ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನ ಪವಾಡ ಪುರುಷ ಘನನೀಲಿ ಸಿದ್ದಪ್ಪಾಜಿ ಜಾತ್ರೆಯ ಮೊದಲ ದಿನ ಚಂದ್ರ ಮಂಡಲೋತ್ಸವ ಸಹಸ್ರಾರು ಜನರ ಹರ್ಷೋದ್ಗಾರ ನಡುವೆ ನೆರವೇರಿದೆ.
ರಾಜ ಬೊಪ್ಪೆಗೌಡನ ಪುರದ ಪೀಠಾಧಿಪತಿ ಶ್ರೀ ಜ್ಞಾನಾನಂದ ಚೆನ್ನರಾಜೇ ಅರಸ್ ಅವರು ಚಂದ್ರಮಂಡಲಕ್ಕೆ ರಾತ್ರಿ 11.42ರ ವೇಳೆಗೆ ಅಗ್ನಿಸ್ಪರ್ಶ ಮಾಡಿದರು. ಆಕಾಶಾಭಿಮುಖವಾಗಿ ಹೊತ್ತಿ ಉರಿದ ಚಂದ್ರಮಂಡಲದ ಜ್ಯೋತಿ ಉತ್ತರ ದಿಕ್ಕಿಗೆ ವಾಲಿತು. ಚಂದ್ರ ಮಂಡಲದ ಬೆಂಕಿಯ ಜ್ವಾಲೆ ಯಾವ ದಿಕ್ಕಿಗೆ ವಾಲುತ್ತದೆೋ ಆ ಭಾಗಕ್ಕೆ ವರ್ಷವಿಡೀ ಮಳೆ, ಬೆಳೆ ಹಾಗೂ ಸಕಲವೂ ಸಮೃದ್ಧಿಯಾಗುತ್ತದೆ ಎಂಬುದು ನಂಬಿಕೆ.
ನೀಲಗಾರರ ಪರಂಪರೆಯವರು, ಭಕ್ತರು ಚಂದ್ರಮಂಡಲದ ಭಸ್ಮಕ್ಕಾಗಿ ಮುಗಿಬಿದ್ದು ಹಣೆಗೆ ಹಚ್ಚಿಕೊಂಡು ಭಕ್ತಿಭಾವ ಮೆರೆದರು. ಚಂದ್ರ ಮಂಡಲಕ್ಕೂ ಮುನ್ನ ಸಿದ್ದಪ್ಪಾಜಿ ಗದ್ದುಗೆಗೆ ಕಂಡಾಯಗಳ ಮೆರವಣಿಗೆ ತಮಟೆ, ಡೊಳ್ಳು, ಜಾಗಟೆ ಮೂಲಕ ಆಗಮಿಸಿ ಪ್ರದಕ್ಷಿಣೆ ಮಾಡಲಾಯಿತು. ಈ ವೇಳೆ ನೆರೆದಿದ್ಧ ಭಕ್ತಸಾಗರ ಜಯಘೋಷ ಮೊಳಗಿಸಿತು.
ಐದು ದಿನಗಳ ಕಾಲ ನಡೆಯುವ ಈ ಜಾತ್ರೆ ಚಂದ್ರಮಂಡಲೋತ್ಸವದಿಂದ ಆರಂಭಗೊಂಡಿದ್ದು, ಮುತ್ತತ್ತಿರಾಯನ ಸೇವೆಯಲ್ಲಿ ಸಂಪನ್ನವಾಗಲಿದೆ. ಜಾತ್ರೆಯ 4ನೇ ದಿನದಂದು ಪಂಕ್ತಿಸೇವೆ ಎಂಬ ವಿಶಿಷ್ಟ ಆಚರಣೆ ನಡೆಯಲಿದೆ. ಈ ವೇಳೆ ಸಿದ್ದಪ್ಪಾಜಿ, ಮಂಟೇಸ್ವಾಮಿ ದೇವರಿಗೆ ಅನ್ನ, ಮುದ್ದೆ, ಮಾಂಸದ ಭಕ್ಷ್ಯಗಳನ್ನು ಎಡೆ ಇಟ್ಟು ಪೂಜೆ ಸಲ್ಲಿಸಿ, ಸಹಪಂಕ್ತಿ ಭೋಜನ ಸವಿಯುತ್ತಾರೆ. ಇದಕ್ಕೆ ಪಂಕ್ತಿ ಸೇವೆ ಎನ್ನುತ್ತಾರೆ. ಪ್ರತಿಬಾರಿಯೂ ಜಿಲ್ಲಾಡಳಿತ ಮತ್ತು ಭಕ್ತರ ನಡುವೆ ಮಾಂಸಹಾರದ ವಿಚಾರಕ್ಕೆ ಜಟಾಪಟಿ ಇದ್ದೇ ಇರುತ್ತದೆ.
ಜ.17ರವರೆಗೆ ನಡೆಯುವ ಜಾತ್ರೆಯಲ್ಲಿ ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮದನ್ವಯ ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿಬಲಿ ನೀಡುವುದು ಮತ್ತು ಮಾರಕಾಸ್ತ್ರ ತರುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ಹಾವೇರಿಯ ತೋಪಿನ ದುರ್ಗಾದೇವಿಗಿಲ್ಲ ಪ್ರಾಣಿ ಬಲಿ: ಇಲ್ಲಿ ಹಣ್ಣುಕಾಯಿಯೇ ನೈವೇದ್ಯ - DURGADEVI FAIR