ಕಾರವಾರ (ಉತ್ತರ ಕನ್ನಡ) : ಹಣ್ಣು, ತರಕಾರಿ ತುಂಬಿಕೊಂಡು ವ್ಯಾಪಾರಸ್ಥರೊಂದಿಗೆ ಸಂತೆಗೆ ತೆರಳುತ್ತಿದ್ದ ಲಾರಿಯೊಂದು ಕಂದಕಕ್ಕೆ ಉರುಳಿ ಬಿದ್ದು 10 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಅರಬೈಲ್ ಘಟ್ಟದ ಕಾಗೇರಿ ಪೆಟ್ರೋಲ್ ಬಂಕ್ ಬಳಿ ಬುಧವಾರ ಮುಂಜಾನೆ ಸಂಭವಿಸಿದೆ.
ಮೃತರೆಲ್ಲರೂ ಸವಣೂರು ಕಡೆಯವರಾಗಿದ್ದಾರೆ. ಫಯಾಜ್ ಇಮಾಮ್ ಸಾಬ್ ಜಮಖಂಡಿ (45), ವಾಸೀಮ್ ವಿರುಲ್ಲಾ ಮುಡಗೇರಿ (35), ಇಜಾಜ್ ಮುಸ್ತಕಾ ಮುಲ್ಲಾ (20), ಸಾದೀಕ್ ಭಾಷಾ ಫಾರಷ್ (30), ಗುಲಾಮ್ಹುಸೇನ್ ಜವಳಿ (40), ಇಮ್ತಿಯಾಜ್ ಮಮಜಾಫರ್ ಮುಳಕೇರಿ (36), ಅಲ್ಪಾಜ್ ಜಾಫರ್ ಮಂಡಕ್ಕಿ (25), ಜೀಲಾನಿ ಅಬ್ದುಲ್ ಜಖಾತಿ (25) ಹಾಗೂ ಅಸ್ಲಂ ಬಾಬುಲಿ ಬೆಣ್ಣಿ (24) ಎಂಬವರು ಸ್ಥಳದಲ್ಲೇ ಅಸುನೀಗಿದ್ದಾರೆ. ಮತ್ತೊಬ್ಬರು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರಿನಿಂದ ಕುಮಟಾದ ಸಂತೆಗೆ ತೆರಳುತ್ತಿದ್ದ ಲಾರಿಯಲ್ಲಿ ಸುಮಾರು 40ಕ್ಕೂ ಹೆಚ್ಚು ವ್ಯಾಪಾರಸ್ಥರು ತರಕಾರಿಗಳನ್ನು ತುಂಬಿಕೊಂಡು ತೆರಳುತ್ತಿದ್ದರು. ಯಲ್ಲಾಪುರದ ಅರಬೈಲ್ ಘಟ್ಟದ ಬಳಿ ಲಾರಿ ಕಂದಕಕ್ಕೆ ಉರುಳಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡ 15 ಮಂದಿಯನ್ನು ಯಲ್ಲಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಯಲ್ಲಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ. ಮಾಹಿತಿ ಸಿಕ್ಕ ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಭೀಕರ ಅಪಘಾತ; ಮಂತ್ರಾಲಯ ಸಂಸ್ಕೃತಿ ವಿದ್ಯಾಪೀಠದ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಸಾವು