ಕರ್ನಾಟಕ

karnataka

ETV Bharat / state

ಎತ್ತಿನಹೊಳೆ ಯೋಜನೆ ಮುಡಾಗಿಂತ ದೊಡ್ಡ ಹಗರಣ, ನ್ಯಾಯಾಧೀಶರಿಂದ ತನಿಖೆಯಾಗಲಿ: ಸಿ ಟಿ ರವಿ - Yettinhole project - YETTINHOLE PROJECT

ಎತ್ತಿನಹೊಳೆ ಯೋಜನೆ ಮತ್ತು ಮುಡಾ ಹಗರಣ ಸಂಬಂಧ ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಸಿ ಟಿ ರವಿ ಹಾಗೂ ರವಿಕುಮಾರ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರವಿಕುಮಾರ್ ಮತ್ತು ಸಿ ಟಿ ರವಿ
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರವಿಕುಮಾರ್ ಮತ್ತು ಸಿ ಟಿ ರವಿ (ETV Bharat)

By ETV Bharat Karnataka Team

Published : Sep 3, 2024, 4:39 PM IST

ಬೆಂಗಳೂರು:ಅಪೂರ್ಣವಾಗಿರುವ ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಕೆದಕಿದರೆ ಇದು ಮುಡಾಗಿಂತ ದೊಡ್ಡ ಹಗರಣವಾಗಲಿದೆ. ಹಾಗಾಗಿ ಎತ್ತಿನಹೊಳೆ ಯೋಜನೆ ಕುರಿತು ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸಬೇಕು ಎಂದು ಬಿಜೆಪಿ ಎಂಎಲ್​ಸಿ ಸಿ ಟಿ ರವಿ ಆಗ್ರಹಿಸಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಎತ್ತಿನಹೊಳೆ ಅಪೂರ್ಣ ಕಾಮಗಾರಿಯನ್ನು ಲೋಕಾರ್ಪಣೆ ಮಾಡಲು ಹೊರಟಿದ್ದಾರೆ. ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಒಂದು ವರ್ಷದೊಳಗೆ ನೀರು ಕೊಡೋದಾಗಿ ಹೇಳಿದ್ರು. ಆಗಲೂ ಸಿದ್ದರಾಮಯ್ಯ ಅವರೇ ಸಿಎಂ‌ ಆಗಿದ್ರು. ಯೋಜನಾ ವೆಚ್ಚ 8 ಸಾವಿರ ಕೋಟಿ, ಪರಿಷ್ಕೃತ 12 ಸಾವಿರ ಕೋಟಿ ರೂ. ಆಗಿತ್ತು. ಈಗ 24 ಸಾವಿರ ಕೋಟಿ ಆಗಿದೆ. ಈಗಾಗಲೇ 18 ಸಾವಿರ ಕೋಟಿ ಕೊಟ್ಟಿದ್ದಾರೆ. ಇದು ಏಳು ಜಿಲ್ಲೆಗೆ ನೀರು ಕೊಡುವ ಯೋಜನೆ. ಐಐಎಸ್ಸಿ 24 ಟಿಎಂಸಿ ನೀರು ಸಿಗಲ್ಲ ಅಂತ ವರದಿ ನೀಡಿತ್ತು. ಆದರೂ ನಿವೃತ್ತ ಅಧಿಕಾರಿಗಳನ್ನ ಬಳಸಿಕೊಂಡು 24 ಟಿಎಂಸಿ ನೀರಿದೆ ಅಂತ ಮೂಗಿಗೆ, ಮೊಣಕೈಗೆ ತುಪ್ಪ ಸವರಿದ್ರು. ಈಗ 8 ಟಿಎಂಸಿ ನೀರು ಮಾತ್ರ ಇದೆ ಅಂದಿದ್ದಾರೆ. ಯೋಜನಾ ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ, ನೀರು ಕಡಿಮೆ ಆಗಿದೆ ಎಂದರು.

ಸೆ.6ನೇ ತಾರೀಖಿನಿಂದ ಎಷ್ಟು ಕೆರೆ ನೀರು ತುಂಬಿಸ್ತೀರಿ.? ಕನಿಷ್ಠ 400 ಕೆರೆಗಾದ್ರೂ ನೀರು ತುಂಬಿಸಬೇಕಲ್ವಾ.? ಇನ್ನೂ ಎಷ್ಟು ಸಾವಿರ ಕೋಟಿ ವೆಚ್ಚ ಮಾಡ್ತೀರಿ.? ಚಿಕ್ಕಬಳ್ಳಾಪುರದಲ್ಲಿ ಹೇಳಿ ಹತ್ತು ವರ್ಷಗಳಾಯ್ತು. ನೀರು ಎಲ್ಲಿವರೆಗೂ ಹರಿಸ್ತೀರಿ. ಕೆದಕಿದ್ರೆ ಇದು ಮುಡಾಗಿಂತ ದೊಡ್ಡ ಹಗರಣ. ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸಬೇಕು ಎಂದು ಸಿ ಟಿ ರವಿ ಆಗ್ರಹಿಸಿದರು.

