ಬೆಂಗಳೂರು:ಉಡುಪಿ-ಚಿಕ್ಕಮಗಳೂರಿನಿಂದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಆಗಮಿಸಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತದಾರರನ್ನು ನೇರವಾಗಿ ತಲುಪುವ ಮೂಲಕ ಭರ್ಜರಿ ಮತಯಾಚನೆ ಕೈಗೊಂಡಿದ್ದಾರೆ.
ಕ್ಷೇತ್ರ ಬದಲಾವಣೆ ಆದರೂ ಉತ್ಸಾಹದಲ್ಲಿ ಬದಲಾವಣೆ ಮಾಡಿಕೊಳ್ಳದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಅಶ್ವತ್ಥನಾರಾಯಣ್, ಗೋಪಾಲಯ್ಯ ಸೇರಿದಂತೆ ಸ್ಥಳೀಯ ಶಾಸಕರು, ಬಿಜೆಪಿ ಮುಖಂಡರ ಜತೆ ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿರುವ ಹವ್ಯಕ ಭವನದಲ್ಲಿ ಆಯೋಜಿಸಿದ್ದ ಕಾಫಿ ವಿತ್ ಶೋಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶೋಭಾ ಕರಂದ್ಲಾಜೆ, ಲೋಕಸಭಾ ಚುನಾವಣೆಗೆ ಸಹಕಾರ ಕೋರಿದರು. ಸಂವಾದದ ಮೂಲಕ ಮತದಾರರಿಗೆ ಕೇಂದ್ರದ ಸಾಧನೆಗಳ ಮನವರಿಕೆ ಮಾಡಿಕೊಟ್ಟು ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಬೆಂಬಲಿಸುವಂತೆ ಮನವಿ ಮಾಡಿದರು.
ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಶೋಭಾ ಕರಂದ್ಲಾಜೆ ಪ್ರಚಾರ ಕೈಗೊಂಡಿರುವುದು. ಅಪಾರ್ಟ್ಮೆಂಟ್ ನಿವಾಸಿಗಳ ಜತೆ ಸಂವಾದ:ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿರುವ ಬ್ರಿಗೇಡ್ ಅಪಾರ್ಟ್‌ಮೆಂಟ್ ಹಾಗೂ ರೆನೈಸೆನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಸಭೆಯಲ್ಲಿ ಭಾಗಿಯಾದ ಶೋಭಾ, ಅಪಾರ್ಟ್ಮೆಂಟ್ ನಿವಾಸಿಗಳ ಜತೆ ಸಂವಾದ ನಡೆಸಿದರು. ವಿಕಸಿತ ಭಾರತದ ಪರಿಕಲ್ಪನೆ ವಿವರಿಸಿ ಚುನಾವಣೆಗೆ ಸಹಕಾರ ಕೋರಿದರು. ಅಪಾರ್ಟ್ಮೆಂಟ್ ನಿವಾಸಿಗಳ ಮತಗಳು ಗಣನೀಯ ಪ್ರಮಾಣದಲ್ಲಿದ್ದು ಪ್ರಮುಖ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ಆಸಕ್ತಿ ನೀಡಿ ಅಪಾರ್ಟ್ಮೆಂಟ್ ನಿವಾಸಿಗಳ ಮನಗೆಲ್ಲುವ ಪ್ರಯತ್ನಕ್ಕೆ ಶೋಭಾ ಕರಂದ್ಲಾಜೆ ಮುಂದಾಗಿದ್ದಾರೆ.
ಹೊಸ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಇರಬಾರದು ಎನ್ನುವ ಕಾರಣಕ್ಕೆ ಪ್ರಮುಖ ಕಾರ್ಯಕರ್ತರ ನಿವಾಸಗಳಿಗೆ ಭೇಟಿ ನೀಡಿ ಶೋಭಾ ಕರಂದ್ಲಾಜೆ ಸಹಕಾರ ಕೋರುತ್ತಿದ್ದಾರೆ. ಬೂತ್ ಮಟ್ಟದಿಂದಲೇ ಕಾರ್ಯಕರ್ತರ ವಿಶ್ವಾಸಕ್ಕೆ ಪಡೆದು ಮತದಾರರನ್ನು ತಲುಪಲುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ಇದನ್ನೂಓದಿ:ಯತ್ನಾಳ್ ವಿರುದ್ಧ ಪೊಲೀಸರಿಗೆ ದೂರು ನೀಡಿದ ಸಚಿವ ಗುಂಡೂರಾವ್ ಪತ್ನಿ ಟಬು ರಾವ್ - Tabu Rao