Rohit Sharma and Ritika Sajdeh: ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಶುಕ್ರವಾರ ರಾತ್ರಿ ಹಿಟ್ ಮ್ಯಾನ್ ಪತ್ನಿ ರಿತಿಕಾ ಸಜ್ದೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದರೊಂದಿಗೆ ಹಿಟ್ಮ್ಯಾನ್ ಮನೆಗೆ ಹೊಸ ಅತಿಥಿಯ ಆಗಮನ ಆಗಿದೆ. ವರದಿಗಳ ಪ್ರಕಾರ ತಾಯಿ ಮತ್ತು ಮಗು ಇಬ್ಬರು ಆರೋಗ್ಯಕರವಾಗಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ರೋಹಿತ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಪ್ರೀತಿಸಿ ವಿವಾಹ: ರೋಹಿತ್ ಶರ್ಮಾ ತನ್ನ ಮ್ಯಾನೇಜರ್ ರಿತಿಕಾ ಸಜ್ದೆಯನ್ನು ಪ್ರೀತಿಸಿ ಮದುವೆಯಾಗಿದ್ದರು. ಡಿಸೆಂಬರ್ 13, 2015 ರಂದು ಎರಡೂ ಕುಟುಂಬದ ಹಿರಿಯರ ಆಶೀರ್ವಾದದೊಂದಿಗೆ ಈ ಜೋಡಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಅವರ ಪ್ರೀತಿಯ ಸಂಕೇತವಾಗಿ, ಈ ಸುಂದರ ದಂಪತಿಗೆ 30 ಡಿಸೆಂಬರ್ 2018 ರಂದು ಮಗಳು ಜನಿಸಿದ್ದಳು. ಮಗುವಿಗೆ ಸಮೀರ ಎಂದು ಹೆಸರಿಡಲಾಗಿದೆ.
ಮೊದಲ ಟೆಸ್ಟ್ ಪಂದ್ಯ: ಪತ್ನಿ ರಿತಿಕಾ ಸಜ್ದೆ ಹೆರಿಗೆ ದಿನಾಂಕದ ಬಗ್ಗೆ ವೈದ್ಯರು ತಿಳಿಸಿದ್ದರಿಂದ ರೋಹಿತ್ ಶರ್ಮಾ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾಗೆ ಟೀಂ ಇಂಡಿಯಾ ಜೊತೆ ಪ್ರವಾಸ ಬೆಳೆಸಲಿಲ್ಲ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯ ಇದೇ ತಿಂಗಳ 22ರಂದು ನಡೆಯಲಿದೆ. ಪತ್ನಿ ರಿತಿಕಾ ಎರಡನೇ ಮಗುವಿಗೆ ಜನ್ಮ ನೀಡಲಿರುವ ಕಾರಣ ರೋಹಿತ್ ಶರ್ಮಾ ಮೊದಲ ಟೆಸ್ಟ್ ಪಂದ್ಯದಿಂದ ಹೊರಗಿಳಿಯಲಿದ್ದಾರೆ ಎಂದು ವರದಿಗಳಾಗಿದ್ದವು. ಆದರೆ ಶುಕ್ರವಾರವೇ ರಿತಿಕಾಗೆ ಹೆರಿಗೆಯಾದ ಕಾರಣ ರೋಹಿತ್ ಮೊದಲ ಪಂದ್ಯದಲ್ಲಿ ಆಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಬಿಸಿಸಿಐ ಆಗಲಿ ರೋಹಿತ್ ಶರ್ಮಾ ಆಗಲಿ ಯಾವುದೇ ಹೇಳಿಕೆ ನೀಡಿಲ್ಲ.
ಬಾರ್ಡರ್ ಗವಾಸ್ಕರ್ ವೇಳಾಪಟ್ಟಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯು ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಮೊದಲ ಟೆಸ್ಟ್ ನವೆಂಬರ್ 22 ರಿಂದ 26ರ ವರೆಗೆ ಪರ್ತ್ ಮೈದಾನದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಡಿಸೆಂಬರ್ 6 ರಿಂದ 10ರ ವರೆಗೆ ಅಡಿಲೇಡ್‌ನಲ್ಲಿ ಡೇ ಅಂಡ್ ನೈಟ್ ಪಂದ್ಯ ನಡೆಯಲಿದೆ. ಮೂರನೇ ಟೆಸ್ಟ್ ಡಿಸೆಂಬರ್ 14 ರಿಂದ18 (ಬ್ರಿಸ್ಬೇನ್), ನಾಲ್ಕನೇ ಟೆಸ್ಟ್ ಡಿಸೆಂಬರ್ 26 ರಿಂದ 30 (ಮೆಲ್ಬೋರ್ನ್), ಐದನೇ ಮತ್ತು ಕೊನೆಯ ಟೆಸ್ಟ್ ಜನವರಿ 3 ರಿಂದ 7ರ ವರೆಗೆ (ಸಿಡ್ನಿಯಲ್ಲಿ) ನಡೆಯಲಿದೆ.
WTC ಭಾರತ ಫೈನಲ್ ಲೆಕ್ಕಾಚಾರ: ಈ ಸರಣಿ ಭಾರತದ ಪಾಲಿಗೆ ಮಹತ್ವದಾಗಿದ್ದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಪ್ರವೇಶಿಸಬೇಕದಾರೆ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಸರಣಿ ಗೆಲ್ಲಬೇಕು. ಹೀಗಾದಲ್ಲಿ ಮಾತ್ರ ನೇರವಾಗಿ ಫೈನಲ್ ಪ್ರವೇಶ ಮಾಡಲಿದೆ. ಒಂದು ವೇಳೆ ಸರಣಿ ಸೋತರೆ ಇತರ ತಂಡಗಳ ಅಂಕಗಳನ್ನು ಅವಲಂಭಿಸಬೇಕಾಗುತ್ತದೆ.
ಇದನ್ನೂ ಓದಿ: IND vs SA 4th T20: ಒಂದೇ ಪಂದ್ಯದಲ್ಲಿ 9 ದಾಖಲೆ ಬರೆದ ಟೀಂ ಇಂಡಿಯಾ, 18 ವರ್ಷದ ಕ್ರಿಕೆಟ್ ಇತಿಹಾಸದಲ್ಲೇ ಮೊದಲು!