ಬೆಂಗಳೂರು: ಇಸ್ರೋ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದ ವಿಜ್ಞಾನಿ ಡಾ.ವಿ.ನಾರಾಯಣ್ ಅವರು ಸೋಮವಾರ ಮಧ್ಯಾಹ್ನ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ, ಬಾಹ್ಯಾಕಾಶ ಆಯೋಗದ ಅಧ್ಯಕ್ಷ ಮತ್ತು ಇಸ್ರೋ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ವಿ.ನಾರಾಯಣ್ ಇದಕ್ಕೂ ಮೊದಲು ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ (LPSC)ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
1984ರಲ್ಲಿ ಇಸ್ರೋಗೆ ಸೇರಿದ ನಾರಾಯಣ್ ಹಲವು ದಶಕಗಳಿಂದ ದೇಶದ ಬಾಹ್ಯಾಕಾಶ ಯೋಜನೆಗಳಿಗೆ ಗಣನೀಯ ಕೊಡುಗೆ ನೀಡಿದ್ದಾರೆ. 2018ರ ಜನವರಿಯಲ್ಲಿ LPSC ನಿರ್ದೇಶಕರಾದರು. ಈ ಮೂಲಕ ರಾಕೆಟ್ ಮತ್ತು ಬಾಹ್ಯಾಕಾಶ ನೌಕೆ ಪ್ರೊಪಲ್ಷನ್ ತಂತ್ರಜ್ಞಾನಗಳ ನೇತೃತ್ವ ವಹಿಸಿದ್ದರು.
ಸಾಮಾನ್ಯ ಹಿನ್ನೆಲೆಯಿಂದ ಬಂದ ನಾರಾಯಣನ್ ಅವರು ಐಐಟಿ ಖರಗ್‌ಪುರದ ಹಳೆಯ ವಿದ್ಯಾರ್ಥಿ. ಅಲ್ಲಿ ಕ್ರಯೋಜೆನಿಕ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ. ಎಂ.ಟೆಕ್ನಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದ ಇವರು ಬೆಳ್ಳಿ ಪದಕ ಪಡೆದಿದ್ದರು. 2018ರಲ್ಲಿ ಡಿಸ್ಟಿಂಗ್ವಿಶ್ಡ್ ಅಲುಮ್ನಿ ಪ್ರಶಸ್ತಿ ಮತ್ತು 2023ರಲ್ಲಿ ಐಐಟಿ ಖರಗ್‌ಪುರದಿಂದ ಲೈಫ್ ಫೆಲೋಶಿಪ್ ಪ್ರಶಸ್ತಿ ಪಡೆದಿದ್ದಾರೆ.
ಇಸ್ರೋ ಸೇರುವ ಮೊದಲು ನಾರಾಯಣನ್ ಅವರು ಟಿಐ ಡೈಮಂಡ್ ಚೈನ್ ಲಿಮಿಟೆಡ್, ಮದ್ರಾಸ್ ರಬ್ಬರ್ ಫ್ಯಾಕ್ಟರಿ, ತಿರುಚ್ಚಿ ಮತ್ತು ರಾಣಿಪೇಟೆಯಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್)ನಲ್ಲಿ ಅಲ್ಪಾವಧಿಗೆ ಕೆಲಸ ಮಾಡಿದ್ದರು.
ಭಾರತಕ್ಕೆ GSLV Mk-ll ವಾಹನಕ್ಕೆ ಕ್ರಯೋಜೆನಿಕ್ ತಂತ್ರಜ್ಞಾನವನ್ನು ನಿರಾಕರಿಸಿದಾಗ, ವಿ.ನಾರಾಯಣ್ ಎಂಜಿನ್ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಿದರು. ಅಗತ್ಯ ಸಾಫ್ಟ್‌ವೇರ್ ಪರಿಕರಗಳನ್ನು ಅಭಿವೃದ್ಧಿಪಡಿಸಿದರು. ಜೊತೆಗೆ, ಅಗತ್ಯ ಮೂಲಸೌಕರ್ಯ ಮತ್ತು ಪರೀಕ್ಷಾ ಸೌಲಭ್ಯಗಳನ್ನು ಸ್ಥಾಪಿಸಲು, ಪರೀಕ್ಷೆ ಮತ್ತು ಅರ್ಹತೆ ಪಡೆಯಲು ಮತ್ತು ಕ್ರಯೋಜೆನಿಕ್ ಅಪ್ಪರ್ ಸ್ಟೇಜ್ (CUS) ಅಭಿವೃದ್ಧಿಯನ್ನು ಪೂರ್ಣಗೊಳಿಸಲು ಮತ್ತು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ.
ಚಂದ್ರಯಾನ ಕಾರ್ಯಾಚರಣೆಗಳಲ್ಲಿ ನಾರಾಯಣನ್ ಪ್ರಮುಖ ಪಾತ್ರ ವಹಿಸಿದ್ದರು. ಚಂದ್ರಯಾನ-2 ಮತ್ತು 3ಕ್ಕಾಗಿ, L110 ದ್ರವ ಹಂತ, C25 ಕ್ರಯೋಜೆನಿಕ್ ಹಂತ ಮತ್ತು ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯನ್ನು ತಲುಪಲು ಮತ್ತು ಮೃದುವಾದ ಇಳಿಯುವಿಕೆ ಸಾಧಿಸಲು ಅನುವು ಮಾಡಿಕೊಡುವ ಪ್ರೊಪಲ್ಷನ್ ವ್ಯವಸ್ಥೆಗಳ ಅಭಿವೃದ್ಧಿಯ ನೇತೃತ್ವ ವಹಿಸಿದ್ದರು. ನಾರಾಯಣನ್ ಗಗನಯಾನ ಕಾರ್ಯಕ್ರಮದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ: ಇಸ್ರೋ ನೂತನ ಮುಖ್ಯಸ್ಥರಾಗಿ ವಿ.ನಾರಾಯಣನ್ ಆಯ್ಕೆ: ಯಾರಿವರು ಗೊತ್ತಾ?