ಹುಬ್ಬಳ್ಳಿ:ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸುತ್ತಿದಂತೆ ಚುನಾವಣಾ ಕಣವು ಮತ್ತಷ್ಟು ರಂಗೇರಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ನೇರ ಪೈಪೋಟಿಯ ಮಧ್ಯೆ ಇದೀಗ, ಪ್ರಹ್ಲಾದ್ ಜೋಶಿ ವರ್ಸಸ್ ದಿಂಗಾಲೇಶ್ವರ ಸ್ವಾಮೀಜಿ ಎನ್ನುವಂತಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ದಿಂಗಾಲೇಶ್ವರ ಶ್ರೀಗಳು, ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ, ಧಾರವಾಡ ಲೋಕಸಭೆ ಚುನಾವಣೆಗೆ ಪಕ್ಷೇತರ ಸ್ಪರ್ಧಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದರು. ಇದರಿಂದಾಗಿ ಹಲವು ದಿನಗಳಿಂದ ಶ್ರೀಗಳ ಸ್ಪರ್ಧೆ ಕುರಿತಂತೆ ಮೂಡಿದ್ದ ಪ್ರಶ್ನೆಗಳಿಗೆ ಸ್ಪಷ್ಟನೆ ಸಿಕ್ಕಿತ್ತು.
2ನೇ ಸಲ ಮಠಾಧೀಶರೊಬ್ಬರು ಎದುರಾಳಿ:ಇನ್ನೊಂದೆಡೆ, ಸತತ ನಾಲ್ಕು ಬಾರಿ ಜಯ ಗಳಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸ್ವಾಮೀಜಿಯೊಬ್ಬರ ವಿರುದ್ಧದ ಸ್ಪರ್ಧೆ ಇದೇ ಮೊದಲೇನಲ್ಲ. ಎರಡನೇ ಬಾರಿಗೆ ಮಠಾಧೀಶರೊಬ್ಬರು ಚುನಾವಣಾ ಕಣದಲ್ಲಿ ಎದುರಾಗುತ್ತಿದ್ದಾರೆ. ಈ ಹಿಂದೆ 2004ರಲ್ಲಿ ಕನ್ನಡನಾಡು ಪಕ್ಷದಿಂದ ಮಾತೆ ಮಹಾದೇವಿ ಅವರು ಜೋಶಿ ವಿರುದ್ಧ ಸ್ಪರ್ಧಿಸಿದ್ದರು. ಇದೀಗ ಮೂರು ಚುನಾವಣೆಗಳ ಬಳಿಕ ದಿಂಗಾಲೇಶ್ವರ ಸ್ವಾಮೀಜಿಯವರು ಪ್ರತಿಸ್ಪರ್ಧಿಯಾಗುತ್ತಿದ್ದಾರೆ. ಶ್ರೀಗಳ ಪ್ರವೇಶದಿಂದ ಸದ್ಯ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಲಕ್ಷಣಗಳು ಕಂಡು ಬರುತ್ತಿದೆ. 2004ರಲ್ಲಿಯೂ ಪ್ರಹ್ಲಾದ್ ಜೋಶಿ ಅವರು ಮೊದಲ ಬಾರಿಗೆ ಕಣಕ್ಕಿಳಿದಾಗಲೂ ಇಂತಹುದೇ ಪರಿಸ್ಥಿತಿ ಇತ್ತು.
ಮಾತೆ ಮಹಾದೇವಿಗೆ ಸೋಲು:2004ರಲ್ಲಿ ಪ್ರಹ್ಲಾದ್ ಜೋಶಿ 3,85,084 ಮತ ಪಡೆದಿದ್ದರು. ಕಾಂಗ್ರೆಸ್ನಿಂದ ಬಿ.ಎಸ್. ಪಾಟೀಲ ಸ್ಪರ್ಧಿಸಿ 3,02,006 ಮತ ಗಳಿಸಿದ್ದರು. ಜೊತೆಗೆ, ಕನ್ನಡನಾಡು ಪಕ್ಷದಿಂದ ಕಣಕ್ಕಿಳಿದ ಜಗದ್ಗುರು ಮಾತೆ ಮಹಾದೇವಿ ಅವರಿಗೆ ಕೇವಲ 27,610 ಮತ ಸಿಕ್ಕಿತ್ತು. ಇದೀಗ ದಿಂಗಾಲೇಶ್ವರ ಸ್ವಾಮೀಜಿ ಅವರು ಚುನಾವಣಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಲಿಂಗಾಯತರ ಮತ ಪಡೆಯುವರೇ ಸ್ವಾಮೀಜಿ?:ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನೇರ ಎದುರಾಳಿಯಾಗಿದ್ದರೂ, ಈಗ ದಿಂಗಾಲೇಶ್ವರ ಶ್ರೀಗಳ ಪ್ರವೇಶದಿಂದ ಯಾವ ಪಕ್ಷಕ್ಷೆ ಲಾಭ, ನಷ್ಟ ಎಂಬ ಲೆಕ್ಕಾಚಾರ ಶುರುವಾಗಿದೆ. ಕ್ಷೇತ್ರದಲ್ಲಿ ಶೇ.20ರಷ್ಟು ಲಿಂಗಾಯತ ಮತದಾರರಿದ್ದು, ಯಾರಿಗೆ ಮತ ನೀಡಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಚುನಾವಣೆಗೆ ಧುಮುಕುವ ನಿರ್ಧಾರ ಪ್ರಕಟಣೆ ವೇಳೆ ಮಾತನಾಡಿದ್ದ ಶ್ರೀಗಳು, ಲಿಂಗಾಯತರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದ್ದರು. ಅವರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದಿದ್ದರು. ಪ್ರತಿ ಬಾರಿಯೂ ಸಾಮಾನ್ಯವಾಗಿ ಇಲ್ಲಿನ ಲಿಂಗಾಯತರು ಬಿಜೆಪಿ ಪರ ಒಲವು ತೊರಿಸಿರುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಇದೀಗ, ದಿಂಗಾಲೇಶ್ವರ ಸ್ವಾಮೀಜಿಯವರು ಎಷ್ಟರ ಮಟ್ಟಿಗೆ ಲಿಂಗಾಯತ ಹಾಗೂ ಇತರರ ಮತಗಳ ಸೆಳೆಯುತ್ತಾರೆ ಎಂಬ ಕುತೂಹಲವಿದೆ.