ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ- 2024 ಅನ್ನು ಚರ್ಚಿಸಿ ಪರಿಷ್ಕರಣೆಗೆ ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿಯು (ಜೆಪಿಸಿ) ಹಲವು ಸಭೆಗಳ ನಂತರ ಇಂದು (ಜನವರಿ 27) 14 ತಿದ್ದುಪಡಿಗಳನ್ನು ಒಪ್ಪಿ ಕರಡು ಮಸೂದೆಗೆ ಅನುಮೋದನೆ ನೀಡಿದೆ.
ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯರು ಪ್ರಸ್ತಾಪಿಸಿದ ಎಲ್ಲ ತಿದ್ದುಪಡಿಗಳನ್ನು ಅಂಗೀಕರಿಸಲಾಗಿದೆ. ಆದರೆ, ವಿರೋಧ ಪಕ್ಷಗಳು ಪ್ರಸ್ತಾಪಿಸಿದ ಯಾವುದೇ ಬದಲಾವಣೆಯನ್ನು ಪರಿಗಣಿಸಿಲ್ಲ ಎಂದು ಸಮಿತಿಯಲ್ಲಿದ್ದ ವಿಪಕ್ಷ ಸದಸ್ಯರು ಆರೋಪಿಸಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸಲು ರಚಿಸಲಾದ ಜೆಪಿಸಿಯು, ವಿರೋಧ ಪಕ್ಷದ ಸಂಸದರು ಸೇರಿದಂತೆ ಇತರರು ಸೂಚಿಸಿದ್ದ ಒಟ್ಟು 44 ತಿದ್ದುಪಡಿಗಳಲ್ಲಿ 14 ಬದಲಾವಣೆಗೆ ಅನುಮೋದನೆ ಸಿಕ್ಕಿದೆ ಎಂದು ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಈ ತಿದ್ದುಪಡಿಗಳು ಕಾನೂನಿಗೆ ಮತ್ತಷ್ಟು ಬಲ ನೀಡುತ್ತವೆ ಎಂಬ ಆಶಯವಿದೆ. ಸಮಿತಿಯು ಹಲವು ಸಭೆ ನಡೆಸಿ ಸುದೀರ್ಘ ಚರ್ಚೆ ನಡೆಸಿದೆ. 14 ತಿದ್ದುಪಡಿಗಳನ್ನು ಬಹುಮತದ ಆಧಾರದ ಮೇಲೆ ಅನುಮೋದಿಸಲಾಗಿದೆ. ಪರವಾಗಿ 16, ವಿರುದ್ಧವಾಗಿ 10 ಸದಸ್ಯರು ಮತ ಹಾಕಿದ್ದಾರೆ ಎಂದು ತಿಳಿಸಿದರು.6 ತಿಂಗಳಲ್ಲಿ ನಡೆದ 34 ಸಭೆಗಳಲ್ಲಿ 44 ತಿದ್ದುಪಡಿಗಳಿಗೆ ಸಮಿತಿಯು ಸೂಚಿಸಿತ್ತು. ಇಂದು ಕೊನೆಯ ಸಭೆ ನಡೆಸಲಾಯಿತು. ಎಲ್ಲ ಸದಸ್ಯರು ಸೂಚಿಸಿದ ಬದಲಾವಣೆಗಳನ್ನು ಮತಕ್ಕೆ ಹಾಕಲಾಯಿತು. ಅದರಲ್ಲಿ 14 ಕ್ಕೆ ಮಾತ್ರ ಬಹುಮತ ಸಿಕ್ಕಿದೆ. ಅವುಗಳನ್ನು ಸಮಿತಿಯು ಒಪ್ಪುವ ಮೂಲಕ ಮಸೂದೆಗೆ ಅನುಮೋದನೆ ನೀಡಲಾಯಿತು ಎಂದು ಅವರು ಹೇಳಿದರು.
ವಿಪಕ್ಷಗಳ ಅಪಸ್ವರ: ವಕ್ಫ್ ತಿದ್ದುಪಡಿ ಮಸೂದೆಯನ್ನು ಅನುಮೋದಿಸಿದ್ದಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಸಮಿತಿಯಲ್ಲಿನ ಎನ್‌ಡಿಎ ಸದಸ್ಯರು ಸೂಚಿಸಿದ ಬದಲಾವಣೆಗಳನ್ನು ಒಪ್ಪಲಾಗಿದೆ. ಆದರೆ, ವಿರೋಧ ಪಕ್ಷಗಳು ಸೂಚಿಸಿದ ಬದಲಾವಣೆಗಳನ್ನು ತಿರಸ್ಕರಿಸಲಾಗಿದೆ. ಸಮಿತಿಯು ಪ್ರಜಾಸತ್ತಾತ್ಮಕ ರೀತಿಯಲ್ಲಿ ಕಾರ್ಯನಿರ್ವಹಿಸಿಲ್ಲ ಎಂದು ಆರೋಪಿಸಿವೆ.
ಜನವರಿ 31 ರಂದು ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಕೇಂದ್ರದ ಎನ್‌ಡಿಎ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬಹುಮತ ಹೊಂದಿರುವುದರಿಂದ ಅಧಿವೇಶನದ ಮೊದಲಾರ್ಧದಲ್ಲಿಯೇ ವಿಧೇಯಕವನ್ನು ಅಂಗೀಕರಿಸಬಹುದು ಎಂದು ವಿಪಕ್ಷಗಳು ಹೇಳಿವೆ.
ಜೆಪಿಸಿ ಸೂಚಿಸಿದ ಒಟ್ಟು 14 ತಿದ್ದುಪಡಿಗಳನ್ನು ಅಂಗೀಕರಿಸಲು ಜನವರಿ 29 ರಂದು ಮತದಾನ ನಡೆಯಲಿದೆ. ಜನವರಿ 31 ರಂದು ಲೋಕಸಭೆಗೆ ಅಂತಿಮ ವರದಿಯನ್ನು ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.