ಕರ್ನಾಟಕ

karnataka

ETV Bharat / state

ಸಿನಿಮಾ ನಿರ್ದೇಶಕನಾಗಬೇಕಿದ್ದವ ಪತ್ನಿಯ ಗೆಳೆಯನ ಕೊಂದು ಜೈಲು ಸೇರಿದ್ದ: ಈಗ 42 ಕಳ್ಳತನ ಕೇಸ್​ನಲ್ಲಿ ಮತ್ತೆ ಅರೆಸ್ಟ್

42 ಕಳ್ಳತನ ಕೇಸ್​ನಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ. ಈತ 2005ರಲ್ಲಿ ಸಿನಿಮಾ ನಿರ್ದೇಶನಕ್ಕೂ ಇಳಿದಿದ್ದ.

ಆನಂದ್ ಬಂಧಿತ ಆರೋಪಿ‌‌‌
ಆನಂದ್ ಬಂಧಿತ ಆರೋಪಿ‌‌‌ (ETV Bharat)

By ETV Bharat Karnataka Team

Published : Nov 8, 2024, 7:08 AM IST

Updated : Nov 8, 2024, 11:28 AM IST

ಚಾಮರಾಜನಗರ: 42 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ. ಆನೇಕಲ್ ಮೂಲದ ಆನಂದ್ (33) ಬಂಧಿತ ಆರೋಪಿ‌‌‌. ಈತ ಚಾಮರಾಜನಗರ ಸೇರಿದಂತೆ ಮಂಡ್ಯ, ಬೆಂಗಳೂರು, ತಮಿಳುನಾಡಿನಲ್ಲೂ ಕಳವು ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಮರಾಜನಗರ‌ ಜಿಲ್ಲಾ ಕೇಂದ್ರ ಹಾಗೂ ಕೊಳ್ಳೇಗಾಲದಲ್ಲಿ ಸರಣಿ ಕಳವು ಪ್ರಕರಣಗಳು ನಡೆದಿದ್ದವು. ಈ ಕುರಿತು ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು, ಒಂದು ತಿಂಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದ ಆರೋಪಿ:2019ರಲ್ಲಿ 'ಪೇಜ್ ನಂ-3' ಎಂಬ ಸಿನಿಮಾ ನಿರ್ದೇಶನಕ್ಕೆ ಆನಂದ್ ಮುಂದಾಗಿದ್ದ. ಆ ವೇಳೆ ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದ ಸಿನಿಮಾ ಪೂರ್ತಿಯಾಗಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ಸ್ಟಂಟ್‌ಮನ್ ಆಗಿಯೂ ಕಾರ್ಯನಿರ್ವಹಿಸಿದ್ದಾನೆ. ಇದೇ ವೇಳೆ ತನ್ನ ಹೆಂಡತಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ, ಆಕೆಯ ಗೆಳೆಯನನ್ನು ಕೊಂದಿದ್ದ. ಈ ಪ್ರಕರಣದಲ್ಲಿ ಜೈಲು ಸೇರಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ನಂತರ ಅಂಗಡಿಗಳಲ್ಲಿ ಹಣ ಕದಿಯುವುದಲ್ಲದೇ ಸಿಸಿಟಿವಿ ಡಿವಿಆರ್ ಕೂಡ ಹೊತ್ತೊಯ್ಯುತ್ತಿದ್ದ. ಇತ್ತೀಚೆಗೆ ಕಾರು ಖರೀದಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜೈಲಿನಲ್ಲಿ ಕಳ್ಳರ ಪರಿಚಯ:ಜೈಲಿನಲ್ಲಿ ತಮಿಳುನಾಡಿನ ಕಳ್ಳರ ಪರಿಚಯವಾಗಿತ್ತು. ಈ ಪರಿಚಯ ಸ್ನೇಹಕ್ಕೆ ತಿರುಗಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಕಳ್ಳರ ಜೊತೆ ಸೇರಿ ಮೊದಲು ತಮಿಳುನಾಡಿನಲ್ಲಿ ಕಳ್ಳತನ ಆರಂಭಿಸಿದ್ದಾನೆ. ಬಳಿಕ ರಾಜ್ಯದಲ್ಲಿ ಕಳ್ಳತನಕ್ಕೆ ಇಳಿದಿದ್ದ. ಈವರೆಗೆ 42 ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಚಾಮರಾಜನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ದಾವಣಗೆರೆ: ತಾನೇ ಜೀವವಿಮೆ ಮಾಡಿಸಿ, ₹40 ಲಕ್ಷ ಹಣಕ್ಕಾಗಿ ಮಾವನನ್ನೇ ಕೊಂದ ಅಳಿಯ!

Last Updated : Nov 8, 2024, 11:28 AM IST

ABOUT THE AUTHOR

...view details