ಚಿಕ್ಕೋಡಿ(ಬೆಳಗಾವಿ): ಆಧುನಿಕತೆ ಬೆಳೆದಂತೆಲ್ಲ ಸಮಾಜದಲ್ಲಿ ಕೂಡು ಕುಟುಂಬಗಳು ಕಣ್ಮರೆಯಾಗಿ ವಿಭಕ್ತ ಕುಟುಂಬಗಳ ಸಂಖ್ಯೆಯೇ ಜಾಸ್ತಿಯಾಗುತ್ತಿವೆ. ನಾವು, ನಮ್ಮವರು ಎಂಬ ಭಾವನೆ ಮರೆಯಾಗುತ್ತಿರುವ ಹೊತ್ತಿನಲ್ಲಿಯೇ ಅಥಣಿ ತಾಲೂಕಿನ ಈ ಕುಟುಂಬ ಇದೀಗ ಎಲ್ಲರ ಗಮನ ಸೆಳೆದಿದೆ.
ಅಥಣಿ ತಾಲೂಕಿನ ಸವದಿ ಗ್ರಾಮದ ಸಾರವಾಡ ಕುಟುಂಬವು ಮೂರು ದಶಕಗಳಿಂದಲೂ ಸಹ ಕೂಡು ಜೀವನ ಸಾಗಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಮಾತಿಗೆ ಈ ಕುಟುಂಬ ಅರ್ಹವಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಒಂದಾಗಿದ್ದರೆ ಯಾವುದೇ ಚಿಂತೆಗೆ ಜಾಗವಿಲ್ಲ ಎಂಬ ಮಾತಿಗೆ ಸ್ಪಷ್ಟ ನಿದರ್ಶನ ಈ ಕುಟುಂಬವಾಗಿದೆ ಎಂದರೆ ತಪ್ಪಾಗಲಾರದು.
ಈ ಬಗ್ಗೆ ಕುಟುಂಬದ ಮುಖ್ಯಸ್ಥ ಬಸಪ್ಪ ಸಾರವಾಡ ಈಟಿವಿ ಭಾರತ್‌ದೊಂದಿಗೆ ಮಾತನಾಡಿ, "ನಾವು ಒಟ್ಟು ಐದು ಜನ ಸಹೋದರರಿದ್ದೇವೆ. ಅವರಿಗೆ ತಲಾ 2 ರಂತೆ 10 ಜನ ಗಂಡು ಹಾಗೂ ಐದು ಜನ ಹೆಣ್ಣು ಮಕ್ಕಳಿದ್ದಾರೆ. ನಾವು ಕೂಡಿ ಬಾಳುತ್ತಿರುವುದರಿಂದ ನಮ್ಮಲ್ಲಿ ಯಾವುದೇ ವೈಮನಸ್ಸಿಗೆ ಆಸ್ಪದ ಇಲ್ಲ. ಇದರಿಂದ ನಮಗೆ ಸಾಕಷ್ಟು ಅನುಕೂಲಗಳಾಗಿವೆ. ಎಲ್ಲಕ್ಕಿಂತ ಪ್ರಮುಖವಾಗಿ ಬಾಂಧವ್ಯಕ್ಕೆ ಹೊಸ ಅರ್ಥವೇ ಬಂದಿದೆ. 75 ವರ್ಷದ ನಾನು ಈ ಕುಟುಂಬದ ಯಜಮಾನನಾಗಿ ಎಲ್ಲರನ್ನೂ ಸಮನಾಗಿ ಕಾಣುತ್ತಾ, ಅತ್ಯಂತ ಪ್ರೀತಿ-ವಿಶ್ವಾಸದಿಂದ ಅನ್ಯೋನ್ಯವಾಗಿ ಜೀವಿಸುತ್ತಿರುವುದು ಸಂತೋಷ ನೀಡಿದೆ" ಎಂದು ಸಂತಸ ವ್ಯಕ್ತಪಡಿಸಿದರು.
