ಕರ್ನಾಟಕ

karnataka

ETV Bharat / state

ಮೈಸೂರಲ್ಲಿ ಅಭ್ಯರ್ಥಿ ಇಲ್ಲವೆಂದು ಯಧುವೀರ್ ರನ್ನು ಬಿಜೆಪಿ ಕಣಕ್ಕಿಳಿಸಿದೆ: ಸಿಎಂ ಸಿದ್ದರಾಮಯ್ಯ - Mysuru Kodagu Loksabha Constituency

ಮೈಸೂರು- ಕೊಡಗು ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರನ್ನು ಕಣಕ್ಕಿಳಿಸಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Mar 18, 2024, 6:01 PM IST

ಮೈಸೂರಲ್ಲಿ ಅಭ್ಯರ್ಥಿ ಇಲ್ಲವೆಂದು ಯಧುವೀರ್ ರನ್ನು ಬಿಜೆಪಿ ಕಣಕ್ಕಿಳಿಸಿದೆ

ಬೆಂಗಳೂರು:ಮೈಸೂರು- ಕೊಡಗು ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿ ಇಲ್ಲ ಅಂತಾನೇ ಬಿಜೆಪಿಯವರು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರನ್ನು ಕಣಕ್ಕಿಳಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮೈಸೂರು-ಕೊಡಗು ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಬಗ್ಗೆ ಪ್ರತಿಕ್ರಿಯಿಸುತ್ತ, ಕಾಂಗ್ರೆಸ್​ನಲ್ಲಿ ಹೆಚ್ಚು ಅಭ್ಯರ್ಥಿಗಳು ಇರುವುದರಿಂದ ಆಯ್ಕೆ ಕಗ್ಗಂಟಾಗಿದೆ. ಒಂದೊಂದು ಕಡೆ ಮೂರು ನಾಲ್ಕು ಜನ ಟಿಕೆಟ್​ ಆಕಾಂಕ್ಷಿಗಳಿದ್ದಾರೆ. ಬಿಜೆಪಿಯವರು ಮೈಸೂರಿನಲ್ಲಿ ಇರೋ ಅಭ್ಯರ್ಥಿ ಬದಲಾವಣೆ ಮಾಡಿದ್ದಾರೆ. ಆಗ ಇವರಿಗೆ ಕ್ಯಾಂಡಿಡೇಟ್ ಇದ್ರಾ?. ಯದುವೀರ್ ಅವರನ್ನು ಈಗ ಸ್ಪರ್ಧೆ ಮಾಡಿಸಿದ್ದಾರೆ ಎಂದರು.

ಮೈಸೂರಿನಲ್ಲಿ ಯಧುವೀರ್ ರಾಜ ಸ್ಪರ್ಧೆ ಎಂಬ ಪ್ರಶ್ನೆಗೆ ಯಾರು ರಾಜಾ ಎಂದು ಪ್ರಶ್ನಿಸಿ ಸಿದ್ದರಾಮಯ್ಯ, ಅವರು ಬಿಜೆಪಿ ಅಭ್ಯರ್ಥಿ ಬಿಡಪ್ಪ. ನನಗೆ ಮೈಸೂರು ಮಾತ್ರ ಅಲ್ಲ. ಇಡೀ ರಾಜ್ಯವೇ ಸ್ವಕ್ಷೇತ್ರ. ನಾನು ಓದಿದ್ದು ಮೈಸೂರಿಲ್ಲಿ ಮಾತ್ರ. ಮೈಸೂರು ಜಿಲ್ಲೆಯ ಒಂದು ಹಳ್ಳಿಯವನು ಅಷ್ಟೇ. ಆದ್ರೆ 28 ಕ್ಷೇತ್ರಗಳೂ ನಮ್ಮವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸದಾನಂದ ಗೌಡ ನನ್ನನ್ನು ಸಂಪರ್ಕಿಸಿಲ್ಲ:ಮಾಜಿ ಸಿಎಂ ಡಿ.ವಿಸದಾನಂದ ಗೌಡರಿಗೆ ಕಾಂಗ್ರೆಸ್ ಸಂಪರ್ಕ ಮಾಡಿದೆ ಅನ್ನೋ ವಿಚಾರ ನನಗೆ ಗೊತ್ತಿಲ್ಲ. ಯಾರು ಸಂಪರ್ಕ ಮಾಡಿದ್ದಾರೋ ಅವರನ್ನೇ ಕೇಳಿ. ಸದಾನಂದ ಗೌಡ ನನ್ನ ಹೆಸರು ಹೇಳಿದ್ದರಾ?. ನನ್ನ ಸಂಪರ್ಕದಲ್ಲಿ ಅಂತೂ ಸದಾನಂದ ಗೌಡ ಇಲ್ಲ. ಕಾಂಗ್ರೆಸ್ ನಾಯಕರು ಯಾರನ್ನಾದ್ರೂ ಸಂಪರ್ಕ ಮಾಡಿರಬಹುದು. ನಾನು ಊಹಾಪೋಹದ ಪ್ರಶ್ನೆಗಳಿಗೆ ಉತ್ತರಿಸಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

