ಕರ್ನಾಟಕ

karnataka

ETV Bharat / state

ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಹವಾನಿಯಂತ್ರಿತ ಪಾಲಿಕೆ ಬಜಾರ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ - Krishnadevaraya Palika Bazar - KRISHNADEVARAYA PALIKA BAZAR

ಬೆಂಗಳೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಹವಾನಿಯಂತ್ರಿತ ಮಾರುಕಟ್ಟೆ ಕೃಷ್ಣದೇವರಾಯ ಪಾಲಿಕೆ ಬಜಾರ್ ಅನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

Etv Bharat
ಪಾಲಿಕೆ ಬಜಾರ್ ಉದ್ಘಾಟನೆ (Etv Bharat)

By ETV Bharat Karnataka Team

Published : Aug 25, 2024, 10:19 PM IST

ಬೆಂಗಳೂರು:ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಹವಾನಿಯಂತ್ರಿತ ಪಾಲಿಕೆ ಬಜಾರ್ ಅನ್ನು ರಾಜಧಾನಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಉದ್ಘಾಟಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಜಯನಗರ ಬಸ್/ಮೆಟ್ರೊ ನಿಲ್ದಾಣದ ಬಳಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಹವಾನಿಯಂತ್ರಿತ ಮಾರುಕಟ್ಟೆ ಕೃಷ್ಣದೇವರಾಯ ಪಾಲಿಕೆ ಬಜಾರ್ ತಲೆಎತ್ತಿದೆ.

ಬಜಾರ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದರು.

ಪಾಲಿಕೆ ಬಜಾರ್ ಉದ್ಘಾಟನೆ (ETV Bharat)

ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿಸಲಾಗಿದ್ದು, ಇಲ್ಲಿ 79 ಮಳಿಗೆಗಳಿವೆ. ದಕ್ಷಿಣ ಭಾರತದಲ್ಲಿಯೇ ಇಂತಹ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿತವಾಗಿರುವುದು ಇದೇ ಮೊದಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು. ಅವರಿಗೆ ಗೌರವ ಸೂಚಿಸುವಂತೆ ಬಜಾರ್ ಅನ್ನು ಕೃಷ್ಣದೇವರಾಯ ಪಾಲಿಕೆ ಎಂದು ನಾಮಕರಣ ಮಾಡಿರುವುದು ಶ್ಲಾಘನೀಯ. ಪಾಲಿಕೆ ಬಜಾರ್ ಸರ್ಕಾರದ ಜನಪರ ಚಿಂತನೆಯ ಯೋಜನೆಯಾಗಿದೆ. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಂತಹ ಬಜಾರ್​​ಗಳನ್ನು ಬೆಂಗಳೂರಿನ ಅನೇಕ ಸ್ಥಳಗಳಲ್ಲಿ, ವಿಶೇಷವಾಗಿ ಗಾಂಧಿ ಬಜಾರ್​​ನಂತಹ ಜನನಿಬಿಡ ಪ್ರದೇಶಗಳಲ್ಲಿ ನಿರ್ಮಿಸುವ ಅಗತ್ಯವಿದೆ ಎಂದರು.

ಪಾಲಿಕೆ ಬಜಾರ್ (ETV Bharat)

ಈ ಹಿಂದೆಯೂ ವಿಜಯನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ನೆನಪನ್ನು ಮೆಲುಕು ಹಾಕಿದ ಸಿಎಂ ಸಿದ್ದರಾಮಯ್ಯ, ಈ ಪ್ರದೇಶ ನನಗೆ ಬಹಳ ಚಿರಪರಿಚಿತವಾಗಿದೆ. ವ್ಯಾಪಾರಿಗಳ ಪರಿಸ್ಥಿತಿಯನ್ನು ಆಗನಿಂದಲೇ ಗಮನಿಸಿದ್ದ ನನಗೆ, ಶಾಸಕ ಕೃಷ್ಣಪ್ಪನವರ ಬೇಡಿಕೆ ಸಮಂಜಸವಾಗಿದೆ ಎನ್ನಿಸಿತ್ತು ಎಂದು ತಿಳಿಸಿದರು.

