ಶಿವಮೊಗ್ಗ:ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ ಸಂಬಂಧ ಶಿವಮೊಗ್ಗ ಕೋರ್ಟ್ಗೆ ಎಸ್ಐಟಿ ದೋಷಾರೋಪಣ ಪಟ್ಟಿ ಸಲ್ಲಿಸಿದೆ. ಈ ಚಾರ್ಜ್ಶೀಟ್ ವಿರುದ್ಧ ಹೈಕೋರ್ಟ್ಗೆ ಹೋಗುವುದಾಗಿ ಮೃತ ಚಂದ್ರಶೇಖರ್ ಪತ್ನಿ ಕವಿತಾ ಅವರು ತಿಳಿಸಿದ್ದಾರೆ.
ಈ ಟಿವಿ ಭಾರತ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು, "ವಾಲ್ಮೀಕಿ ಹಗರಣದ ತನಿಖೆ ಸರಿಯಾಗಿ ನಡೆಯಬೇಕು. ಈ ತನಿಖೆಯನ್ನು ಸಿಬಿಐ ತನಿಖೆ ಆಗಬೇಕು ಅಂತಾ ಆಗ್ರಹಿಸುತ್ತೇನೆ. ಮೃತ ಚಂದ್ರಶೇಖರನ್ ಅವರು ಹಣ ತಿಂದಿದ್ದಾರೆಂದು ಆರೋಪ ಮಾಡಲಾಗಿದೆ. ಚಂದ್ರಶೇಖರನ್ ಅವರು ಹಣ ತಿಂದಿದ್ದರೆ ನಾವು ನಮ್ಮ ತವರು ಮನೆಗೆ ಬಂದು ಇರುವ ಪರಿಸ್ಥಿತಿ ಬಂದಿರಲಿಲ್ಲ. ನಮ್ಮ ಯಜಮಾನರು ತೀರಿ ಹೋದ ಮೇಲೆ ಮನೆಯಲ್ಲಿ ದುಡಿಯುವವರು ಯಾರು ಇಲ್ಲದ ಕಾರಣ ಮನೆ ನಡೆಸುವುದು ಕಷ್ಟವಾಗಿದೆ. ಇದರಿಂದ ನಾನು ನಮ್ಮ ತವರು ಮನೆಗೆ ಬಂದಿದ್ದೇನೆ. ಮಕ್ಕಳಿಬ್ಬರು ಓದುತ್ತಿದ್ದಾರೆ. ನಮ್ಮ ಮನೆಯವರು ತೀರಿ ಹೋದ ಮೇಲೆ ಇದುವರೆಗೂ ಯಾವುದೇ ಪರಿಹಾರ ನಮಗೆ ಬಂದಿಲ್ಲ. ತನಿಖೆ ಸರಿಯಾಗಿ ನಡೆಯಬೇಕು. ತನಿಖೆ ಸರಿಯಾಗಿ ನಡೆಸಿದರೆ, ಸತ್ಯ ಹೊರಗೆ ಬರುತ್ತದೆ. ಚಂದ್ರಶೇಖರನ್ ಡೆತ್ ನೋಟ್ನಲ್ಲಿ ಕೆಲವರ ಹೆಸರನ್ನು ಬರೆದಿಟ್ಟಿದ್ದಾರೆ. ಹೈಕೋರ್ಟ್ಗೆ ಹೋಗುವ ಕುರಿತು ನಮ್ಮ ಸಹೋದರ ವಕೀಲರ ಜೊತೆ ಮಾತನಾಡುತ್ತಿದ್ದಾರೆ. ಈಗ ದೂರು ಕೊಟ್ಟವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲುವಂತೆ ಮಾಡಲಾಗುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದರು.