ಕುವೈತ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುವೈತ್ ತನ್ನ ಅತ್ಯುನ್ನತ ನಾಗರಿಕ ಗೌರವ 'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ಅನ್ನು ನೀಡಿದೆ. ಮೋದಿಯವರ ವಿಶಿಷ್ಟ ಸಾಧನೆಗಳು ಮತ್ತು ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವ ಅವರ ಪ್ರಯತ್ನಗಳನ್ನು ಶ್ಲಾಘಿಸಿ ಭಾನುವಾರ ಕುವೈತ್ ಈ ಗೌರವವನ್ನು ಪ್ರದಾನ ಮಾಡಿದೆ. ಇದು ಪ್ರಧಾನಿ ಮೋದಿಗೆ ದೇಶವೊಂದು ನೀಡುವ 20ನೇ ಅಂತಾರಾಷ್ಟ್ರೀಯ ಗೌರವವಾಗಿದೆ.
'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ಕುವೈತ್ ನ ನೈಟ್ ಹುಡ್ ಆರ್ಡರ್ ಆಗಿದ್ದು, ಕುವೈತ್ ನ ಏಳನೇ ಆಡಳಿತಗಾರ ಮುಬಾರಕ್ ಬಿನ್ ಸಬಾಹ್ ಅಲ್-ಸಬಾಹ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. 1896 ರಲ್ಲಿ ಕುವೈತ್ನ ಅಧಿಕಾರ ವಹಿಸಿಕೊಂಡಿದ್ದ ಮುಬಾರಕ್ ಬಿನ್ ಸಬಾಹ್ ಅಲ್-ಸಬಾಹ್ ಕುವೈತ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು.
ರಾಷ್ಟ್ರಗಳ ಮುಖ್ಯಸ್ಥರು, ವಿದೇಶಿ ಸಾರ್ವಭೌಮರು ಮತ್ತು ವಿದೇಶಿ ರಾಜಮನೆತನಗಳ ಸದಸ್ಯರಿಗೆ ಸ್ನೇಹದ ಸಂಕೇತವಾಗಿ ಕುವೈತ್ ಈ ಗೌರವವನ್ನು ನೀಡುತ್ತದೆ. ಈ ಹಿಂದೆ ಬಿಲ್ ಕ್ಲಿಂಟನ್, ಪ್ರಿನ್ಸ್ ಚಾರ್ಲ್ಸ್ ಮತ್ತು ಜಾರ್ಜ್ ಬುಷ್ ಅವರಂತಹ ವಿದೇಶಿ ನಾಯಕರು, ರಾಣಿ ಎಲಿಜಬೆತ್ ಮತ್ತು ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರಂಥ ಇತರ ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಕಳೆದ ತಿಂಗಳು, ಪ್ರಧಾನಿ ಮೋದಿ ಅವರಿಗೆ ಗಯಾನಾದ ಅತ್ಯುನ್ನತ ನಾಗರಿಕ ಗೌರವವಾದ 'ದಿ ಆರ್ಡರ್ ಆಫ್ ಎಕ್ಸಲೆನ್ಸ್' ಪ್ರದಾನ ಮಾಡಲಾಗಿತ್ತು. ಮೋದಿಯವರ ದೂರದೃಷ್ಟಿಯ ರಾಜನೀತಿಜ್ಞತೆ, ಜಾಗತಿಕ ವೇದಿಕೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಹಕ್ಕುಗಳನ್ನು ಎತ್ತಿಹಿಡಿದಿದ್ದಕ್ಕಾಗಿ, ಜಾಗತಿಕ ಸಮುದಾಯಕ್ಕೆ ಅಸಾಧಾರಣ ಸೇವೆ ಮತ್ತು ಭಾರತ-ಗಯಾನಾ ಸಂಬಂಧಗಳನ್ನು ಬಲಪಡಿಸುವ ಬದ್ಧತೆಗಾಗಿ ದೇಶದ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರು ಈ ಪ್ರಶಸ್ತಿ ಪ್ರದಾನ ಮಾಡಿದ್ದರು.
ಗಯಾನಾದಲ್ಲಿ ನಡೆದ ಭಾರತ-ಕ್ಯಾರಿಕಾಮ್ ಶೃಂಗಸಭೆಯಲ್ಲಿ, ಡೊಮಿನಿಕಾ ಕೂಡ ತನ್ನ ಅತ್ಯುನ್ನತ ರಾಷ್ಟ್ರೀಯ ಗೌರವವಾದ 'ಡೊಮಿನಿಕಾ ಅವಾರ್ಡ್ ಆಫ್ ಹಾನರ್' ಅನ್ನು ಪ್ರಧಾನಿ ಮೋದಿಯವರಿಗೆ ನೀಡಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮೋದಿಯವರು ದೇಶಕ್ಕೆ ನೀಡಿದ ಬೆಂಬಲ ಮತ್ತು ಭಾರತ-ಡೊಮಿನಿಕಾ ಸಂಬಂಧಗಳನ್ನು ಬೆಳೆಸುವ ಅವರ ಬದ್ಧತೆಯನ್ನು ಗುರುತಿಸಿ ಅವರಿಗೆ ಈ ಸನ್ಮಾನ ನೀಡಲಾಗಿತ್ತು.
ನವೆಂಬರ್ ನಲ್ಲಿ ನೈಜೀರಿಯಾಕ್ಕೆ ಮೊದಲ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್ (ಜಿಕಾನ್) ರಾಷ್ಟ್ರೀಯ ಗೌರವವನ್ನು ನೀಡಲಾಯಿತು.
'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ಗೌರವದೊಂದಿಗೆ ಪ್ರಧಾನಿ ಮೋದಿ ಸ್ವೀಕರಿಸಿದ ನಾಗರಿಕ ಗೌರವಗಳ ಸಂಖ್ಯೆಯು ದಾಖಲೆಯ 20 ಕ್ಕೆ ತಲುಪಿದೆ. ಇದು ಅವರ ನಾಯಕತ್ವ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಬೆಳೆಯುತ್ತಿರುವ ಸ್ಥಾನಮಾನವನ್ನು ಎತ್ತಿ ತೋರಿಸುತ್ತದೆ. ಇದು ಭಾರತದ ಬಲವಾದ ರಾಜತಾಂತ್ರಿಕ ಸಂಬಂಧಗಳು ಮತ್ತು ದೇಶದ ವಿಸ್ತರಿಸುತ್ತಿರುವ ಪ್ರಭಾವದ ಪ್ರತಿಬಿಂಬವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಪಾಕಿಸ್ತಾನ: ಕರಾಚಿ-ಲಾಹೋರ್ಗಳಲ್ಲಿ ಶೀತಗಾಳಿ, ಅಪಾಯಕಾರಿ ಮಟ್ಟದಲ್ಲಿ ವಾಯುಮಾಲಿನ್ಯ - PAKISTAN COLD WAVE