ಅವಿಭಕ್ತ ಕುಟುಂಬ ಪದ್ಧತಿ ಅನುಸರಿಸಿದರೆ ಒಳಿತು: ಬಸಪ್ಪ ಅಜ್ಜನ ಮೊಮ್ಮಗಳಾದ ಐಶ್ವರ್ಯ ಮಾತನಾಡಿ, ''ನಮ್ಮ ಹಿರಿಯರ ಕಾಲದಿಂದಲೂ ನಮ್ಮಲ್ಲಿ ಎಲ್ಲರೂ ಒಗ್ಗಟ್ಟಾಗಿಯೇ ಜೀವಿಸುತ್ತಿದ್ದಾರೆ. ಒಂದೇ ಕುಟುಂಬದಲ್ಲಿ ನಾವು 50 ಜನರು ಅತ್ಯಂತ ಪ್ರೀತಿ-ಸಹಬಾಳ್ವೆಯಿಂದ ಬದುಕುತ್ತಿರುವುದು ನಮಗೆ ಹೆಮ್ಮೆಯಾಗುತ್ತದೆ. ನಮ್ಮ ತಂದೆಯ ಆದಿಯಾಗಿ 10 ಜನರು ಚಿಕ್ಕಪ್ಪಂದಿರು, ಅಜ್ಜಂದಿರು ಐದು ಜನ, ನಮ್ಮ ಸಹೋದರರು 16 ಜನ ಸೇರಿದಂತೆ ನಾವು ಸಹೋದರಿಯರು 3 ಜನರಿದ್ದೇವೆ. ನಮ್ಮದೊಂದು ಅವಿಭಕ್ತ ಕುಟುಂಬ ಎಂದು ನನ್ನ ಗೆಳತಿಯರ ಬಳಿ ಹೇಳಿಕೊಳ್ಳಲು ನನಗೆ ಗರ್ವವೆನಿಸುತ್ತದೆ'' ಎಂದರು.
''ಆದರೆ, ಕೆಲವರು ತಮ್ಮ ವಿಭಕ್ತ ಕುಟುಂಬದ ಬಗ್ಗೆ ಹೇಳುತ್ತಿರುತ್ತಾರೆ. ಅದರ ಬಗ್ಗೆ ಚರ್ಚಿಸದೆ ಕೂಡು ಕುಟುಂಬದ ಕುರಿತು ಅವರೆದುರು ಅಭಿಮಾನದಿಂದ ಮಾತನಾಡುತ್ತೇನೆ. ಅವಿಭಕ್ತ ಕುಟುಂಬದಲ್ಲಿ ಬದುಕು ನಡೆಸಿದರೆ ಅದರ ಮಜವೇ ಬೇರೆ ಇರುತ್ತದೆ. ಒಂದು ಕೆಲಸವನ್ನು ಒಬ್ಬರೆ ಮಾಡುವುದು, ಇಡೀ ಕುಟುಂಬಸ್ಥರು ಸೇರಿ ಕೈಗೊಳ್ಳುವುದರಲ್ಲಿ ತುಂಬಾ ವ್ಯತ್ಯಾಸವಿದೆ. ಅದಕ್ಕಾಗಿ ಎಲ್ಲರೂ ಕೂಡು ಜೀವನ ನಡೆಸಿದರೆ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯಬಹುದು. ಅವಿಭಕ್ತ ಕುಟುಂಬ ಪದ್ಧತಿ ಅನುಸರಿಸಿದರೆ ಒಳಿತು'' ಎಂದು ಹರ್ಷ ವ್ಯಕ್ತಪಡಿಸಿದರು.
ಸಾರಾವಾಡ ಕುಟುಂಬದ ಕಿರಿಯ ಸೊಸೆ ಶೈಲಾ ಸಾರವಾಡ ಮಾತನಾಡಿ, ''ನಾನು ಚಿಕ್ಕವಳಿದ್ದಾಗ ನನ್ನ ತಂದೆ ಅಗಲಿದ್ದಾರೆ. ನನಗೆ ತಂದೆ-ತಾಯಿ ಎಲ್ಲವೂ ಇವರೇ. ಇಂತಹ ಕುಟುಂಬದಲ್ಲಿ ಸೊಸೆಯಾಗಿ ಬಂದಿದ್ದು ನನಗೆ ಸಂತೋಷವಾಗುತ್ತಿದೆ. ನಾವು ಹತ್ತು ಜನ ಇದ್ದರೂ ಸಹ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಬಂದಿಲ್ಲ. ನಾವೆಲ್ಲರೂ ಒಟ್ಟಾಗಿಯೇ ಜೀವಿಸುತ್ತಿದ್ದೇವೆ. ನಮ್ಮನ್ನು ಸೊಸೆಯರೆಂದು ಭಾವಿಸದೆ ಸ್ವಂತ ಹೆಣ್ಣು ಮಗಳಂತೆ ಇಡೀ ಕುಟುಂಬಸ್ಥರು ಕಾಣುತ್ತಿರುವುದು ಕುಟುಂಬದ ಸಂಸ್ಕಾರವನ್ನು ತಿಳಿಸುತ್ತದೆ'' ಎಂದು ಭಾವುಕರಾದರು.
