ಬೆಂಗಳೂರು : ಕಬ್ಬನ್ ಪಾರ್ಕ್‌ನಲ್ಲಿ 20 ಜನರನ್ನು ಮೀರಿದ ಯಾವುದೇ ಸಭೆಗೆ ತೋಟಗಾರಿಕಾ ಇಲಾಖೆಯ ಪೂರ್ವಾನುಮತಿಯ ಅಗತ್ಯವಿದೆ ಎಂದು ಕಬ್ಬನ್ ಪಾರ್ಕ್ ಆಡಳಿತ ಮಂಡಳಿ ಹೇಳಿದೆ.
ಕಬ್ಬನ್ ಪಾರ್ಕ್ ಸಂರಕ್ಷಣಾ ಸಮಿತಿಯಲ್ಲಿ ನಿರ್ಧರಿಸಲಾದ ಕಬ್ಬನ್ ಪಾರ್ಕ್ ಮಾರ್ಗಸೂಚಿಗಳು ಮತ್ತು ನಿಯಮಗಳ ಪ್ರಕಾರ 20 ಜನರನ್ನು ಮೀರಿದ ಯಾವುದೇ ಸಭೆಗೆ ತೋಟಗಾರಿಕಾ ಇಲಾಖೆಯ ಪೂರ್ವಾನುಮತಿ ಅಗತ್ಯವಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಡಿಸೆಂಬರ್ 21 (ಶನಿವಾರ) ಕಬ್ಬನ್ ರೀಡ್ಸ್ ಎಂಬ ಸಂಸ್ಥೆಯು ಕಬ್ಬನ್ ಪಾರ್ಕ್‌ನಲ್ಲಿ ರಹಸ್ಯ ಸಾಂಟಾ ಚಟುವಟಿಕೆಗಾಗಿ 500 ರಿಂದ 600ಕ್ಕೂ ಹೆಚ್ಚು ಜನರನ್ನು ಸೇರಿಸಿತ್ತು. ಸಾಕಷ್ಟು ಉಡುಗೊರೆ ಪ್ಯಾಕ್‌ಗಳನ್ನೂ ಕೂಡ ಪಾರ್ಕ್ನ ಒಳಗೆ ತರಲಾಗಿತ್ತು. ಮಾರ್ಗಸೂಚಿಯನ್ನು ಸ್ಪಷ್ಟವಾಗಿ ಉಲ್ಲಂಘಿಸುವ ಕಾರ್ಯಕ್ರಮ ಇದಾಗಿತ್ತು. ಇದರಿಂದ ವಾಕಿಂಗ್ ಮಾಡುವವರಿಗೆ/ಸಂದರ್ಶಕರಿಗೆ ತೊಂದರೆ ಉಂಟಾಗಿತ್ತು. ಉದ್ಯಾನವನದಲ್ಲಿ ಉತ್ತಮವಾದ ಹುಲ್ಲುಹಾಸುಗಳನ್ನು ಬೇಕಾಬಿಟ್ಟಿಯಾಗಿ ತುಳಿಯಲಾಗಿತ್ತು. ಇದನ್ನು ತಕ್ಷಣವೇ ಸಂಘಟಕರಿಗೆ ತಿಳಿಸಿದಾಗ ಕಾರ್ಯಕ್ರಮವನ್ನು ತಕ್ಷಣ ಸ್ಥಗಿತಗೊಳಿಸಲಾಗಿತ್ತು ಎಂದು ಮಾಹಿತಿ ನೀಡಿದೆ.
