ಹುಬ್ಬಳ್ಳಿ:ನಗರದ ಚನ್ನಮ್ಮ ಸರ್ಕಲ್ ಬಳಿ ಫ್ಲೈ ಓವರ್ ಕಾಮಗಾರಿ ಪ್ರಾರಂಭಗೊಂಡಿದ್ದು, ಸುಗಮ ಸಂಚಾರದ ಹಿತದೃಷ್ಟಿಯಿಂದ ಹುಬ್ಬಳ್ಳಿ ಶಹರದಲ್ಲಿ ವಾಹನಗಳಿಗೆ ಫೆಬ್ರವರಿ 10 ರಿಂದ ಪ್ರತ್ಯೇಕ ಮಾರ್ಗ ಕಲ್ಪಿಸಲಾಗಿದೆ.
ಹೊಸೂರು ಸರ್ಕಲ್ನಿಂದ ಗದಗ ಕಡೆಗೆ ಸಂಚರಿಸುವ ಬಸ್, ಭಾರಿ ಗಾತ್ರದ ಹಾಗೂ ಇತರೆ ವಾಹನಗಳು ಬಸವವನ, ಹಳೇ ಬಸ್ ಸ್ಟ್ಯಾಂಡ್ - ಅಯೋಧ್ಯಾ ಹೋಟೆಲ್ ಮುಂದೆ ಹಾಯ್ದು, ಚನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ಗದಗ ರಸ್ತೆಗೆ ಹೋಗಬಹುದು. ಅಲ್ಲದೆ, ಹೊಸೂರು ಸರ್ಕಲ್ನಿಂದ ವಿಜಯಪುರ ರಸ್ತೆಯತ್ತ ಸಂಚರಿಸುವ ವಾಹನಗಳು ಬೆಂಬಳಗಿ ಕ್ರಾಸ್, ಬಾಳಿಗಾ ಕ್ರಾಸ್ - ಹುಬ್ಬಳ್ಳಿ ಸ್ಕ್ಯಾನ್ ಸೆಂಟರ್ ಹತ್ತಿರ ಎಡಕ್ಕೆ ತಿರುಗಿ, ದೇಸಾಯಿ ಓವರ್ ಬ್ರಿಡ್ಜ್ ಮುಖಾಂತರ ತೆರಳಬಹುದು.
ವಿಜಯಪುರ ರಸ್ತೆಗೆ ಹೊಸೂರು ಸರ್ಕಲ್ ಕಡೆಯಿಂದ ತೆರಳುವ ಭಾರಿ ಗಾತ್ರದ ವಾಹನಗಳು ಹಳೇ ಬಸ್ ಸ್ಟ್ಯಾಂಡ್ - ಅಯೋಧ್ಯಾ ಹೋಟೆಲ್ ಮುಂದೆ ಹಾಯ್ದು, ಚನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ಪಿಂಟೋ ಸರ್ಕಲ್ ಮುಖಾಂತರ ಗದಗ ರಿಂಗ್ ರೋಡ್ ಮೂಲಕ ಹೋಗಬೇಕು. ನವಲಗುಂದ, ವಿಜಯಪುರ ಕಡೆಯಿಂದ ಹುಬ್ಬಳ್ಳಿಗೆ ಬರುವ ಬಸ್‌ಗಳು ಸರ್ವೋದಯ ಸರ್ಕಲ್, ಕೆ.ಹೆಚ್. ಪಾಟೀಲ್ ರೋಡ್, ಶೃಂಗಾರ ಹೋಟೆಲ್ ಕ್ರಾಸ್ನಲ್ಲಿ ಎಡ ತಿರುವು ಪಡೆದು, ಮುಂದೆ ಗದಗ ರಸ್ತೆಗೆ ಬಂದು ತಲುಪಬಹುದು.