ಎಲ್ಲರೂ ಅತ್ಯಾಪ್ತತೆಯಿಂದ ಜೀವಿಸುತ್ತಿದ್ದೇವೆ: ಕುಟುಂಬದ ಹಿರಿಯರಾದ ನಿಂಗಪ್ಪ ಸಾರವಾಡ ಮಾತನಾಡಿ, ''ಮೂಲತಃ ನಾವು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಅನುಯಾಯಿಗಳು. ಅವರ ಮಾರ್ಗದಲ್ಲಿಯೇ ಸಾಗುತ್ತಿದ್ದೇವೆ. ಕೂಡು ಕುಟುಂಬಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ನಮ್ಮ ಮನೆಗೆ ಭೇಟಿ ನೀಡಿದ್ದ ವೇಳೆ ಒಗ್ಗಟ್ಟಿನಿಂದ ಬದುಕಲು ಸಲಹೆ ನೀಡಿದ್ದರು. ಅವರ ಪ್ರವಚನ, ಮಾತುಗಳಿಂದ ಪ್ರೇರಿತರಾಗಿ ನಾವೆಲ್ಲರೂ ಸಹಬಾಳ್ವೆ ನಡೆಸುತ್ತಿದ್ದೇವೆ. ನಾವು ಐದು ಜನ ಸಹೋದರರು. ನಮಗೆ 10 ಜನ ಗಂಡು ಮಕ್ಕಳು, 20 ಜನ ಮೊಮ್ಮಕ್ಕಳು ಸೇರಿದಂತೆ ಎಲ್ಲರೂ ಅತ್ಯಾಪ್ತತೆಯಿಂದ ಜೀವಿಸುತ್ತಿದ್ದೇವೆ. ಇದಕ್ಕೂ ಮೊದಲೇ ಮೂರು ತಲೆಮಾರುಗಳಿಂದಲೂ ನಾವು ಒಂದಾಗಿ ಬದುಕುತ್ತಿದ್ದೇವೆ'' ಎಂದು ಹೇಳಿದರು.
''ಮುಖ್ಯವಾಗಿ ಕೃಷಿಯನ್ನೇ ನಂಬಿ ಜೀವನ ನಡೆಸುವವರು ನಾವು. ಒಕ್ಕಲುತನದಿಂದಲೇ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. 50 ಜನ ಇರುವಿಕೆಯಿಂದ ಯಾವುದೇ ಕೆಲಸಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಒಬ್ಬೊಬ್ಬರು ಒಂದೊಂದು ಕೆಲಸ ನಿರ್ವಹಿಸುವ ಮೂಲಕ ಎಷ್ಟೇ ಆಯಾಸಕರವಾದ ಕಾರ್ಯವನ್ನೂ ಸುಲಭದಲ್ಲಿ ಮಾಡುತ್ತೇವೆ. ಒಬ್ಬರು ಜಮೀನಿಗೆ ನೀರು ಹಾಯಿಸಿದರೆ, ಇನ್ನೊಬ್ಬರು ಜಾನುವಾರುಗಳ ಮೇವಿನ ಕಡೆಗೆ ಗಮನ ಹರಿಸುವುದು, ಇನ್ನೊಬ್ಬರು ಇನ್ನಿತರ ವ್ಯವಹಾರಗಳನ್ನು ನೋಡಿಕೊಂಡು ಎಲ್ಲರೂ ಒಂದೊಂದು ರೀತಿಯ ಜವಾಬ್ದಾರಿ ನಿಭಾಯಿಸುವ ಮೂಲಕ ಸಂತಸದಿಂದ ಬಾಳುವೆ ನಡೆಸುತ್ತಿದ್ದೇವೆ. ಹೀಗೆ ಇರುವುದರಿಂದ ನಮಗೆ ಯಾವುದೇ ರೀತಿಯ ಅನಾನುಕೂಲ ಇಲ್ಲ. ನಾವು ಒಟ್ಟು 60 ಎಕರೆ ಜಮೀನನ್ನು ಹೊಂದಿದ್ದು, ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳು ಉನ್ನತ ಶಿಕ್ಷಣ ವಿದ್ಯಾಭ್ಯಾಸ ಮಾಡುತ್ತಿದ್ದಾರೆ'' ಎಂದು ತಿಳಿಸಿದರು.
ಕಲಿಯುಗದಲ್ಲಿ ಕೇವಲ ಸ್ವಾರ್ಥ ಹಾದಿಯಲ್ಲಿ ಸಾಗುವ ಅದೆಷ್ಟೋ ವಿಭಕ್ತ ಕುಟುಂಬಗಳ ಮಧ್ಯೆ ಅವಿಭಕ್ತತೆಯಿಂದ ಬದುಕಿ ಬಾಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವ ಸಾರವಾಡ ಕುಟುಂಬಸ್ಥರು ನಿಜಕ್ಕೂ ಪುಣ್ಯವಂತರೇ ಆಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
ಇದನ್ನೂ ಓದಿ: 80ರ ವೃದ್ಧ ದಂಪತಿಗೂ ನೆರವಾದ ನರೇಗಾ; ಖಾನಾಪುರದ ಅಜ್ಜ-ಅಜ್ಜಿಯ ಸ್ವಾವಲಂಬಿ ಮಾದರಿ ಬದುಕು - ELDERLY COUPLE WORKING IN NREGA