ಮೈಸೂರು: ಧಾರ್ಮಿಕ, ಐತಿಹಾಸಿಕವಾಗಿ ಮಹತ್ವ ಪಡೆದಿರುವ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯನ್ನು ಸಾಕ್ಷೀಕರಿಸಲು ಸಾಂಸ್ಕೃತಿಕ ನಗರಿ ಮೈಸೂರಿನ ಜನತೆ ಸನ್ನದ್ಧರಾಗಿದ್ದಾರೆ. ನಗರದಲ್ಲಿ ರಾಮಜಪ ಅನವರತವಾಗಿ ನಡೆಯುತ್ತಿದೆ. ಹಿಂದೂಪರ ಸಂಘಟನೆಗಳು, ಸಂಘ, ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿವೆ. ದೇಗುಲಗಳಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಏರ್ಪಡಿಸಲಾಗಿದೆ.
ನಗರದ ಪ್ರಮುಖ ವೃತ್ತಗಳು, ಮುಖ್ಯ ರಸ್ತೆಗಳಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆಯನ್ನು ಸ್ವಾಗತಿಸುವ ಫ್ಲೆಕ್ಸ್ಗಳು ರಾರಾಜಿಸುತ್ತಿವೆ. ಹೀಗಾಗಿ, ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ವಿವಿಧೆಡೆ ವಿಶೇಷ ಪೂಜೆ: ಶಿವರಾಮ ಪೇಟೆಯ ಶ್ರೀರಾಮನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ತೆಲುಗು ರೆಡ್ಡಿ ಸಂಘದಿಂದ ತಿಲಕ್‌ನಗರದ ಮಂದಿರದಲ್ಲಿ ನೂತನ ವಿಗ್ರಹ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಕಾಂಗ್ರೆಸ್ ಸೇವಾದಳದಿಂದ ಸೀತಾರಾಮಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಮತ್ತು ಸರ್ವ ಧರ್ಮೀಯ ರಾಮ ಭಕ್ತರಿಂದ ರಕ್ತ ತಿಲಕ ಧ್ವಜವನ್ನು ಅಯೋಧ್ಯೆ ರಾಮ ಟ್ರಸ್ಟ್‌ಗೆ ರವಾನಿಸುವ ಕಾರ್ಯ ಜರುಗಲಿದೆ.
ಸೆಲ್ಫಿ ಪಾಯಿಂಟ್: ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯ ಆವರಣದಲ್ಲಿ ಬಿಲ್ಲುಹಿಡಿದ ಮಂದಸ್ಮಿತ ರಾಮನ ಕಟೌಟ್ ನಿರ್ಮಿಸಲಾಗಿದೆ. ಶ್ರೀರಾಮ ಮೂರ್ತಿಯೊಂದಿಗೆ ಫೋಟೋ ತೆಗೆದುಕೊಳ್ಳುವ ಸಲುವಾಗಿ ಸೆಲ್ಫಿ ಪಾಯಿಂಟ್ ಮಾಡಲಾಗಿದೆ.