ವಿಜಯನಗರ ವಿಧಾನಸಭಾಕ್ಷೇತ್ರದಲ್ಲಿ ಕೃಷ್ಣದೇವರಾಯ ಪಾಲಿಕೆ ಬಜಾರ್ ಯೋಜನೆ ಇಲ್ಲಿನ ಶಾಸಕ ಎಂ.ಕೃಷ್ಣಪ್ಪ ಅವರ ಕನಸಾಗಿದೆ. ಇಲ್ಲಿನ ಬೀದಿ ವ್ಯಾಪಾರಿಗಳು ಬಿಸಿಲು ಗಾಳಿ ಮಳೆಯಲ್ಲಿ ವ್ಯಾಪಾರ ಮಾಡಬೇಕಾಗಿದ್ದು, ಅವರಿಗೆ ವ್ಯಾಪಾರ ಮಾಡಲು ಸ್ಥಳಾವಕಾಶ ಮಾಡಿಕೊಡಲು ಬೇಡಿಕೆಯಿರಿಸಿದ್ದರು. ಈ ಕಾರಣಕ್ಕೆ 2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಾಲಿಕೆ ಬಜಾರ್​​ಗಳ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿದ್ದೆ. ಇಂದು ನಾನೇ ಈ ಬಜಾರ್​ ಅನ್ನು ಉದ್ಘಾಟಿಸುತ್ತಿರುವುದು ಸಂತೋಷ ತಂದಿದೆ ಎಂದರು.

ಪಾಲಿಕೆ ಬಜಾರ್ (ETV Bharat)

ಬೆಂಗಳೂರು ಬಹಳ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಬಸ್ ನಿಲ್ದಾಣ ಹಾಗೂ ಮೆಟ್ರೋ ರೈಲು ನಿಲ್ದಾಣವಿರುವ ಸೂಕ್ತ ಸ್ಥಳದಲ್ಲಿ ಈಗ ಪಾಲಿಕೆ ಬಜಾರ್ ನಿರ್ಮಾಣವಾಗಿದೆ. ಇದರಿಂದ ಬಹಳ ಜನರಿಗೆ ಅನುಕೂಲವಾಗಲಿದೆ. ಒಂದೇ ಕಡೆ ಎಲ್ಲಾ ವ್ಯಾಪಾರ ಮಾಡುವವರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ನಮ್ಮ ಸರ್ಕಾರ ಜನರಿಗೆ ಮಾತು ನೀಡಿದ್ದಂತೆ ಎಲ್ಲಾ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಅಧಿಕಾರಕ್ಕೆ ಬಂದು ಒಂದು ವರ್ಷ ಮೂರು ತಿಂಗಳಲ್ಲಿ ನಮ್ಮ 5 ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. ಎಲ್ಲಾ ಧರ್ಮ, ಜಾತಿಯ ಬಡವರಿಗೆ ಈ ಕಾರ್ಯಕ್ರಮಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ವಿರೋಧ ಪಕ್ಷದವರು ಈ ಕಾರ್ಯಕ್ರಮಗಳ ಜಾರಿಗೆ ಮುನ್ನ ಹಾಗೂ ನಂತರದಲ್ಲಿ ಬಹಳ ಟೀಕೆ ಮಾಡುತ್ತಿದ್ದರು. ಲೋಕಸಭಾ ಚುನಾವಣೆ ನಂತರ ಯೋಜನೆಗಳನ್ನು ನಿಲ್ಲಿಸುವುದಾಗಿಯೂ ಹೇಳಿದ್ದರು. ಯಾವ ಕಾರಣಕ್ಕೂ ಕೂಡ 5 ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಾಲಿಕೆ ಬಜಾರ್ (ETV Bharat)

ಅಭಿವೃದ್ಧಿ ಯೋಜನೆಗಳಿಗೆ 1 ಲಕ್ಷ 60 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ರೂಪಾಯಿವೆಚ್ಚವಾಗುತ್ತಿದೆ . ಬೆಂಗಳೂರಿನ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಂಜೂರು ಮಾಡಿದ್ದೇವೆ. ಬೆಂಗಳೂರು ನಗರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಹಾಗೂ ಬ್ರಾಂಡ್ ಬೆಂಗಳೂರು ಮಾಡುವುದು ನಮ್ಮ ಉದ್ದೇಶವಾಗಿದೆ. ಆ ದಿಕ್ಕಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು ನಗರಕ್ಕೆ ಪಾಲಿಕೆ ಬಜಾರ್ ಭೂಷಣವಾಗಿದೆ. ಶಾಸಕ ಕೃಷ್ಣಪ್ಪ ಜನಪರ ಕಾಳಜಿ ಇಟ್ಟುಕೊಂಡಿದ್ದಾರೆ. ಕೃಷ್ಣಪ್ಪ ಕಾಂಗ್ರೆಸ್​ನ ಹಿರಿಯ ನಾಯಕರು. ಅವರನ್ನು ನಮ್ಮ ಪಕ್ಷ ಯಾವತ್ತೂ ಬಿಟ್ಟುಕೊಡುವುದಿಲ್ಲ ಎಂದು ಸಿಎಂ ಹೇಳಿದರು.

ಇದನ್ನೂ ಓದಿ:ಗೃಹಲಕ್ಷ್ಮಿ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಮೆಚ್ಚುಗೆ: ರೇಷ್ಮೆ ಸೀರೆ ನೀಡಿ ಸನ್ಮಾನ - Grandmother Fed Holige Meal

ABOUT THE AUTHOR

...view details