ಬೆಂಗಳೂರು/ನವದೆಹಲಿ:ಕರ್ನಾಟಕದ ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಘೋಷಿಸಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬದಲಿಗೆ ಮಾಜಿ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದೆ. 28 ಕ್ಷೇತ್ರಗಳ ಪೈಕಿ ಹಾಸನ, ಮಂಡ್ಯ, ಕೋಲಾರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಡಲಾಗಿದೆ. ಈಗಾಗಲೇ ಉಳಿದ 24 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿತ್ತು. ಚಿತ್ರದುರ್ಗದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಪ್ರಬಲವಾಗಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ವಿಳಂಬವಾಗಿತ್ತು.
ಇದೀಗ ಚಿತ್ರದುರ್ಗ ಕ್ಷೇತ್ರದಲ್ಲಿ ಅಚ್ಚರಿ ಆಯ್ಕೆ, ಸಂತರಿಗೆ ಮಣೆ ಎನ್ನುವ ಚರ್ಚೆಗೆ ತೆರೆ ಎಳೆದಿದೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಶಾಸಕ ಚಂದ್ರಪ್ಪ ಪುತ್ರನಿಗೆ ನಿರಾಸೆಯಾಗಿದೆ. ಇಂದು ಕೇಂದ್ರ ಬಿಜೆಪಿ ಪ್ರಕಟಿಸಿದ ಅಭ್ಯರ್ಥಿಗಳ ಏಳನೇ ಪಟ್ಟಿಯಲ್ಲಿ ಚಿತ್ರದುರ್ಗದ ಟಿಕೆಟ್ ಪ್ರಕಟಿಸಲಾಗಿದೆ. ಕೇಂದ್ರ ಸಾಮಾಜಿಕ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ತಾವು ಸ್ಪರ್ಧಿಸುವುದಿಲ್ಲಎಂದು ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಇದರ ನಂತರ ಗೋವಿಂದ ಕಾರಜೋಳ ಹೆಸರು ಮುಂಚೂಣಿಗೆ ಬಂದಿತ್ತು. ನಾರಾಯಣಸ್ವಾಮಿ ತಾವು ಸ್ಫರ್ಧಿಸದಿದ್ದರೂ, ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಪಕ್ಷದ ಮೇಲೆ ಒತ್ತಡ ಹಾಕಿದ್ದರು. ಇದರ ಫಲವಾಗಿಯೇ ಕಾರಜೋಳ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಮಾದಾರ ಚೆನ್ನಯ್ಯ ಸ್ವಾಮೀಜಿಗಳನ್ನು ರಾಜಕೀಯಕ್ಕೆ ತರಬೇಕು. ಅವರಿಗೆ ಚಿತ್ರದುರ್ಗ ಲೋಕಸಭಾ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ಬಿಜೆಪಿಯಲ್ಲಿ ನಡೆದಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಇಂತಹ ಚರ್ಚೆ ಆರಂಭವಾಗಿತ್ತು. ಈಗ ಮತ್ತೆ ಅಂತಹದ್ದೇ ಚರ್ಚೆ ಆರಂಭಗೊಂಡಿತ್ತು. ಆದರೆ, ಅವರು ರಾಜಕೀಯ ಪ್ರವೇಶಕ್ಕೆ ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಕಾರಜೋಳ ಅವರಿಗೆ ಟಿಕೆಟ್ ನೀಡಲಾಗಿದೆ ಎನ್ನಲಾಗಿದೆ.