ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಅಕ್ರಮವಾಗಿ ತಮ್ಮ ಕುಟುಂಬ ಸದಸ್ಯರಿಗೆ ನಿವೇಶನಗಳನ್ನು ಪಡೆದಿರುವ ಆರೋಪ ಸಂಬಂಧ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆದಲ್ಲಿ ಮಾತ್ರ ಸತ್ಯ ಹೊರಬರಲು ಸಾಧ್ಯ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಮಣೀಂದ್ರ ಸಿಂಗ್ ಹೈಕೋರ್ಟ್ನಲ್ಲಿ ವಾದ ಮಂಡಿಸಿದರು.
ಹಲವು ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡನೆ: ಸಿಬಿಐ ಇಲ್ಲವೇ ಯಾವುದಾದರೂ ಸ್ವಾತಂತ್ರ್ಯ ಸಂಸ್ಥೆಯಿಂದ ಮುಡಾ ಹಗರಣ ತನಿಖೆ ನಡೆಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸ್ನೇಹಮಯಿ ಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಮಣೀಂದ್ರ ಸಿಂಗ್, ಸುಪ್ರೀಂಕೋರ್ಟ್ ಹಲವು ಪ್ರಕರಣಗಳನ್ನು ಉಲ್ಲೇಖಿಸಿ, ಈ ರೀತಿಯ ಪ್ರಕರಣಗಳು ಸಾರ್ವಜನಿಕ ಹಿತದೃಷ್ಠಿಯಿಂದ ಕೂಡಿದ್ದು, ಸ್ವಾತಂತ್ರ್ಯ ಸಂಸ್ಥೆಯಿಂದ ತನಿಖೆ ನಡೆಸುವುದು ಅತ್ಯಗತ್ಯವಾಗಿದೆ. ಆರೋಪಿಗಳು ಯಾವ ರೀತಿಯ ತನಿಖೆ ನಡೆಸಬೇಕು ಎಂಬುದನ್ನು ಪ್ರಶ್ನೆ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಪೀಠಕ್ಕೆ ವಿವರಿಸಿದರು.
ಪೀಠ ತನ್ನ ವಿವೇಚನಾಧಿಕಾರ ಬಳಸಿಕೊಳ್ಳಬೇಕು ಎಂದು ಮನವಿ: ಸರ್ಕಾರದ ಪ್ರಮುಖ ಸ್ಥಾನದಲ್ಲಿರುವವರ ವಿರುದ್ಧ ತನಿಖೆ ನಡೆಸಬೇಕಾದಲ್ಲಿ ಸ್ವಾತಂತ್ರ್ಯ ತನಿಖೆ ನಡೆಸಬೇಕಾಗಿದೆ. ಅಂತಹ ಹುದ್ದೆಯಲ್ಲಿರುವವರ ವಿರುದ್ಧ ಪ್ರಕರಣಗಳನ್ನು ಅವರ ಅಧೀನದಲ್ಲಿರುವವರು ಅಧಿಕಾರಿಗಳು ತನಿಖೆ ನಡೆಸಿದಲ್ಲಿ ಪಾರದರ್ಶಕವಾಗಿರುವುದಿಲ್ಲ. ಅಲ್ಲದೆ, ತನಿಖಾಧಿಕಾರಿಗಳ ವಿರುದ್ಧ ಸಂಶಯಕ್ಕೂ ಕಾರಣವಾಗಲಿದ್ದು, ಸತ್ಯಾಂಶ ಹೊರ ಬರುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಪ್ರಕರಣ ಸ್ವಾತಂತ್ರ್ಯ ತನಿಖೆಗೆ ವಹಿಸಬೇಕು. ಹೀಗಾಗಿ ನ್ಯಾಯಪೀಠ ವಿವೇಚನೆ ಬಳಸಬೇಕು ಎಂದು ಅವರು ಪೀಠಕ್ಕೆ ಮನವಿ ಮಾಡಿದರು.
ನಾವು ಇಂತಹುದ್ದೇ ತನಿಖೆ ಎಂದು ಹೇಳುತ್ತಿಲ್ಲ: ಅಲ್ಲದೆ, ನಮ್ಮ ಕಕ್ಷಿದಾರರು ಇಂತಹದ್ದೇ ಏಜೆನ್ಸಿಗೆ ತನಿಖೆ ವಹಿಸಬೇಕು ಎಂದು ಆಯ್ಕೆ ಮಾಡಿಕೊಂಡಿಲ್ಲ. ಸಿಬಿಐ ಇಲ್ಲವೇ ಇತರೆ ಯಾವುದೇ ಸ್ವತಂತ್ರ ತನಿಖೆಗೆ ಕೋರುತ್ತಿದ್ದೇವೆ. ಸರ್ಕಾರದ ಸಚಿವಾಲಯವೇ ಮುಖ್ಯಮಂತ್ರಿಗಳನ್ನು ಸಮರ್ಥನೆ ಮಾಡಿಕೊಳ್ಳಲು ನಿಂತಿತ್ತು. ಅಧಿಕಾರಿಗಳು ಇದನ್ನೇ ಅನುಸರಿಸಿದ್ದಾರೆ. ಹೀಗಾಗಿ ಕೆಲವು ಅಂಶಗಳು ಸ್ವಾತಂತ್ರ್ಯ ತನಿಖೆ ಅಗತ್ಯವವಿದೆ ಎಂಬ ಅಗತ್ಯವನ್ನು ನಿರ್ಮಾಣ ಮಾಡಿದೆ. ಅದು ಸಿಬಿಐ ನಿಂದ ತನಿಖೆ ನಡೆಸಿದರೆ ಮಾತ್ರ ಪಾರದರ್ಶಕವಾಗಲಿದೆ. ಹಗರಣದಲ್ಲಿ ಮುಖ್ಯಮಂತ್ರಿಗಳು, ಮತ್ತವರ ಕುಟುಂಬದ ಸದಸ್ಯರು ಭಾಗಿಯಾಗಿರುವುದರಿಂದ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕಾಗಿದೆ ಎಂದು ಅವರು ಪೀಠಕ್ಕೆ ವಿವರಿಸಿದರು.
ಇದನ್ನೂ ಓದಿ: ಮುಡಾ ಪ್ರಕರಣ: ಸಿಬಿಐ ತನಿಖೆ ಕೋರಿರುವ ಅರ್ಜಿ ವಿಚಾರಣೆ ಪೂರ್ಣ, ಆದೇಶ ಕಾಯ್ದಿರಿಸಿದ ಹೈಕೋರ್ಟ್
ಇದನ್ನೂ ಓದಿ: ಮುಡಾ ಪ್ರಕರಣ : ಪಾರ್ವತಿ ಸಿದ್ದರಾಮಯ್ಯ, ಸಚಿವ ಭೈರತಿ ಸುರೇಶ್‌ಗೆ ಇ.ಡಿ ಸಮನ್ಸ್ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