ಸಿಎ ಸೈಟ್ ವಿಚಾರದಲ್ಲಿ ಛಲವಾದಿ ನಾರಾಯಣಸ್ವಾಮಿ ಅವರನ್ನು ಮುಂದೆ ಬಿಟ್ಟಿದ್ದಾರೆ, ಬಿಜೆಪಿಯವರು ಮಾತಾಡ್ತಿಲ್ಲ ಅಂತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರ ಉತ್ತರಕ್ಕೆ ಇವರು ತಡೆದುಕೊಳ್ಳಲು ಆಗ್ತಿಲ್ಲ. ಇನ್ನು ನಾವೆಲ್ಲಾ ಮಾತಾಡಿದ್ರೆ ಏನಾಗಬಹುದು.? ಶೆಡ್ಡಲ್ಲಿದ್ದವನು ಅಂತೆಲ್ಲಾ ಹೇಳಿದ್ದಾರೆ. ಇನ್ನೇನು ಎಲ್ಲರೂ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲೇ ಹುಟ್ಟಬೇಕಾ.? ನಮ‌್ಮ ರಾಜ್ಯಾಧ್ಯಕ್ಷರೆಲ್ಲಾ ಮಾತಾಡಿದ್ರೆ ಅವರ ಪರಿಸ್ಥಿತಿ ಏನಾಗಬೇಕು? ದಲಿತರು ಅನ್ನೋ ಪೇಟೆಂಟ್ ನೀವೊಬ್ಬರೇ ಪಡೆದಿಲ್ಲ. ಇತರೆ ದಲಿತರಿಗೆ ಸೈಟ್ ಕೊಡಿಸಿದ್ರೆ ನಿಮ್ಮ ರಾಜಕೀಯಕ್ಕೆ ಪ್ರಾಯಶ್ಚಿತ್ತ ಸಿಗುತ್ತದೆ, ಮೊದಲು ಆ ಕೆಲಸ ಮಾಡಿ ಎಂದು ಟಾಂಗ್ ನೀಡಿದರು.

ಇದನ್ನೂ ಓದಿ: ಜೆಡಿಎಸ್​ ಚಿಹ್ನೆಯಿಂದ ಸ್ಪರ್ಧಿಸಲು ಹೈಕಮಾಂಡ್​ ಹೇಳಿದರೆ, ಅದಕ್ಕೂ ಬದ್ಧ: ಸಿ.ಪಿ.ಯೋಗೇಶ್ವರ್ - C P Yogeshwar

ಛಲವಾದಿ ನಾರಾಯಣಸ್ವಾಮಿ ನಮ್ಮ ಪಕ್ಷದ ನಾಯಕರು. ಅವರು ವಿಪಕ್ಷ ನಾಯಕರು. ಅವರು ಎತ್ತಿರೋ ಪ್ರಶ್ನೆ ಮೌಲ್ಯಯುತವಾಗಿದೆ. ಉಳಿದವರು ಅರ್ಜಿ ಹಾಕಿದ್ರಲ್ಲ ಅವರಿಗೆ ಯಾಕೆ ಸೈಟ್ ಕೊಟ್ಟಿಲ್ಲ. ಅವರು ನಿಮ್ಮ ಮನೆಯಲ್ಲಿ ಹುಟ್ಟಿಲ್ಲ ಅನ್ನೋದಾ? ಅಥವಾ ನಿಮ್ಮ ಸಂಬಂಧಿಗಳು ಅಲ್ಲ ಅನ್ನೋದಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ಗೆ ವೋಟ್ ಹಾಕದ ಜನರು ಸಾಮಾಜಿಕ ನ್ಯಾಯದವರಲ್ಲ ಅನ್ನೋ ಸಿಎಂ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿ ಟಿ ರವಿ, ಸಿಎಂ‌ ಅವರೇ ನಿಮ್ಮ‌ ಹೇಳಿಕೆ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ. ಕಾಂಗ್ರೆಸ್‌ಗೆ ವೋಟ್ ಹಾಕದಿದ್ರೆ ಸಾಮಾಜಿಕ ನ್ಯಾಯವಲ್ಲ ಅನಿಸಿದೆ. ಕೇಂದ್ರ ಸರ್ಕಾರ ಇವರ ಹತ್ತು ಪಟ್ಟು ಕೊಡ್ತಾರೆ. ಮೋದಿ ಅವರನ್ನ ನೋಡಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಕಲಿಯಬೇಕು. ತಾರತಮ್ಯ ಇಲ್ಲದೆ ಸಾಮಾಜಿಕ ನ್ಯಾಯ ಕೊಡಬೇಕು. ಅನೇಕ ಯೋಜನೆ ಕೊಟ್ಟಿರೋ ಮೋದಿ ಸಾಮಾಜಿಕ ನ್ಯಾಯದ ಹರಿಕಾರ ಅನಿಸಲಿಲ್ಲ ಎಂದು ಟೀಕಿಸಿದರು.

