ಹುಬ್ಬಳ್ಳಿ : ಕಾಟಾಚಾರಕ್ಕಾಗಿ ಸರ್ಕಾರ ಬೆಳಗಾವಿ ಅಧಿವೇಶನವನ್ನ ನಡೆಸಿದಂತಿದೆ. 2ಎ ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಸಮುದಾಯದ ಜನರು ನಡೆಸಿದ ಶಾಂತಿಯುತ ಪ್ರತಿಭಟನಾ ಸಮಾವೇಶದ ಮೇಲೆ ಲಾಠಿ ಚಾರ್ಜ್ನಿಂದ ಪ್ರಾರಂಭವಾಗಿ ಎಂಎಲ್ಸಿ ಸಿ ಟಿ ರವಿ ಅವರ ಮೇಲಿನ ಚಿತ್ರಹಿಂಸೆವರೆಗೆ ಅಂತ್ಯವಾಗಿದೆ ಎಂದು ಮಾಜಿ ಸಿಎಂ, ಹಾವೇರಿ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ರೀತಿಯಲ್ಲಿ ರಾಜ್ಯದಲ್ಲಿ ಪೊಲೀಸ್ ರಾಜ್ಯ ಇದೆ ಅನ್ನುವುದು ಬಹಳ ಸ್ಪಷ್ಟವಾಗಿದೆ. ಸಿ ಟಿ ರವಿ ಅವರೊಂದಿಗೆ ನಡೆದುಕೊಂಡಿರುವುದು ಹಾಗೂ ಪಂಚಮಸಾಲಿ ಹೋರಾಟದಲ್ಲಿ ಹಿರಿಯ ಅಧಿಕಾರಿಗಳೇ ಲಾಠಿ ಚಾರ್ಜ್ ಮಾಡಿರುವ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಹಿರಿಯ ಪೊಲೀಸ್ ಅಧಿಕಾರಿಗಳ ವರ್ತನೆಗೆ ಬೊಮ್ಮಾಯಿ ಖಂಡನೆ; ಹಿರಿಯ ಅಧಿಕಾರಿಗಳು ಕಾನ್ಸ್ಟೇಬಲ್ಗಳ ತರ ವರ್ತನೆ ಮಾಡುತ್ತಿದ್ದಾರೆ. ಕರ್ನಾಟಕದ ಪೊಲೀಸರಿಗೆ ಒಳ್ಳೆಯ ಹೆಸರು ಇದೆ. ಅದಕ್ಕೆ ಮಸಿ ಬಳಿಯುವ ರೀತಿಯಲ್ಲಿ ಸರ್ಕಾರ ಪೊಲೀಸರನ್ನು ಬಳಸಿಕೊಳ್ಳುತ್ತಿದೆ. ಇದು ಅತ್ಯಂತ ಖಂಡನೀಯ ಎಂದು ಬೊಮ್ಮಾಯಿ ಹೇಳಿದರು.
ಸರ್ಕಾರದ ನಕ್ಷೆಯಲ್ಲಿ ಉತ್ತರ ಕರ್ನಾಟಕದ ನಕ್ಷೆಯೇ ಇಲ್ಲ- ಬೊಮ್ಮಾಯಿ; ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಿಲ್ಲ. ನಮ್ಮ ಪಕ್ಷದ ನಾಯಕರು ಮಾಡಿದ ಪ್ರಶ್ನೆಗೆ ರಾಜ್ಯ ಸರ್ಕಾರದ ಮಂತ್ರಿಗಳು ಯಾರೂ ಸಹ ಉತ್ತರ ನೀಡಿಲ್ಲ. ಇದು ನಾಚಿಕೆ ಸಂಗತಿ. ಈ ಸರ್ಕಾರದ ನಕ್ಷೆಯಲ್ಲಿ ಉತ್ತರ ಕರ್ನಾಟಕವೇ ಇಲ್ಲ ಎಂಬ ಅನುಮಾನ ಮೂಡಿದೆ. ಉತ್ತರ ಕರ್ನಾಟಕದ ಜನರ ಕಣ್ಣಿಗೆ ಮಣ್ಣುಹಾಕುವ ಕಾರ್ಯ ಪದೇ ಪದೆ ಈ ಸರ್ಕಾರದಲ್ಲಿ ನಡೆಯುತ್ತಿದೆ. ಹುಡುಗಾಟದ ರೀತಿಯಲ್ಲಿ ಅಧಿವೇಶನ ನಡೆದಿದೆ. ಹೀಗಾಗಿ ಉತ್ತರ ಕರ್ನಾಟಕದ ಜನ ಭ್ರಮನಿರಸನರಾಗಿದ್ದಾರೆ. ನಮ್ಮ ಪಕ್ಷದ ನಾಯಕರು ಸಮರ್ಥವಾಗಿ ಸದನ ನಿಭಾಯಿಸಿದ್ದಾರೆ. ಆದರೆ ಸರ್ಕಾರ ಸ್ಪಂದನೆ ಮಾಡಿಲ್ಲ ಎಂದು ಬೊಮ್ಮಾಯಿ ಆರೋಪಿಸಿದರು.
ಪಶ್ಚಿಮಘಟ್ಟದ ನೀರಿಗೂ ಟ್ಯಾಕ್ಸ್ ಹಾಕ್ತಾರೆ: ರಾಜ್ಯ ಸರ್ಕಾರದ ಹಣಕಾಸಿನ ಸ್ಥಿತಿ ಬಹಳಷ್ಟು ಗಂಭೀರವಾಗಿದೆ. ಪಶ್ಚಿಮಘಟ್ಟದ ನೀರಿಗೂ ಟ್ಯಾಕ್ಸ್ ಹಾಕುವ ಚಿಂತನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಗಾಳಿಗೂ ಟ್ಯಾಕ್ಸ್ ಹಾಕುತ್ತಾರೆ. ಈ ಸರ್ಕಾರ ದಿವಾಳಿಯಾಗಿದೆ. ಹಿಂದಿನ ಸರ್ಕಾರದ ಕಾರ್ಯಕ್ರಮಗಳ ಉದ್ಘಾಟನೆ ಮಾಡಿ ಸಿಎಂ ಶೂರತ್ವ ತೋರುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ತನ್ನ ಬಂಧನ, ಪೊಲೀಸರ ದೂರವಾಣಿ ಕರೆಗಳ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು: ಸಿ.ಟಿ. ರವಿ - CT RAVI RESPONDS TO FIR AND ARREST