ಹೈದರಾಬಾದ್ : ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡ ದಂಡೆ ಕಾಲುವೆಯ ನಿರ್ಮಾಣ ಹಂತದ ಟನಲ್ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಆರು ಜನ ಕಾರ್ಮಿಕರು ಅದರಡಿಯಲ್ಲಿ ಸಿಲುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುರಂಗ ನಿರ್ಮಾಣ ಮಾಡುತ್ತಿದ್ದ ಕಂಪನಿ ತಂಡ ಇದೀಗ ಸುರಂಗದ ಒಳಗೆ ಹೋಗಿದ್ದು, ಇದನ್ನು ಪರಿಶೀಲಿಸುತ್ತಿದೆ. ಆರರಿಂದ ಎಂಟು ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದು, ಅವರು ಸಿಲುಕಿರುವ ಶಂಕೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸುರಂಗದ ಒಳಗೆ 12 ರಿಂದ 13 ಕಿಲೋ ಮೀಟರ್ ದೂರದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುವಾಗ ಈ ಘಟನೆ ನಡೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ ಕಚೇರಿ, ಎಷ್ಟು ಜನರಿಗೆ ಗಾಯವಾಗಿದೆ ಎಂದು ನಿಖರವಾಗಿ ತಿಳಿಸಿಲ್ಲ. ಬದಲಾಗಿ ಕೆಲವರು ಗಾಯಗೊಂಡಿದ್ದಾರೆ ಎಂದಿದೆ.
ಸಿಎಂ ಎ ರೇವಂತ್ ರೆಡ್ಡಿ ಈ ಕರಿತು ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಎಸ್ಪಿ ಮತ್ತು ಇತರೆ ಅಧಿಕಾರಿಗಳು ತಕ್ಷಣಕ್ಕೆ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕ್ರಮಕ್ಕೆ ಮುಂದಾಗುವಂತೆ ಸೂಚನೆ ನೀಡಿದ್ದಾರೆ.
ರಾಜ್ಯ ನೀರಾವರಿ ಸಚಿವ ಎನ್ ಉತ್ತಮ್ ಕುಮಾರ್ ರೆಡ್ಡಿ, ನೀರಾವರಿ ಸರ್ಕಾರಿ ಸಲಹೆಗಾರ ಆದಿತ್ಯನಾಥ್ ದಾಸ್ ಮತ್ತು ಇತರೆ ನೀರಾವರಿ ಸಚಿವರು ಕೂಡ ವಿಶೇಷ ಹೆಲಿಕಾಪ್ಟರ್ ಮೂಲಕ ಘಟನಾ ಸ್ಥಳಕ್ಕೆ ತೆರಳಿದ್ದಾರೆ.
ಘಟನೆ ಕುರಿತು ಕಳವಳ ವ್ಯಕ್ತಪಡಿಸಿರುವ ಕೇಂದ್ರ ಗಣಿ ಸಚಿವ ಜಿ ಕಿಶನ್ ರೆಡ್ಡಿ, ಘಟನೆ ಸಂಬಂಧ ಮಾಹಿತಿ ಪಡೆದಿದ್ದು, ಕಾರಣ ಕುರಿತು ಪ್ರಶ್ನಿಸಿದ್ದಾರೆ. ಅಲ್ಲದೇ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಸಚಿವರ ’ಅಜ್ಜಿ‘ ಹೇಳಿಕೆ ತಂದ ಕೋಲಾಹಲ; ರಾಜಸ್ಥಾನ ಕಾಂಗ್ರೆಸ್ ಶಾಸಕರಿಂದ ಅಹೋರಾತ್ರಿ ಧರಣಿ
ಇದನ್ನೂ ಓದಿ: ಶೆಡ್ ಮೇಲೆ ಮರಳು ಸುರಿದ ಟಿಪ್ಪರ್: ಐವರು ಕಾರ್ಮಿಕರು ಸ್ಥಳದಲ್ಲೇ ಸಾವು, ಬಾಲಕಿ ರಕ್ಷಣೆ