ಬೆಂಗಳೂರು: ರೈತರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ವಿವಿಧ ಬೆಳೆಗಳ ಬೀಜಗಳನ್ನು ಪಡೆಯಲು ಕಳೆದ ಮಾರ್ಚ್ನಲ್ಲಿ ಬೀಜ ಮಾರಾಟ ಜಾಲತಾಣ ಪರಿಚಯಿಸಿದ್ದ ಬೆಂಗಳೂರು ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆ (ಬೆಳೆಗಳು) ಸಹಯೋಗದೊಂದಿಗೆ ಕೃಷಿ ವಿಶ್ವವಿದ್ಯಾಲಯ ಉದ್ದೇಶ ಫಲಪ್ರದವಾಗುತ್ತಿದೆ.
ಗುರುವಾರದಿಂದ ಆರಂಭವಾಗಿರುವ ಈ ಕೃಷಿ ಮೇಳದಲ್ಲಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ರೈತರು ಆನ್ಲೈನ್ ಮುಖಾಂತರ ವಿವಿಧ ಬೆಳೆಗಳ ಬೀಜಗಳನ್ನು ಆರ್ಡರ್ ಮಾಡುವುದರ ಬಗ್ಗೆ ಬೀಜಗಳ ಸಂಶೋಧನಾ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಗುಟಮಟ್ಟದ ಬೀಜಗಳನ್ನು ಪಡೆಯುವುದು ಇಂದಿನ ರೈತರಿಗೆ ಸವಾಲು ಎಂಬಂತಾಗಿದೆ. ಕಳಪೆ ಗುಣಮಟ್ಟದ ಬೀಜಗಳನ್ನು ಬಿತ್ತುವುದರಿಂದ ಇಳುವರಿ ಕಡಿಮೆಯಾಗಲಿದೆ. ಇದರಿಂದ ರೈತರು ಆರ್ಥಿಕ ನಷ್ಟಕ್ಕೆ ಒಳಗಾಗುತ್ತಾರೆ.
ಹೀಗಾಗಿ ರೈತರು ಬೆಳೆಯುವ ಬೆಳೆಗಳಿಗೆ ಉತ್ತಮ ಇಳುವರಿ ಬರುವಂತೆ ಮಾಡಲು ಹಾಗೂ ಆದಾಯ ಹೆಚ್ಚಿಸಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಮೊದಲ ಬಾರಿಗೆ ಬೀಜ ಮಾರಾಟ ಜಾಲತಾಣ ಪರಿಚಯಿಸಿತ್ತು. ಕಳೆದ ಮಾರ್ಚ್ನಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಚಾಲನೆ ನೀಡಿದ್ದರು.
ಇದೀಗ ಮತ್ತೆ ಕೃಷಿ ಮೇಳದಲ್ಲಿ ಆನ್ಲೈನ್ ವ್ಯವಸ್ಥೆ ಕುರಿತ ಮಾಹಿತಿ ಪ್ರದರ್ಶನ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಭತ್ತ, ರಾಗಿ, ಸೂರ್ಯಕಾಂತಿ, ತೊಗರಿ, ಅಲಸಂಡೆ, ಮೆಕ್ಕೆಜೋಳ, ನೆಲಗಡಲೆ ಹಾಗೂ ಸಿರಿಧಾನ್ಯಗಳು ಸೇರಿದಂತೆ 28 ಬೆಳೆಗಳ 100ಕ್ಕೂ ಹೆಚ್ಚು ತಳಿಗಳ ಬೀಜಗಳು ಲಭ್ಯವಿದೆ. ಇದುವರೆಗೂ ಸುಮಾರು 30ರಿಂದ 35 ಸಾವಿರ ಕ್ವಿಂಟಾಲ್ ಗುಣಮಟ್ಟದ ಬೀಜೋತ್ಪಾದನೆ ಮಾಡಿ ರೈತರಿಗೆ ಸರಬರಾಜು ಮಾಡಲಾಗಿದೆ.