20 ಕ್ಕಿಂತ ಹೆಚ್ಚು ಜನರು ಭಾಗವಹಿಸುವ ಯಾವುದೇ ಕಾರ್ಯಕ್ರಮಕ್ಕೆ ತೋಟಗಾರಿಕಾ ಇಲಾಖೆಯ ಪೂರ್ವಾನುಮತಿ ಅಗತ್ಯವಿದೆ ಎಂದು ಈ ಮೊದಲು ಕೂಡ ಆದೇಶ ಹೊರಡಿಸಲಾಗಿತ್ತು. ಕೆಲವು ಸಂದರ್ಭಗಳಲ್ಲಿ ಪೊಲೀಸರ ಅನುಮತಿಯ ಅಗತ್ಯವನ್ನು ಕೂಡ ಒತ್ತಿಹೇಳಲಾಗಿತ್ತು. ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ದಂಡವನ್ನು ವಿಧಿಸುವ ಅಧಿಕಾರ ಆಡಳಿತ ಮಂಡಳಿಗೆ ಇದೆ ಎಂದು ಕಬ್ಬನ್ ಉದ್ಯಾನವನದ ಡೆಪ್ಯುಟಿ ಡೈರೆಕ್ಟರ್ ಜಿ. ಕುಸುಮ ಹೇಳಿದ್ದಾರೆ.
ಕಬ್ಬನ್ ಪಾರ್ಕ್ ಆಡಳಿತವು ಎಲ್ಲಾ ಸಂದರ್ಶಕರಿಗೆ ಸುರಕ್ಷಿತ ಮತ್ತು ಆಹ್ಲಾದಕರ ವಾತಾವರಣವನ್ನು ನೀಡಲು ಬದ್ಧವಾಗಿದೆ. ಈ ಉದ್ದೇಶಕ್ಕಾಗಿ ಹೊರಡಿಸಲಾಗಿರುವ ಮಾರ್ಗಸೂಚಿಗಳನ್ನು ಅನುಸರಿಸಲು ಸಾರ್ವಜನಿಕರನ್ನು ವಿನಂತಿಸುತ್ತೇನೆ ಎಂದಿದ್ದಾರೆ.
ಏನಿದು ಕಬ್ಬನ್ ರೀಡ್ಸ್ : ಕಬ್ಬನ್ ರೀಡ್ಸ್ ಪ್ರತಿ ಶನಿವಾರ ಅನೇಕ ಓದುಗ ಉತ್ಸಾಹಿಗಳ ನೆಚ್ಚಿನ ನೆಲೆಯಾಗಿ ಮಾರ್ಪಟ್ಟಿತ್ತು. ಕಬ್ಬನ್ ರೈಟ್ಸ್, ಕಬ್ಬನ್ ಪೇಂಟ್ಸ್ ಮತ್ತು ಕಬ್ಬನ್ ಫೋಲ್ಡ್ಸ್‌ನಿಂದಾಗಿ ಇನ್ನೂ ಹೆಚ್ಚು ಸೃಜನಶೀಲ ಚಟುವಟಿಕೆಗಳ ತಾಣವಾಗಿ ರೂಪುಗೊಂಡಿತ್ತು.
600 ರಿಂದ 700 ಜನರ ಜಮಾವಣೆ : ಕಲಾವಿದರು, ಬರಹಗಾರರು ಮತ್ತು ಧ್ಯಾನಾಸಕ್ತರು ಹೆಚ್ಚು ಇಷ್ಟಪಡುವ ರೀತಿಯಲ್ಲಿ ಅಭಿಯಾನವನ್ನು ಮುನ್ನಡೆಸಲಾಗಿತ್ತು. ಪಾರ್ಕ್‌ನಲ್ಲಿ ಪ್ರತಿ ಶನಿವಾರ ಸುಮಾರು 600 ರಿಂದ 700 ಜನರು ಸೇರುತ್ತಿದ್ದರು.
ಇದನ್ನೂ ಓದಿ : ಬೆಂಗಳೂರಲ್ಲಿ ನೀರಿನ ಅಭಾವ: ಲಾಲ್ಬಾಗ್, ಕಬ್ಬನ್ ಪಾರ್ಕ್ ನಿರ್ವಹಣೆಯೇ ದೊಡ್ಡ ಸವಾಲು - Lack of water - LACK OF WATER