20 ಸ್ಥಾನ ಗೆಲ್ಲುತ್ತೇವೆ :ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ನುಡಿದಂತೆ ನಡೆದ ಕಾರಣ ನಮಗೆ ಗೆಲ್ಲುವ ವಿಶ್ವಾಸ ಇದೆ.‌ ನರೇಂದ್ರ ಮೋದಿ ಕಳೆದ ವಿಧಾನಸಭೆ ಚುನಾವಣೆಯಲ್ಲೂ ರಾಜ್ಯಾದ್ಯಂತ ಓಡಾಡಿದ್ದರು. ಆದರೆ ನಾವು 135 ಸ್ಥಾನಗಳನ್ನು ಗೆದ್ದಿದ್ದೇವೆ. ಅವರು ಕರ್ನಾಟಕ ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಬರಗಾಲ ಬಂದು ಐದು ತಿಂಗಳಾಯ್ತು. ನರೇಂದ್ರ ಮೋದಿಯವರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಒಂದೇ ಒಂದು ಪೈಸೆ ಹಣ ಕೊಟ್ಟಿಲ್ಲ ಏಕೆ?. 18,171 ಕೋಟಿ ರೂ. ಬರ ಪರಿಹಾರ ಹಣ ಕೇಳಿದ್ದೇವೆ. ಒಂದು ರೂಪಾಯಿಯನ್ನೂ ಕೊಡಲಿಲ್ಲ. 48 ಸಾವಿರ ಹೆಕ್ಟೇರ್​ನಲ್ಲಿ ಬೆಳೆ ಹಾನಿ ಆಗಿದೆ. ಮತ್ತೆ ಮೋದಿಯವರಿಗೆ "ನಮ್ಮಲ್ಲಿ ಹಣ ಇಲ್ಲ" ಎಂದು ಹೇಳುವ ಯಾವ ನೈತಿಕತೆ ಇದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕೇಂದ್ರದಿಂದ ನಯಾಪೈಸೆ ಬರದಿದ್ದರೂ ನಾವು ರಾಜ್ಯ ಬೊಕ್ಕಸದಿಂದಲೇ ರೈತರ ಖಾತೆಗೆ ಬರ ಪರಿಹಾರ ಹಾಕಿದ್ದೇವೆ. ಬರಗಾಲದಲ್ಲಿ ನರೇಗಾ ದಿನಗಳನ್ನು ಹೆಚ್ಚಿಸಿ ಎಂದು ಕೇಳಿದ್ದೇವೆ. ಇವತ್ತಿನವರೆಗೂ ಮಾಡಿಲ್ಲ. ಕೇಂದ್ರ ಸರ್ಕಾರ ಅಂದರೆ ಕೇವಲ ಜಿಎಸ್​ಟಿ ತೆಗೆದುಕೊಳ್ಳುವುದಕ್ಕೆ ಮತ್ತು ತೆರಿಗೆ ಸಂಗ್ರಹಿಸಿ ತಮ್ಮಲ್ಲಿ ಇಟ್ಟುಕೊಂಡು ರಾಜ್ಯಗಳಿಗೆ ಅನ್ಯಾಯ ಮಾಡೋಕೆ ಮಾತ್ರ ಇರೋದಾ? ಎಂದು ಸಿದ್ದರಾಮಯ್ಯ ಟೀಕಿಸಿದರು.

ನನ್ನ ಮೇಲೆ ಆರೋಪ ಇದ್ದರೆ ಆಯೋಗಕ್ಕೆ ದೂರು ಕೊಡಲಿ:ನಿಮ್ಮ ವಿರುದ್ಧವೂ ಕಮಿಷನ್ ಆರೋಪ ಇದೆಯಲ್ಲಾ ಎಂಬ ಪ್ರಶ್ನೆಗೆ, ನನ್ನ ಮೇಲೆ ಆರೋಪ ಮಾಡುವುದಾದರೆ, ನಾಗ ಮೋಹನ್ ದಾಸ್ ತನಿಖಾ ಆಯೋಗದ ಮುಂದೆ ಹೋಗಿ ದೂರು ಕೊಡಲಿ. ನನ್ನ ವಿರುದ್ಧವಾಗಲಿ, ಸರ್ಕಾರದ ವಿರುದ್ಧವಾಗಲಿ, ಯಾವುದೇ ಮಂತ್ರಿಗಳ ಮೇಲಾಗಲಿ ಕಮಿಷನ್ ದೂರು ಇದ್ದರೆ ಆಯೋಗದ ಮುಂದೆ ಕೊಡಲಿ. ಬಿಜೆಪಿಯವರು ಕಮಿಷನ್ ಆರೋಪ ಬಂದಾಗ ತನಿಖಾ ಆಯೋಗ ಮಾಡಿದ್ರಾ?. ನರೇಂದ್ರ ಮೋದಿ ಸುಳ್ಳುಗಳನ್ನು ಬಹಳ ಹೇಳುತ್ತಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ :ಯಡಿಯೂರಪ್ಪನವರ ಮಗನಿಗೆ ಮತ ನೀಡಿ ಎನ್ನಲು ನಿಮ್ಮ ಆತ್ಮಸಾಕ್ಷಿ ಒಪ್ಪುವುದೇ : ಪ್ರಧಾನಿ ಮೋದಿಗೆ ಸಿಎಂ ಪ್ರಶ್ನೆ

ABOUT THE AUTHOR

...view details