ಬಳ್ಳಾರಿ: ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವತ್ತುಮುರಣಿ ಗ್ರಾಮದ ಜೋಳದ ಹೊಲದಲ್ಲಿ ಅಪರಿಚಿತ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ 3,85,000 ರೂ. ನಗದು, 35 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಮಾಹಿತಿ ನೀಡಿದ್ದಾರೆ.
ಕೊಲೆಯಾದ ಮಹಿಳೆಯನ್ನು ಆಂಧ್ರಪ್ರದೇಶ ರಾಜ್ಯದ ಸುಳಿಕೇರಿ ಗ್ರಾಮದ 54 ವರ್ಷದ ಬಸಮ್ಮ ಎಂದು ಗುರುತಿಸಲಾಗಿದೆ. ಕೌತಾಳಂ ಮಂಡಲಂನ ನಿವಾಸಿ 34 ವರ್ಷದ ಬಂಗಿ ಹುಸೇನಿ ಹಾಗೂ ಕೌತಳಂ ಮಂಡಲದ ಬಂಟಕುಂಟೆಯ 54 ವರ್ಷದ ಪಾರ್ವತಿ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ.
ಇಬ್ಬರು ಆರೋಪಿಗಳನ್ನು ಹಚ್ಚೊಳ್ಳಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಕೊಲೆಯಾದ ಮಹಿಳೆ ಬಸಮ್ಮ ಬಳಿ ಇದ್ದ ನಗದು ಮತ್ತು ಮೈಮೇಲಿನ ಬಂಗಾರದ ಒಡವೆಗಳನ್ನು ದೋಚುವ ಉದ್ದೇಶದಿಂದ, ಬಸಮ್ಮಳಿಗೆ ಜಮೀನು ಮಾರಾಟ ಮಾಡುವುದಾಗಿ ಹೇಳಿ ಪುಸಲಾಯಿಸಿ ವತ್ತುಮುರಣಿ ಗ್ರಾಮದ ಆರೋಪಿಗಳ ಜಮೀನಿನ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಗೆ ಬಂದ ಬಸಮ್ಮಳ ಕತ್ತನ್ನು ಚೂರಿಯಿಂದ ಕೊಯ್ದು ಆಕೆಯ ಬಳಿ ಇದ್ದ ನಗದು ಹಾಗೂ ಮೈ ಮೇಲಿದ್ದ ಬಂಗಾರದ ಒಡವೆಗಳನ್ನು ತೆಗೆದುಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: 6 ವರ್ಷದ ಬಾಲಕಿಯ ಅತ್ಯಾಚಾರಗೈದು ಹತ್ಯೆಗೈದ ಬಿಹಾರದ ಯುವಕ ಸೆರೆ