ಚಾಮರಾಜನಗರ:ಪ್ರತ್ಯೇಕ ಪ್ರಕರಣಗಳಲ್ಲಿ ಮೂವರನ್ನು ಯಾಮಾರಿಸಿ ಚಿನ್ನಾಭರಣ ಮತ್ತು ನಗದು ಕದ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಕಿಕ್ಕಿರಿದು ತುಂಬಿದ ಬಸ್ನಲ್ಲಿ ಕಳ್ಳತನ:ಮದುವೆ ಮುಗಿಸಿಕೊಂಡು ಬಸ್ಸಿನಲ್ಲಿ ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪರಿಚಿತರು ಎಗರಿಸಿರುವ ಘಟನೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದ್ದು, ಶನಿವಾರ ಪ್ರಕರಣ ದಾಖಲಾಗಿದೆ.
ಹನೂರಿನ ವಿನಾಯಕ ನಗರ ಬಡಾವಣೆಯ ವಾಸಿ ಲೇ.ರಾಜು ಎಂಬವರ ಪತ್ನಿ ಮಂಗಳಮ್ಮ ಎಂಬಾಕೆ 25 ಗ್ರಾಂ ಚಿನ್ನದ ಸರ ಹಾಗೂ ಒಂದು ಗ್ರಾಂ ಚಿನ್ನದ ಡಾಲರ್ ಕಳೆದುಕೊಂಡಿದ್ದಾರೆ. ಈಕೆ ಕೊಳ್ಳೇಗಾಲದ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಮುಗಿಸಿಕೊಂಡು ವಾಪಸ್ ತನ್ನ ಊರಿಗೆ ಹೋಗಲು ಕಿಕ್ಕಿರಿದು ತುಂಬಿದ ಬಸ್ ಹತ್ತಿದ್ದಾರೆ.
ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಬಳಿ ತನ್ನ ಕತ್ತಿನಲ್ಲಿದ್ದ ಸರ ಗಮನಿಸಿದ್ದಾರೆ. ಆಗ ಚಿನ್ನದ ಸರ ಇಲ್ಲದಿರುವುದು ಗೊತ್ತಾಗಿದೆ. ಎಲ್ಲರನ್ನೂ ಕೇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗದು, ಚಿನ್ನಾಭರಣ ಇದ್ದ ಬ್ಯಾಗ್ ಮಾಯ: ಬೆಂಗಳೂರಿನಿಂದ ಕೊಳ್ಳೇಗಾಲಕ್ಕೆ ಬರುತ್ತಿದ್ದ ಕೆ.ಎನ್.ರಾಜೇಶ್ ಎಂಬವರು ತಮ್ಮ ಬ್ಯಾಗನ್ನು ಸೀಟಿನ ಮೇಲ್ಭಾಗದ ಲಗೇಜ್ ಸ್ಥಳದಲ್ಲಿಟ್ಟು ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್ನಲ್ಲಿದ್ದ ಅಪರಿಚಿತರು ಬ್ಯಾಗ್ ಲಪಟಾಯಿಸಿ ಪರಾರಿಯಾಗಿದ್ದಾರೆ.
ಬ್ಯಾಗಿನಲ್ಲಿ 3.5 ಲಕ್ಷ ಮೌಲ್ಯದ ಚಿನ್ನಾಭರಣ, 15 ಸಾವಿರ ನಗದು ಹಾಗೂ ಕೆಲ ದಾಖಲಾತಿಗಳು ಇತ್ತು ಎಂದು ದೂರಿನಲ್ಲಿ ಹೇಳಿದ್ದು, ಶನಿವಾರ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣ ಮಾತ್ರದಲ್ಲೇ ಮಾಂಗಲ್ಯ, ಚಿನ್ನದ ಸರ ಕಳವು: ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ಪುಟ್ಟಮಾದಮ್ಮ ಎಂಬವರು ಶನಿವಾರ ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿಕೊಂಡು ಪ್ಯಾಸೆಂಜರ್ ಆಟೋದಲ್ಲಿ ಬರುತ್ತಿದ್ದರು. ಯಳಂದೂರಿನಿಂದ ಗುಂಬಳ್ಳಿಗೆ ತೆರಳುವಾಗ ಮೂವರು ಮಹಿಳೆಯರು ಇವರ ಜೊತೆ ಪ್ರಯಾಣ ಬೆಳೆಸಿದ್ದಾರೆ. ಮಾರ್ಗಮಧ್ಯದಲ್ಲಿ ಅವರು ಇಳಿದುಹೋಗಿದ್ದು, ಪುಟ್ಟಮಾದಮ್ಮ ಅವರ ಕತ್ತಿನಲ್ಲಿದ್ದ 30 ಗ್ರಾಂ ಸರ, 35 ಗ್ರಾಂ ಮಾಂಗಲ್ಯ ಸರ ಮಾಯವಾಗಿದ್ದು, ಯಳಂದೂರು ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಆಂಧ್ರ ರೈಲು ದುರಂತಕ್ಕೆ ಚಾಲಕ, ಸಹಾಯಕ ಚಾಲಕನ ಕ್ರಿಕೆಟ್ ಹುಚ್ಚು ಕಾರಣ: ಸಚಿವ ಅಶ್ವಿನಿ ವೈಷ್ಣವ್