www.uasgkvkseeds.org ಜಾಲತಾಣಕ್ಕೆ ಹೋಗಿ ಹೆಸರು, ಮೊಬೈಲ್ ನಂಬರ್ ಹಾಗೂ ವಿಳಾಸ ಒಳಗೊಂಡಂತೆ ಬೇಕಿರುವ ಬೀಜಗಳನ್ನು ಆರ್ಡರ್ ಮಾಡಿದರೆ ಪೋಸ್ಟ್ ಮೂಲಕ ನಿಮ್ಮ ಮನೆ ಬಾಗಿಲಿಗೆ ಬೀಜ ಸರಬರಾಜು ಮಾಡಲಿದೆ. ಏಕಕಾಲದಲ್ಲಿ ಗರಿಷ್ಠ 35 ಕೆ.ಜಿಯಷ್ಟು ಬೀಜಗಳನ್ನು ಆರ್ಡರ್ ಮಾಡಬಹುದಾಗಿದೆ. ರೈತರಿಗೆ ಮಾತ್ರ ಈ ವ್ಯವಸ್ಥೆ ಕಲ್ಪಿಸಲಾಗಿದ್ದು, ದುಬರ್ಳಕೆ ತಡೆಯಲು ಡಿಸ್ಟ್ರಿಬ್ಯೂಟರ್ಗಳಿಗೆ ಮಾರಾಟ ಮಾಡದಿರಲು ನಿರ್ಧರಿಸಿರುವುದಾಗಿ ಬೀಜಗಳ ಸಹ ಸಂಶೋಧನಾ ಅಧಿಕಾರಿ ಡಾ. ನಾಗರಾಜ್ ಹುಲ್ಲೂರು ತಿಳಿಸಿದ್ದಾರೆ.
ವಿವಿಧ ರಾಜ್ಯಗಳಿಂದ ಬೀಜಗಳಿಗೆ ಹೆಚ್ಚಿದ ಬೇಡಿಕೆ: ಪರಿಚಯಿಸಲಾಗಿರುವ ಆನ್ಲೈನ್ ಮೂಲಕ ಬೀಜ ಮಾರಾಟ ಸಂಬಂಧ ರಾಜ್ಯದೆಲ್ಲೆಡೆ ರೈತರು ಸಕಾರಾತ್ಮಕ ಸ್ಪಂದಿಸುತ್ತಿದ್ದಾರೆ. ಇದುವರೆಗೂ ಸಾವಿರಾರು ಸಂಖ್ಯೆಯಲ್ಲಿ ರೈತರು ನೋಂದಾಯಿಸಿದ್ದಾರೆ. ಅಲ್ಲದೆ, ಆಂಧ್ರಪ್ರದೇಶ, ಗೋವಾ, ಮಿಜೊರಾಂ, ಜಾರ್ಖಂಡ್, ರಾಜಸ್ಥಾನ್, ದೆಹಲಿ, ಉತ್ತರಪ್ರದೇಶ, ಅರುಣಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಬೀಜಗಳ ರಫ್ತಿಗೆ ಬೇಡಿಕೆ ಹೆಚ್ಚಾಗಿದ್ದು, 250 ಹೆಚ್ಚು ಆರ್ಡರ್ ಬಂದಿರುವುದಾಗಿ ನಾಗರಾಜ್ ಅವರು ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಬೀಜ ಮಾರಾಟ ಜಾಲತಾಣದಿಂದ ರೈತರಿಗಾಗುವ ಉಪಯೋಗವೇನು?
- ಸಾಗಣಿಕೆ ವೆಚ್ಚ, ಮಧ್ಯವರ್ತಿಗಳ ಕಮಿಷನ್ ಹಾಗೂ ಸ್ಥಳೀಯ ಮಾರುಕಟ್ಟೆಗಳ ಚೌಕಾಶಿ ಇವುಗಳಿಂದ ಮುಕ್ತಿ ಪಡೆಯಲು ನೆರವು
- ನಕಲಿ ಬೀಜಗಳ ಹಾವಳಿ ತಪ್ಪಿಸಿ ಗುಣಮಟ್ಟದ ಬೀಜ ಪಡೆಯಲು ಅನುಕೂಲ
- ಕೃಷಿ ವಿವಿ ಬೀಜ ಘಟಕದಿಂದ ಬಿತ್ತನೆ ಬೀಜಗಳನ್ನು ಮೂಲ ಬೆಲೆಯಲ್ಲಿ ಖರೀದಿ
- ಪ್ರಯಾಣದ ವೆಚ್ಚ ಜೊತೆಗೆ ಹವಾಮಾನ, ಮಣ್ಣಿನ ವಿಧಗಳು ಹಾಗೂ ಬೆಳೆ ಪದ್ಧತಿಗಳಿಗೆ ಅನುಗುಣವಾಗಿ ಬಿತ್ತನೆ ಬೀಜಗಳನ್ನು ಆಯ್ಕೆ ಮಾಡಲು ಆನ್ಲೈನ್ ಬೀಜ ಮಾರಾಟ ಜಾಲತಾಣದಿಂದ ಅವಕಾಶ
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-23620494 ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ವೆಸ್ಟ್ ಸಿಡ್ನಿ ಕೃಷಿ ವಿವಿ ಸ್ಥಾಪನೆ ಬಗ್ಗೆ ಆಸ್ಟ್ರೇಲಿಯಾ ನಿಯೋಗದಿಂದ ಚರ್ಚೆ