ಕರ್ನಾಟಕ

karnataka

ETV Bharat / state

ರಾಜ್ಯದ ಜನ ನನ್ನ ಜೊತೆ ಇರುವವರೆಗೂ ನಾನು ಬಿಜೆಪಿ-ಜೆಡಿಎಸ್​ ಷಡ್ಯಂತ್ರಕ್ಕೆ ಹೆದರಲ್ಲ: ಸಿದ್ದರಾಮಯ್ಯ

ತಮ್ಮ ವಿರುದ್ಧ ಯಾರೇ ಷಡ್ಯಂತ್ರ ರೂಪಿಸಿದರೂ ಅವುಗಳನ್ನೆಲ್ಲ ಸೋಲಿಸಿ, ಜನರ ಆಶೀರ್ವಾದದಿಂದ ಗೆಲ್ಲುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

CM Siddaramaiah laid the foundation stone and inaugurated the development works
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : 4 hours ago

Updated : 51 minutes ago

ಮೈಸೂರು: "ರಾಜ್ಯದ ಜನತೆ ನನ್ನ ಜೊತೆಗೆ ಇರುವವರೆಗೂ ನಾನು ಬಿಜೆಪಿ-ಜೆಡಿಎಸ್​ ಷಡ್ಯಂತ್ರಕ್ಕೆ ಹೆದರಲ್ಲ. ಎಲ್ಲ ಷಡ್ಯಂತ್ರಗಳನ್ನು ಸೋಲಿಸುತ್ತೇನೆ. ಅವರ ಆಟಗಳಿಗೆ ಜಗ್ಗಲ್ಲ, ಬಗ್ಗಲ್ಲ. ಸಾಮಾಜಿಕ ನ್ಯಾಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ 501.81 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಹಲವಾರು ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಅವರು ಮಾತನಾಡಿದರು.

ಸಿಎಂ ಸಿದ್ದರಾಮಯ್ಯ (ETV Bharat)

"ವರುಣಾ ಜನರ ಆಶೀರ್ವಾದದಿಂದ ಎರಡು ಬಾರಿ ಸಿಎಂ‌ ಆಗಿದ್ದೇನೆ. ವರುಣಾ ಕಾಂಗ್ರೆಸ್ಸಿನ ಭದ್ರಕೋಟೆ. ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗಿಂತ ಹೆಚ್ಚು ಮತ ಕೊಟ್ಟಿದ್ದೀರಿ. ನನಗೆ ವಿಶೇಷವಾಗಿ ಆಶೀರ್ವಾದ ಮಾಡಿದ್ದಕ್ಕಾಗಿ ನಾನು ಕ್ಷೇತ್ರದ ಮತದಾರರಿಗೆ ಅನಂತ ಅನಂತ ಧನ್ಯವಾದ ಅರ್ಪಿಸುತ್ತೇನೆ. ವರುಣಾ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಅನುದಾನ ಕೊಡಲಾಗುತ್ತಿದೆ. ನಾನು ಉಪಕಾರ ಮಾಡುತ್ತಿಲ್ಲ. ಕ್ಷೇತ್ರದ ಪ್ರತಿನಿಧಿಯಾಗಿ ಅಭಿವೃದ್ಧಿ ಮಾಡುವ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ" ಎಂದರು.

"ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೆಲ್ಲ ವರುಣಾ ಕ್ಷೇತ್ರ ಮಾತ್ರವಲ್ಲದೆ ರಾಜ್ಯದ ಎಲ್ಲ ಬಡವರಿಗೆ ಆರ್ಥಿಕ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇನೆ. ಹತ್ತು ಹಲವು ಭಾಗ್ಯಗಳನ್ನು ಕೊಡುವ ಜೊತೆಗೆ ಹಲವು ನಿಗಮಗಳ ಸಾಲ ಮನ್ನಾ ಮಾಡಿದ್ದೇನೆ. ಅಂಬೇಡ್ಕರ್ ಅವರ ಆಶಯದಂತೆ ಬಡವರಿಗೆ ಆರ್ಥಿಕ‌ ಶಕ್ತಿ ಕೊಡುವ ಕಾರ್ಯಕ್ರಮ ರೂಪಿಸಿ ಜಾರಿ ಮಾಡಿದ್ದೇನೆ" ಎಂದು ಹೇಳಿದರು.

ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ (ETV Bharat)

"ಎರಡನೇ ಬಾರಿ ಮುಖ್ಯಮಂತ್ರಿ ಆದಾಗಲೂ ಎಲ್ಲ ಜಾತಿ, ಎಲ್ಲಾ ಧರ್ಮದ ಬಡವರ, ಮಧ್ಯಮ ವರ್ಗದವರ ಬದುಕಿಗೆ ಆಸರೆ ಆಗುವ ಐದೂ ಗ್ಯಾರಂಟಿ ಯೋಜನೆಗಳನ್ನು ಜನಪರವಾಗಿ ರೂಪಿಸಿ ಜಾರಿ ಮಾಡಿದ್ದೇವೆ. ಪ್ರತೀ ವರ್ಷ ಈ ಗ್ಯಾರಂಟಿಗಳ ಮೂಲಕ 56 ಸಾವಿರ ಕೋಟಿ ರೂಪಾಯಿಗಳನ್ನು ಜನರ ಖಾತೆಗೆ ನೇರವಾಗಿ ಹಾಕುತ್ತಿದ್ದೇವೆ. ಹೀಗೆ ದೇಶದಲ್ಲಿ ನುಡಿದಂತೆ ನಡೆದುಕೊಂಡಿರುವ ಪಕ್ಷ ನಿಮ್ಮ ಪಕ್ಷ. ಕಾಂಗ್ರೆಸ್ ನಿಮ್ಮದೇ ಪಕ್ಷ" ಎಂದರು.

ಬಿಜೆಪಿ ಸಾಮಾಜಿಕ ನ್ಯಾಯ, ಬಡವರ ವಿರೋಧಿ: "ಕೇಂದ್ರದಲ್ಲಿರುವ ಮೋದಿ ಸರ್ಕಾರವಾಗಲಿ, ರಾಜ್ಯದಲ್ಲಿದ್ದ ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಜನರ ಕಲ್ಯಾಣ ಮಾಡದೆ ಲೂಟಿ ಮಾಡಿ ಹೋದರು. ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿ. ಬಡವರ ವಿರೋಧಿ. ಮೂರು ಬಾರಿ ಪ್ರಧಾನಿ ಆಗಿರುವ ಮೋದಿ ಕೊಟ್ಟ ಮಾತಿನಂತೆ ನಡೆದ ಉದಾಹರಣೆ ಇದೆಯಾ ಹೇಳಿ.‌ ಇಷ್ಟು ವರ್ಷ ಪ್ರಧಾನಿಯಾಗಿ ಮೋದಿ ಬಡಪರ ಪರವಾಗಿ ಒಂದೇ ಒಂದು ಯೋಜನೆ ಜಾರಿ ಮಾಡಿದ್ದಾರಾ ಹೇಳಿ" ಎಂದು ಕೇಳಿದರು.

ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ (ETV Bharat)

ಕೇಂದ್ರದಿಂದ ರಾಜ್ಯಕ್ಕೆ ನಿರಂತರ ದ್ರೋಹ:ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವವರು ನಾವು. ನಾವು ನಮ್ಮ ಪಾಲಿನ ತೆರಿಗೆ ಪಡೆಯಲು ಭಿಕ್ಷೆ ಬೇಡಬೇಕಾ? ಮೊನ್ನೆ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಗೆ ಅತಿ ಹೆಚ್ಚು ತೆರಿಗೆ ಪಾಲು ಕೊಟ್ಟಿರುವ ಕೇಂದ್ರಕ್ಕೆ ರಾಜ್ಯಕ್ಕೆ ಮಾತ್ರ ಕೇವಲ ಆರು ಸಾವಿರ ಕೋಟಿ ಕೊಟ್ಟು ಭಯಾನಕ ಅನ್ಯಾಯ ಮಾಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಈ ಅನ್ಯಾಯದ ವಿರುದ್ಧ ದೆಹಲಿಗೇ ಹೋಗಿ ನಾವು ಪ್ರತಿಭಟನೆ ಮಾಡಿದೆವು. ಬಿಜೆಪಿ-ಜೆಡಿಎಸ್ ಒಬ್ಬೇ ಒಬ್ಬ ಲೋಕಸಭಾ ಸದಸ್ಯ ರಾಜ್ಯದ ಪಾಲನ್ನು ಕೇಳುವ ಧೈರ್ಯ ಮಾಡಿಲ್ಲ. ಮಾಡುವುದೂ ಇಲ್ಲ. ಆದ್ದರಿಂದ ಕೇಂದ್ರದ ದ್ರೋಹದ ವಿರುದ್ಧ ರಾಜ್ಯದ ಜನತೆ ಮಾತನಾಡಬೇಕು" ಎಂದು ಕರೆ ನೀಡಿದರು.

"ರಾಜ್ಯಕ್ಕೆ ವಿಶೇಷ ಅನುದಾನದ ಜೊತೆಗೆ ನೀರಾವರಿ ಯೋಜನೆಗೆ 5,495 ಕೋಟಿ ನೀಡಲು ಶಿಫಾರಸು ಮಾಡಿದ್ದ ನಿರ್ಮಲಾ ಸೀತಾರಾಮನ್ ಈ ಹಣವನ್ನೂ ಕೊಡಲಿಲ್ಲ. ರಾಜ್ಯದ ಫೆರಿಫೆರಲ್ ರಸ್ತೆಗೆ, ಕೆರೆಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ಕೊಡುತ್ತೇವೆ ಎಂದು ಘೋಷಿಸಿದರು. ಆದರೆ ನಯಾಪೈಸೆ ಕೊಡಲಿಲ್ಲ. ಈ ಅನ್ಯಾಯಗಳ ವಿರುದ್ಧ ರಾಜ್ಯದ ಜನತೆ ಮಾತನಾಡಿದರೆ ತಪ್ಪಾ, ನಾವು ಪ್ರತಿಭಟಿಸಿದರೆ ತಪ್ಪಾ?" ಎಂದು ಗುಡುಗಿದರು.

ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ (ETV Bharat)

"ಲೋಕಸಭಾ ಯೋಜನೆ ಬಳಿಕ ನಮ್ಮ ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತವೆ ಎಂದು ದೆಹಲಿಯ ಮೋದಿಯಿಂದ, ಇಲ್ಲಿನ ಆರ್.ಅಶೋಕ್ ವರೆಗೂ ಸುಳ್ಳುಗಳ ಮೇಲೆ ಸುಳ್ಳು ಹೇಳಿದರು. ಇದುವರೆಗೂ ಗ್ಯಾರಂಟಿಗಳು ನಿಂತಿಲ್ಲ. ನಿಲ್ಲುವುದೂ ಇಲ್ಲ. ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ನಿಲ್ಲಲ್ಲ" ಎಂದು ಘೋಷಿಸಿದರು.‌

"ಸಿದ್ದರಾಮಯ್ಯ ಒಂದೇ ಒಂದು ರೂಪಾಯಿ ಲಂಚ ಪಡೆದ ಉದಾಹರಣೆ ಇದೆಯಾ? ನನ್ನ ಮೇಲಿನ ಸುಳ್ಳು ಆರೋಪ ಸಹಿಸ್ತೀರಾ? ನಾನು ಮಂತ್ರಿಯಾಗಿ 45 ವರ್ಷ ಆಯ್ತು. ನನ್ನ ಮೇಲೆ ಸಣ್ಣ ಕಪ್ಪುಚುಕ್ಕೆ ಇಲ್ಲ. ಹಿಂದುಳಿದ ವರ್ಗದ ನಾನು ಎರಡು ಬಾರಿ ಸಿಎಂ ಆದೆ ಅಂತ ಬಿಜೆಪಿಗೆ ಹೊಟ್ಟೆಕಿಚ್ಚು. ಇದನ್ನು ನೀವು ಸಹಿಸ್ತೀರಾ ಎಂದು ಮರು ಪ್ರಶ್ನಿಸಿದರು.

"ನಾನು ಎರಡು ಬಾರಿ ಸಿಎಂ ಆಗಿಯೂ ಮೈಸೂರಲ್ಲಿ ಒಂದು ಮನೆಯೂ ಇಲ್ಲ. ಮರಿಸ್ವಾಮಿ ಮನೆಯಲ್ಲಿ ಇದ್ದೇನೆ. ಕುವೆಂಪು ರಸ್ತೆಯಲ್ಲಿ 3 ವರ್ಷಗಳಿಂದ ಮನೆ ಕಟ್ಟುತ್ತಲೇ ಇದ್ದೇನೆ. ಇದುವರೆಗೂ ಪೂರ್ತಿ ಆಗಿಲ್ಲ. ನನಗೆ ವರ್ಚಸ್ಸು ಕೊಡುವವರು ನೀವು. ನಿಮ್ಮ ಎದುರಿಗೆ ಪ್ರಾಮಾಣಿಕವಾಗಿ ಇದ್ದೇನೆ. ನೀವೇ ನನ್ನ ಮಾಲೀಕರು. ನೀವೇ ನನ್ನ ಯಜಮಾನರು. ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೆ. ಬಿಜೆಪಿ-ಜೆಡಿಎಸ್ ನಾಯಕರ ಹೊಟ್ಟೆಕಿಚ್ಚಿನಿಂದ ನನ್ನ ವರ್ಚಸ್ಸು ಕಡಿಮೆ ಆಗಲ್ಲ. ನನ್ನ ವರ್ಚಸ್ಸು ವರುಣಾ ಜನತೆ, ನನ್ನ ವರ್ಚಸ್ಸು ರಾಜ್ಯದ ಜನತೆ" ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಸಚಿವರಾದ ಕೆ.ವೆಂಕಟೇಶ್, ರಹೀಂಖಾನ್, ಬೋಸ್ ರಾಜ್, ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕ ಯತೀಂದ್ರ ಸಿದ್ದರಾಮಯ್ಯ, ರವಿಶಂಕರ್, ದರ್ಶನ್ ಧ್ರುವನಾರಾಯಣ್, ತಿಮ್ಮಯ್ಯ, ವರುಣಾ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸೇರಿ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಮಳೆ ಅನಾಹುತ ವರದಿ ತರಿಸಿಕೊಂಡಿದ್ದೇವೆ, ಪರಿಹಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ: ಸಿಎಂ ಸಿದ್ದರಾಮಯ್ಯ

Last Updated : 51 minutes ago

ABOUT THE AUTHOR

...view details