ಆರ್.ಟಿ.ಐ ಕಾರ್ಯಕರ್ತರು ಮುಡಾ ಹಗರಣ ಬಯಲಿಗೆಳೆಯುವ ಕೆಲಸ‌ ಮಾಡಿದರು. ಗಂಗರಾಜು, ಸ್ನೇಹಮಯಿ ಕೃಷ್ಣಾಗೆ ಬೆದರಿಕೆ ಕರೆ ಬಂದಿದೆ. ಇದನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು. ಸಿಎಂ ವಿರುದ್ಧ ಪ್ರಕರಣ ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

ಮುಡಾ ಹಗರಣ ಕುರಿತ ತಾಂತ್ರಿಕ ಸಮಿತಿ ವರದಿ ಬಿಡುಗಡೆ ಮಾಡಿ: ರವಿಕುಮಾರ್ ಆಗ್ರಹ

ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅವರನ್ನ ಅಮಾನತುಗೊಳಿಸಿದ್ದಾರೆ. ಮುಡಾ ಹಗರಣದಲ್ಲಿ ಇದು ಮೊದಲ ಅಧಿಕಾರಿಯ ತಲೆದಂಡ ಆಗಿದೆ. ಆದರೆ ಇದಕ್ಕೆ ಮೊದಲು ಕಾರಣ ಆದ ನಟೇಶ್ ವಿರುದ್ಧ ಕ್ರಮವಿಲ್ಲ, ಅವರನ್ನ ರಕ್ಷಣೆ ಮಾಡ್ತಿದ್ದೀರಾ ಎಂದು ರಾಜ್ಯ ಸರ್ಕಾರವನ್ನು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಪ್ರಶ್ನಿಸಿದರು.

ಬೊಮ್ಮಾಯಿ ಅವಧಿಯಲ್ಲಿ ತಾಂತ್ರಿಕ ಸಮಿತಿ ರಚನೆ ಮಾಡಲಾಗಿತ್ತು. ಟೆಕ್ನಿಕಲ್ ಕಮಿಟಿ 2023ರಲ್ಲಿ ರಿಪೋರ್ಟ್‌ ನೀಡಿದೆ. ಅದನ್ನ ಸರ್ಕಾರ ಬಿಡುಗಡೆ ಮಾಡಬೇಕು. ಮುಡಾ ಹಗರಣದಲ್ಲಿ ನಡೆದಿರೋ ಭ್ರಷ್ಟಾಚಾರ ಕುರಿತಂತೆ ತನಿಖೆ ಆಗಬೇಕು. ಸಿಎಂ‌ ಸಿದ್ದರಾಮಯ್ಯ ಅವರ ಪತ್ನಿಗೆ ಅಕ್ರಮವಾಗಿ ಸೈಟ್ ಪಡೆದಿರುವ ಬಗ್ಗೆ ತನಿಖೆ ಆಗಬೇಕು. ಕೆಯುಡಿಎ ನಿಯಮಗಳನ್ನ ಪಾಲನೆ ಮಾಡಿಲ್ಲ ಅಂತ ದಿನೇಶ್ ಕುಮಾರ್ ಅವರನ್ನು ಸಸ್ಪೆಂಡ್ ಮಾಡಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: 'ನಾನು ದರ್ಶನ್ ಆತ್ಮೀಯ ಸ್ನೇಹಿತರು, ಆದ್ರೆ ಅವರು ತಪ್ಪು ಮಾಡಿ ಜೈಲಿಗೆ ಹೋಗಿದ್ದಾರೆ': ಸಚಿವ ಜಮೀರ್ ಅಹ್ಮದ್ - Minister Zameer Ahmed

ABOUT THE AUTHOR

...view details