ಬೆಂಗಳೂರು: ಉದ್ಯಮಿಗಳು, ಸೆಲೆಬ್ರೆಟಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡಿ ಅಕ್ರಮವಾಗಿ ಹಣ ಗಳಿಸಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದ ಆರೋಪದಲ್ಲಿ ನಟಿ ರಾಗಿಣಿ ದ್ವಿವೇದಿ ಮತ್ತು ಪ್ರಶಾಂತ್ ರಂಕ ವಿರುದ್ಧ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ಈ ಸಂಬಂಧ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ರಾಗಿಣಿ ಮತ್ತು ಪ್ರಶಾಂತ್ ರಂಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ ಅವರಿದ್ದ ಪೀಠ ಈ ಆದೇಶ ನೀಡಿತು.
ಆರೋಪಪಟ್ಟಿಯಲ್ಲಿ ಸಾಕ್ಷ್ಯಾಧಾರಗಳು ಮತ್ತು ಇತರೆ ಆರೋಪಗಳ ಹೇಳಿಕೆಗಳನ್ನು ಹೊರತುಪಡಿಸಿದರೆ ಅರ್ಜಿದಾರರು ಪಾರ್ಟಿಗಳನ್ನು ಆಯೋಜನೆ ಮಾಡುವುದು ಅಥವಾ ಮಾದಕ ವಸ್ತುಗಳನ್ನು ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಹೀಗಾಗಿ ಅರ್ಜಿದಾರರ ವಿರುದ್ದ ಕ್ರಿಮಿನಲ್ ವಿಚಾರಣಾ ಪ್ರಕ್ರಿಯೆ ಮುಂದುವರೆಯುವುದು ಕಾನೂನಿನ ದುರ್ಬಳಕೆಯಾಗುತ್ತದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಪಾರ್ಟಿ ಆಯೋಜಿಸಿ ಅಲ್ಲಿಗೆ ಆಗಮಿಸುವವರಿಗೆ ಮಾದಕ ದ್ರವ್ಯ ಸರಬರಾಜು ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದರು ಎಂಬ ಆರೋಪದ ಮೇರೆಗೆ ಸಿಸಿಬಿಯ ಎಸಿಪಿ ಕೆ.ಸಿ.ಗೌತಮ್ ಎಂಬವರು ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಅರ್ಜಿದಾರರು ಮತ್ತಿತರರ ವಿರುದ್ಧ 2020ರ ಸೆಪ್ಟಂಬರ್ 4ರಂದು ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿ 2021ರ ಜೂನ್ 8ರಂದು ಪೊಲೀಸರು ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.
ಅಲ್ಲದೆ, 2020ರ ಜುಲೈ ತಿಂಗಳ ವಿವಿಧ ದಿನಗಳಂದು ಪಾರ್ಟಿ ಆಯೋಜಿಸಿ ಅಲ್ಲಿಗೆ ಆಗಮಿಸುವವರಿಗೆ ಮಾದಕ ದ್ರವ್ಯಗಳನ್ನು ವಿತರಿಸಿದ್ದಾರೆ ಎಂಬುದಾಗಿಯೂ ಆರೋಪಿಗಳ ಹೇಳಿಕೆಗಳನ್ನು ಆರೋಪಪಟ್ಟಿಯಲ್ಲಿ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಈ ವರ್ಷ ಡ್ರಗ್ಸ್ ಘಾಟು ಕೊಂಚ ಇಳಿಸಿದ ಪೊಲೀಸರು: ₹95 ಕೋಟಿ ಮೌಲ್ಯದ ತರಹೇವಾರಿ ಡ್ರಗ್ಸ್ ಜಪ್ತಿ
ಇದನ್ನೂ ಓದಿ: ಡ್ರಗ್ಸ್ ಜಪ್ತಿಯಾದ 48 ಗಂಟೆಯೊಳಗೆ ಪೊಲೀಸರು ಕೋರ್ಟ್‌ಗೆ ಪಂಚನಾಮೆ ವರದಿ ಸಲ್ಲಿಸುವುದು ಕಡ್ಡಾಯ