ಕರ್ನಾಟಕ

karnataka

ETV Bharat / state

ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಬಿಡುಗಡೆಗೆ ಪ್ರಧಾನಿ, ವಿತ್ತ ಸಚಿವರಿಗೆ ಸಿಎಂ ಪತ್ರ - CM SIDDARAMAIAH LETTER TO PM MODI

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರವು ನೆರವು ಬಿಡುಗಡೆ ಮಾಡುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ, ಕೇಂದ್ರ ವಿತ್ತ ಸಚಿವರು ಹಾಗೂ ಜಲಶಕ್ತಿ ಸಚಿವರಿಗೆ ಪತ್ರ ಬರೆದಿದ್ದಾರೆ.

CM SIDDARAMAIAH LETTER TO PM MODI
ನರೇಂದ್ರ ಮೋದಿ, ಸಿದ್ದರಾಮಯ್ಯ, ನಿರ್ಮಲಾ ಸೀತಾರಾಮನ್ (ETV Bharat)

By ETV Bharat Karnataka Team

Published : Jan 25, 2025, 10:28 PM IST

ಬೆಂಗಳೂರು:ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದಂತೆ 5,300 ಕೋಟಿ ರೂ. ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹಾಗೂ ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆದಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳ ಸುಮಾರು 2.25 ಲಕ್ಷ ಹೆಕ್ಟೇರ್ ಭೂ ಪ್ರದೇಶಕ್ಕೆ ಹನಿ ನೀರಾವರಿ ಒದಗಿಸಲಿದೆ. ಜೊತೆಗೆ 367 ಕೆರೆಗಳಿಗೆ ನೀರು ತುಂಬಿಸಲಿದೆ. 2008ರಲ್ಲಿ ಈ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈವರೆಗೆ 10,121.75 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಡಿ.24, 2020ರಂದು ಭದ್ರಾ ಮೇಲ್ದಂಡೆ ಯೋಜನೆಯ ತಾಂತ್ರಿಕ ಆರ್ಥಿಕ ಕಾರ್ಯಸಾಧುವನ್ನು ಜಲಶಕ್ತಿ ಸಚಿವಾಲಯದ ಸಲಹಾ ಸಮಿತಿ ಅನುಮೋದಿಸಿದೆ. 2021 ಮಾರ್ಚ್​​​ನಲ್ಲಿ 15ನೇ ಬಂಡವಾಳ ಮಂಜೂರಾತಿ ಸಮಿತಿ 16,125 ಕೋಟಿ ರೂ. ಮೊತ್ತದ ಹೂಡಿಕೆಗೆ ಅನುಮೋದನೆ ನೀಡಿದೆ. ಜೊತೆಗೆ, ಉನ್ನತ ಮಟ್ಟದ ಸಂಚಲನಾ ಸಮಿತಿ ಈಗಾಗಲೇ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಶಿಫಾರಸು ಮಾಡಿದೆ ಎಂದು ಸಿಎಂ ತಿಳಿಸಿದ್ದಾರೆ.

2023-24ರ ಕೇಂದ್ರ ಬಜೆಟ್ ಭಾಷಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೇಂದ್ರ ಆರ್ಥಿಕ ನೆರವು ನೀಡುವ ಘೋಷಣೆ ಮಾಡಿತ್ತು. ಆದರೆ, ಈಗಾಗಲೇ ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡುವುದು ವಿಳಂಬವಾಗಿದೆ. ಕೇಂದ್ರ ಆರ್ಥಿಕ ನೆರವನ್ನು ಬಿಡುಗಡೆ ಮಾಡದೇ ಇರುವ ಕಾರಣ ಯೋಜನೆಯ ಪ್ರಗತಿ ಕುಂಠಿತವಾಗಿದೆ. ಯೋಜನೆಯ ಕಾಮಗಾರಿ ಪ್ರಗತಿ ತ್ವರಿತಕ್ಕಾಗಿ 5,300 ಕೋಟಿ ರೂ. ಕೇಂದ್ರದ ನೆರವನ್ನು ಬಿಡುಗಡೆ ಮಾಡುವುದು ಅಗತ್ಯವಾಗಿದೆ ಎಂದು ಮನವಿ ಮಾಡಿದ್ದಾರೆ.

ಕರ್ನಾಟಕದ ಕೇಂದ್ರ ಭಾಗದಲ್ಲಿ ಮಳೆ ಕೊರತೆಯಾಗಿರುವ ಕಾರಣ ರೈತರಿಗೆ ತೀವ್ರ ನೀರಿನ ಕ್ಷಾಮ ಎದುರಾಗಿದೆ. ಈ ಹಿನ್ನೆಲೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಅಗತ್ಯ ಇದೆ. ಹೀಗಾಗಿ, ಸಂಬಂಧಿತ ಇಲಾಖೆಗಳಿಗೆ 5,300 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಸೂಚನೆ ನೀಡಬೇಕು. ಜೊತೆಗೆ, ಈ ಸಂಬಂಧ 2025-26ರ ಕೇಂದ್ರ ಬಜೆಟ್​​ನಲ್ಲಿ ಹಣ ಮೀಸಲಿಡುವಂತೆ ಸಿಎಂ ಕೋರಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ ಯೋಜನೆಗಳಿಗೆ ಬಜೆಟ್​​ನಲ್ಲಿ​ ಅನುದಾನ ನೀಡುವಂತೆ ನಿರ್ಮಲಾ ಸೀತಾರಾಮನ್​ಗೆ ಡಿಸಿಎಂ ಡಿಕೆಶಿ ಪತ್ರ

ABOUT THE AUTHOR

...view details