ಮಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪುದು ಗ್ರಾಮದ ಅಪರಾಧಿ ಹಸನಬ್ಬ ಎಂಬಾತನಿಗೆ 2.50 ಲಕ್ಷ ರೂ. ದಂಡ, 1 ವರ್ಷ ಜೈಲು ಶಿಕ್ಷೆ ವಿಧಿಸಿ ದ.ಕ.ಜಿಲ್ಲೆಯ ಬಂಟ್ವಾಳದ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಭಾಗ್ಯಮ್ಮ ತೀರ್ಪು ಪ್ರಕಟಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಫರಂಗಿಪೇಟೆ ಶಾಖೆಯಿಂದ ಹಸನಬ್ಬ 2012ರಲ್ಲಿ ಅಡವು ಸಾಲ ಪಡೆದುಕೊಂಡಿದ್ದರು. ಸಾಲ ಪಡೆದುಕೊಂಡ ಬಳಿಕ ಸರಿಯಾದ ಸಮಯಕ್ಕೆ ಮರುಪಾವತಿಸದೆ ಸುಸ್ತಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಂಕ್, ಆರೋಪಿ ವಿರುದ್ಧ ಸಹಕಾರಿ ಕಾಯ್ದೆಯನ್ವಯ ಕಾನೂನು ಪ್ರಕ್ರಿಯೆ ಆರಂಭಿಸಿತ್ತು. 2019ರಲ್ಲಿ ಆರೋಪಿಯ ಆಸ್ತಿಯನ್ನು ಹರಾಜಿಗಿಡುವ ಸಂದರ್ಭದಲ್ಲಿ ಹಸನಬ್ಬ ಶಾಖೆಗೆ ಆಗಮಿಸಿ ಸಾಲದ ಭಾಗಶಃ ಬಾಕಿಗೆ ಚೆಕ್ ನೀಡಿದ್ದರು. ಈ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಕೋರ್ಟ್ ಮೆಟ್ಟಿಲೇರಿತ್ತು.
ನಾನು ಬ್ಯಾಂಕ್ನಲ್ಲಿ ಯಾವುದೇ ಲೋನ್ ತೆಗೆದುಕೊಂಡಿಲ್ಲ ಮತ್ತು ಯಾವುದೇ ಚೆಕ್ ನೀಡಿಲ್ಲ. ಆದ್ದರಿಂದ ಬ್ಯಾಂಕಿಗೆ ಯಾವುದೇ ಹಣ ಕಟ್ಟಲು ಬಾಕಿ ಇಲ್ಲ ಎಂದು ಆರೋಪಿ ನ್ಯಾಯಾಲಯಕ್ಕೆ ಸಾಕ್ಷಿ ನೀಡಿದ್ದರು. ನನಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ್ದರು.