ಮಂಡ್ಯ : ಸಿಎಂ ಸಿದ್ದರಾಮಯ್ಯ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಸಹಿಯನ್ನೇ ನಕಲು ಮಾಡಿ, ನಕಲಿ ಸರ್ಕಾರಿ ನೇಮಕಾತಿ ಆದೇಶ ಸೃಷ್ಟಿಸಿ ಸುಮಾರು 35 ರಿಂದ 40 ಜನರಿಗೆ ವಂಚನೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಈ ಕುರಿತು ಇಂದು ಮಾಧ್ಯದಮಗೋಷ್ಟಿಯಲ್ಲಿ ಮಾತನಾಡಿದ ಅವರು, "ಆರೋಪಿ ಹೆಚ್.ಸಿ. ವೆಂಕಟೇಶ್ ಮಂಡ್ಯದ ಗಾಂಧಿನಗರದ ನೇತ್ರಾವತಿ ಹಾಗೂ ಕಲ್ಲಹಳ್ಳಿಯ ಮಲ್ಲೇಶ್ ಎಂಬ ಇಬ್ಬರಿಗೆ 31 ಲಕ್ಷ ರೂ. ವಂಚಿಸಿದ್ದಾನೆ. ನೇತ್ರಾವತಿ ಎಂಬವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರೂ ವಿದ್ಯಾವಂತರು. ಅವರಿಗೆ ಶಿಕ್ಷಕ ನೀಲಕಂಠಾಚಾರ್ ಮೂಲಕ ತಾವರೆಗೆರೆಯ ಹೆಚ್.ಸಿ.ವೆಂಕಟೇಶ್ ಪರಿಚಯವಾಗಿದ್ದ. ತಾನು ಬೆಂಗಳೂರಿನ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿರುವುದಾಗಿ ಉನ್ನತಮಟ್ಟದ ಸರ್ಕಾರಿ ಅಧಿಕಾರಿಗಳು ಪರಿಚಯವಿದ್ದಾರೆ. ನಾನು ನಿಮ್ಮ ಮಗ ಎನ್.ದರ್ಶನ್‌ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿದ್ದ" ಎಂದು ತಿಳಿಸಿದರು.
"ಮಗನಿಗೆ ಉದ್ಯೋಗ ಸಿಗುವುದೆಂಬ ಆಸೆಗೆ ಹಣದ ಬಗ್ಗೆ ಕೇಳಿದಾಗ 15 ಲಕ್ಷ ರೂ. ಖರ್ಚಾಗುತ್ತದೆ. ನನ್ನ ಬ್ಯಾಂಕ್ ಅಕೌಂಟ್ ನಂಬರ್ ಕೊಡುತ್ತೇನೆ. ಅಕೌಂಟ್‌ಗೆ ದುಡ್ಡು ಹಾಕಿ ಎಂದು ಮನವೊಲಿಸಿದ್ದನು. ಅವನ ಮಾತನ್ನು ನಂಬಿ ಮಗನ ವಿದ್ಯಾಭ್ಯಾಸದ ಅಂಕಪಟ್ಟಿಯ ಪ್ರತಿಯನ್ನು ವಾಟ್ಸಾಪ್ ಮುಖಾಂತರ ವೆಂಕಟೇಶ್ ಮೊಬೈಲ್‌ಗೆ ಕಳುಹಿಸಿದ್ದರು. ಆತನ ವಿವಿಧ ಬ್ಯಾಂಕ್ ಖಾತೆಗಳಿಗೆ ತಮ್ಮ ಮತ್ತು ಸ್ನೇಹಿತರ ಖಾತೆಯಿಂದ ಒಟ್ಟು 9,24,000 ರೂ.ಗಳನ್ನು ನೇತ್ರಾವತಿ ವರ್ಗಾಯಿಸಿದ್ದರು. ಅದಲ್ಲದೆ ಕಚೇರಿ ಖರ್ಚಿಗೆಂದು ವೆಂಕಟೇಶ್ ತನ್ನ ಮನೆಯಲ್ಲೇ 3 ಲಕ್ಷ ರೂ. ಸೇರಿ ಒಟ್ಟು 12.24 ರೂ. ಪಡೆದಿದ್ದ" ಎಂದು ಹೇಳಿದರು.
"ನಂತರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಹುದ್ದೆಗೆ ಸ್ಥಳ ನಿಯೋಜಿಸಿದ ಆದೇಶದ ಪ್ರತಿಯನ್ನು ಸರ್ಕಾರಿ ಅಧಿಕಾರಿಗಳ ಫೋರ್ಜರಿ ಸಹಿ ಮಾಡಿ ಸುಳ್ಳು ನೇಮಕಾತಿ ದಾಖಲಾತಿಯನ್ನು ಸೃಷ್ಟಿಸಿ ಮೋಸ ಮಾಡಿದ್ದ. ವೆಂಕಟೇಶ್ ಸರ್ಕಾರದ ಅಧೀನ ಕಾರ್ಯದರ್ಶಿರವರ ಸಹಿ, ಸ್ಥಳ ನಿಯೋಜನೆ ಸಂಬಂಧ ಅಧಿಕೃತ ಅದೇಶ ಪ್ರತಿ, ಜಿಲ್ಲಾಧಿಕಾರಿಗಳ ಪರವಾಗಿ ಎಂದು ಸಹಿ ಇರುವ ಕಂದಾಯ ಇಲಾಖೆಯ ಪತ್ರ, ಹಿರಿಯ ಲೆಕ್ಕಾಧಿಕಾರಿಗಳ ಸಹಿ ಇರುವ ಪತ್ರ, ಸಿಎಂ ಸಿದ್ದರಾಮಯ್ಯ ಅವರ ಸಹಿ ಇರುವ ಟಿಪ್ಪಣಿ, ಮಹಾ ನಿರ್ದೇಶಕರ ಪರವಾಗಿ ಎಂದು ಸಹಿ ಇರುವ ಪತ್ರಗಳನ್ನು ಮೊಬೈಲ್‌ಗೆ ಕಳುಹಿಸಿದ್ದ. ಬಳಿಕ ಒಂದು ತಿಂಗಳಾದರೂ ವೆಂಕಟೇಶ್ ಡ್ಯೂಟಿ ರಿಪೋರ್ಟ್ ಮಾಡಿಸದಿದ್ದರಿಂದ, ನೇತ್ರಾವತಿ ಅವರ ಮಗ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಆರೋಪಿ ವಾಟ್ಸ್ಯಾಪ್ನಲ್ಲಿ ಕಳುಹಿಸಿದ್ದ ಎಲ್ಲ ದಾಖಲೆಗಳನ್ನು ತೋರಿಸಿದಾಗ ಅವೆಲ್ಲಾ ಸುಳ್ಳು ದಾಖಲೆಗಳೆಂಬುದು ತಿಳಿದಿದೆ" ಎಂದು ವಿವರಿಸಿದರು.

ಇದೀಗ ಸಿಎಂ, ಚೀಫ್ ಸೆಕ್ರೆಟರಿ, ಡಿಸಿ, ಹಿರಿಯ ಅಧಿಕಾರಿಗಳ ಹೆಸರು, ಸಹಿ ದುರ್ಬಳಕೆ, ವಿವಿಧ ಇಲಾಖೆಗಳ ನಕಲಿ ಲೆಟರ್ ಹೆಡ್, ಸೀಲ್, ಅಧಿಕಾರಿಗಳ ಸಹಿ ಕೂಡ ದುರುಪಯೋಗ ಮಾಡಿದ್ದ ಆರೋಪಿಯನ್ನು ಮಂಡ್ಯ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆರೋಪಿ ವಿರುದ್ಧ ಮಂಡ್ಯ ಪೂರ್ವ ಠಾಣೆಯಲ್ಲಿ ಕಲಂ 316(2), 318(4), 336(3), 61, 351(2) ಕೂಡ 3(5) BNS ಅಡಿಯಲ್ಲಿ ಪ್ರತ್ಯೇಕ 3 ಪ್ರಕರಣಗಳು ದಾಖಲಾಗಿವೆ.
ನಕಲಿ ದಾಖಲೆ ಸೃಷ್ಟಿಸಿ ಮೂವರಿಂದ 45 ಲಕ್ಷ ಪಡೆದು ವಂಚಿಸಿದ್ದ ಆರೋಪಿಯ ಬಳಿಯಿದ್ದ KPSC, ಅಬಕಾರಿ, ವಾಣಿಜ್ಯ ತೆರಿಗೆ, ನಗರಾಭಿವೃದ್ಧಿ ಇಲಾಖೆ, ಮಂಡ್ಯ ಡಿಸಿ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಿಸಿ, ಸ್ಥಳ ನಿಯೋಜಿಸಿ ಆದೇಶ ಹೊರಡಿಸಿರುವ ನಕಲಿ ನೇಮಕಾತಿ ಪತ್ರಗಳು, ದಾಖಲೆಗಳು, ಹಾಜರಾತಿ ಪುಸ್ತಕ, ಸರ್ಕಾರದ ಲೋಗೋ, ನಕಲಿ ಐಡಿ ಕಾರ್ಡ್, ಟ್ಯಾಗ್, FDA, ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನಸೌಧದ ಮುಖ್ಯ ಕಾರ್ಯದರ್ಶಿ ಕಾರ್ಯಾಲಯ ಎಂದು ಆರೋಪಿ ಫೋಟೋ, ಹೆಸರಿರುವ ಐಡಿ ಕಾರ್ಡ್, ಸರ್ಕಾರದ ಲೋಗೋ, ಕರ್ನಾಟಕ ಗವರ್ನ್ಮೆಂಟ್ ಸೆಕ್ರೇಟಿಯೇಟ್ ವಿಧಾನಸೌಧ ಎಂದಿರುವ ಐಡಿ ಹೋಲ್ಡಿಂಗ್ ಟ್ಯಾಗ್ಗಳು, ಹಲವು ನಕಲಿ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬಾಡಿಗೆದಾರರು, ಪ್ರಾಪರ್ಟಿ ಮಾಲೀಕರಿಗೆ ಕೋಟ್ಯಂತರ ರೂ. ವಂಚನೆ : ಓರ್ವ ಆರೋಪಿ ಬಂಧನ