ್ಯಮಂತ್ರಿ ಆಯ್ಕೆ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ. ಮಹಾಯುತಿ ಕೂಟದ ನಾಯಕನ ಘೋಷಿಸದೆ ಚುನಾವಣೆ ಎದುರಿಸಿ ಗೆದ್ದಿದ್ದೇವೆ. ಸಿಎಂ ಯಾರಾಗಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಮೂರೂ ಪಕ್ಷಗಳ ನಾಯಕರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಅಧಿಕಾರ ಹಂಚಿಕೆ ಸೂತ್ರ: ಇನ್ನೊಂದೆಡೆ, ಅಧಿಕಾರ ಹಂಚಿಕೆ ಸೂತ್ರದ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ. 5 ವರ್ಷದಲ್ಲಿ ಎರಡು ಸಿಎಂ ಇರಲಿದ್ದಾರೆ. ಮೊದಲ ಅವಧಿಯ ಎರಡೂವರೆ ವರ್ಷದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್, ಎರಡನೇ ಅವಧಿಯ ಎರಡೂವರೆ ವರ್ಷ ಏಕನಾಥ್ ಶಿಂಧೆ ಸಿಎಂ ಆಗಲಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಈ ಬಗ್ಗ್ಗೆ ಮಾತನಾಡಿದ್ದು, ಹೈಕಮಾಂಡ್ ಮಟ್ಟದಲ್ಲಿ ಸಿಎಂ ನಿರ್ಧಾರವಾಗಿಲ್ಲ. ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಚರ್ಚೆಯಾಗದ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಫಡ್ನವೀಸ್ ಅವರನ್ನು ಸಿಎಂ ಮಾಡಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ ಎಂದರು.
2-2-1 ಸೂತ್ರ: ಇನ್ನೊಂದೆಡೆ ಎನ್ಸಿಪಿ ನಾಯಕ ಅಜಿತ್ ಪವಾರ್ ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಲ್ಲಿ ಎರಡೂವರೆ ವರ್ಷಗಳ ಬದಲು 2-2-1 ವರ್ಷದ ಸೂತ್ರ ರಚಿಸುವ ಸಾಧ್ಯತೆಯ ಬಗ್ಗೆಯೂ ರಾಜಕೀಯ ವಲಯದಲ್ಲಿ ಚರ್ಚಿತವಾಗುತ್ತಿದೆ.
ಆದರೆ, ಈ ಬೇಡಿಕೆಯ ಬಗ್ಗೆ ಬಿಜೆಪಿ ನಿರಾಕರಿಸಿದೆ. ಹಿರಿಯ ಶಾಸಕ ಸುಧೀರ್ ಮುಂಗಂಟಿವಾರ್ ಈ ಸೂತ್ರವನ್ನು ತಿರಸ್ಕರಿಸಿದ್ದಾರೆ. ಇಂತಹ ಸೂತ್ರ ಯಾವುದೇ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮೂರೂ ಪಕ್ಷಗಳ ಹಿರಿಯ ನಾಯಕರು ಒಟ್ಟಾಗಿ ಚರ್ಚಿಸಿ ಹೊಸ ಮುಖ್ಯಮಂತ್ರಿಯನ್ನು ನಿರ್ಧರಿಸಲಿದ್ದಾರೆ. ಇದರಲ್ಲಿ ಯಾವುದೇ ತಕರಾರು ಇಲ್ಲ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆಯ ಜೆಪಿಸಿ ಕಾಲಾವಧಿ ವಿಸ್ತರಿಸಿ: ಸ್ಪೀಕರ್ ಓಂ ಬಿರ್ಲಾಗೆ ಸದಸ್ಯರ ಪತ್ರ