ಬೆಂಗಳೂರು:ಜಯನಗರದಲ್ಲಿ ನಡೆದ ಫರೀದಾ ಖಾನಂ ಎಂಬ ಯುವತಿಯ ಹತ್ಯೆ ಪ್ರಕರಣದ ಆರೋಪಿ ಗಿರೀಶ್ ಅಲಿಯಾಸ್ ರೆಹಾನ್ ಎಂಬಾತ ಪೊಲೀಸ್ ತನಿಖೆಯಲ್ಲಿ ಹತ್ಯೆಯ ಹಿಂದಿನ ಕಾರಣ ಬಿಚ್ಚಿಟ್ಟಿದ್ದಾನೆ.
ಪೊಲೀಸರ ಮಾಹಿತಿ:"ಬೆಂಗಳೂರಿನ ಯಡಿಯೂರಿನ ನಿವಾಸಿಯಾಗಿರುವ ಆರೋಪಿ ಗಿರೀಶ್ ಡ್ರೈವರ್ ಕೆಲಸ ಮಾಡಿಕೊಂಡಿದ್ದ. ಮೂರ್ತಿಪೂಜೆ ವಿರೋಧಿಸುತ್ತಿದ್ಧ ಈತ 2011ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ರೆಹಾನ್ ಎಂದು ಹೆಸರು ಬದಲಿಸಿಕೊಂಡಿದ್ದ. ಮತಾಂತರದ ಬಳಿಕ ಮನೆಯಲ್ಲಿ ಸಮಸ್ಯೆ ಆರಂಭವಾಗಿತ್ತು. ಸಹೋದರಿಗೆ ಮದುವೆ ಮಾಡಬೇಕೆಂದಾಗ ಗಂಡು ಸಿಗುತ್ತಿರಲಿಲ್ಲ. ಅಲ್ಲದೇ ಗಿರೀಶನಿಗೂ ಮದುವೆಗೆ ಹೆಣ್ಣು ಸಿಕ್ಕಿರಲಿಲ್ಲ. ಹಾಗಾಗಿ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ್ದ. ಹೀಗಿರುವಾಗಲೇ 32 ವರ್ಷ ವಯಸ್ಸಿನ ಗಿರೀಶ್ಗೆ 2022ರಲ್ಲಿ ಮಸಾಜ್ ಪಾರ್ಲರ್ನಲ್ಲಿ ಕೊಲ್ಕತ್ತಾ ಮೂಲದ ಫರೀದಾ (42) ಎಂಬ ಯುವತಿಯ ಪರಿಚಯವಾಗಿತ್ತು. ವಿಚ್ಚೇದಿತೆಯಾಗಿದ್ಧ ಫರೀದಾಗೆ ವಯಸ್ಸಿಗೆ ಬಂದ ಮಗಳಿದ್ದಳು. ವಿಚ್ಚೇದನದ ನಂತರ 2014ರಲ್ಲಿ ಗಂಡ ಮೃತಪಟ್ಟ ಬಳಿಕ ಫರೀದಾ ಬೆಂಗಳೂರಿಗೆ ಬಂದು ನೆಲೆಸಿದ್ದರು. ಫರೀದಾ ಜತೆಗಿನ ಗಿರೀಶನ ಪರಿಚಯ ಪ್ರೀತಿಗೆ ತಿರುಗಿ ಇಬ್ಬರ ನಡುವೆ ದೈಹಿಕ ಸಂಬಂಧವೂ ಬೆಳೆದಿತ್ತು. ಹೀಗಿರುವಾಗ ತನ್ನನ್ನು ಮದುವೆಯಾಗುವಂತೆ ಗಿರೀಶ್ ಒತ್ತಾಯಿಸುತ್ತಿದ್ದ. ಆದರೆ ಮದುವೆಯಾಗಲು ಆಕೆ ನಿರಾಕರಿಸುತ್ತಿದ್ದಳು".
"ಇದೇ ತಿಂಗಳು 6ರಂದು ಕೊಲ್ಕತ್ತಾಗೆ ತೆರಳಿದ್ದ ಫರೀದಾ ಹಾಗೂ ಆಕೆಯ ಮಗಳು ಕೆಲವು ದಿನಗಳ ಕಾಲ ಅಲ್ಲಿಯೇ ಇದ್ದರು. ಕೋಲ್ಕತ್ತಾಗೆ ಹೋಗಿದ್ದ ಸಮಯದಲ್ಲಿ ಗಿರೀಶ್ಗೆ ಸುಳ್ಳು ಹೇಳಿದ್ಧ ಫರೀದಾ ಸ್ನೇಹಿತೆಯೊಂದಿಗೆ ಬೇರೆಡೆ ಕೆಲಸಕ್ಕೆ ಹೋಗಿದ್ದಳು. ಇದರಿಂದ ಸಿಟ್ಟಿಗೆದ್ದ ಗಿರೀಶ್ ಫರೀದಾಳ ಸ್ನೇಹಿತೆಯ ಗಂಡನ ಫೋನ್ ನಂಬರ್ ಪಡೆದು ಕರೆ ಮಾಡಿ, "ನಿನ್ನ ಪತ್ನಿಯೇ ಫರೀದಾಳನ್ನು ಹಾಳು ಮಾಡ್ತಿದ್ದಾಳೆ ಎಂದು ಬೈದಿದ್ದ".