ಬೆಂಗಳೂರು:ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮಹಿಳಾ ಸೆಕ್ಯೂರಿಟಿಯೊಂದಿಗೆ ಅನುಚಿತ ವರ್ತನೆ ತೋರಿ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮೆಟ್ರೊ ಅಧಿಕಾರಿ ವಿರುದ್ಧ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಅಸಿಸ್ಟೆಂಟ್ ಸೆಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಗಜೇಂದ್ರನ್, ಸೆಕ್ಯೂರಿಟಿ ಕಂಪನಿ ಮಾಲೀಕ ಪ್ರಕಾಶ್ ನಿಟ್ಟೂರು ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುತ್ತಿಗೆ ಆಧಾರದ ಮೇರೆಗೆ ವಿಸಿಡಂ ಏಜೆನ್ಸಿ ಮೂಲಕ ನೊಂದ ಮಹಿಳೆಯು ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡು ಮೆಟ್ರೊ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ನಿಲ್ದಾಣದಲ್ಲಿ ಗಜೇಂದ್ರನ್ ಎಎಸ್ಒ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಅವಧಿಯಲ್ಲಿ ನನ್ನನ್ನು ಒಳಗೊಂಡಂತೆ ಕೆಲ ಮಹಿಳಾ ಸಿಬ್ಬಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ದೇಹದ ಅಂಗಾಂಗದ ಬಗ್ಗೆ ವರ್ಣನೆ ಮಾಡಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಒತ್ತಾಯ ಪೂರ್ವಕವಾಗಿ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಸುಳ್ಳು ಆರೋಪ ಹೊರಿಸಿ ಬೇರೆ ಸ್ಟೇಷನ್ಗೆ ವರ್ಗಾಯಿಸುತ್ತೇನೆ. ಅಲ್ಲದೇ, ಕೆಲಸದಿಂದ ಬಿಡಿಸುವುದಾಗಿ ಬೆದರಿಸಿದ್ದರು ಎಂದು ಮಹಿಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.