ಬೆಂಗಳೂರು: ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಸರ್ಕಾರಿ ವಲಯದಲ್ಲಿ ಅಡ್ವಾನ್ಸ್ ಪಾರ್ಕಿಂಗ್ ಟೆಕ್ನಾಲಜಿ ಅಳವಡಿಸಿಕೊಂಡಿರುವ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ಉದ್ಘಾಟನೆಗೆ ಸಜ್ಜುಗೊಂಡಿದೆ. ಫ್ರೀಡಂ ಪಾರ್ಕ್ನಲ್ಲಿ ತಲೆ ಎತ್ತಿರುವ ಬ್ರ್ಯಾಂಡ್ ಬೆಂಗಳೂರಿನ ಮೊದಲ ಪ್ರಾಜೆಕ್ಟ್ ಆದ ಬಹುಮಹಡಿ ಪಾರ್ಕಿಂಗ್ ಲಾಟ್ ಜೂನ್ 20ರಂದು ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳಲಿದೆ. ವಿಶೇಷ ಎಂದರೆ ಇಲ್ಲಿ ವಾಹನ ಪಾರ್ಕ್ ಮಾಡಿದರೆ ನಿಗದಿತ ಸ್ಥಳಕ್ಕೆ ಉಚಿತ ಡ್ರಾಪ್ ಮತ್ತು ಪಿಕ್‌ಅಪ್ ವ್ಯವಸ್ಥೆಯೂ ಇರಲಿದೆ. ಈ ಪಾರ್ಕಿಂಗ್ ತಾಣದ ವಿಶೇಷದ ಕುರಿತ ವರದಿ ಇಲ್ಲಿದೆ.
ಮೆಜೆಸ್ಟಿಕ್ನಿಂದ ಕೂಗಳತೆ ದೂರದಲ್ಲಿರುವ ಫ್ರೀಡಂ ಪಾರ್ಕ್ನಲ್ಲಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಿಸಲಾಗಿದೆ. ಮೂರು ಮಹಡಿಗಳನ್ನು ಹೊಂದಿರುವ ಈ ಪಾರ್ಕಿಂಗ್ ಲಾಟ್ ಅತ್ಯಾಧುನಿಕ ಸುಧಾರಿತ ತಂತ್ರಜ್ಞಾನದೊಂದಿಗೆ ಕಾರ್ಯ ನಿರ್ವಹಿಸಲಿದೆ. ಪಾರ್ಕಿಂಗ್ ಸಂಕೀರ್ಣ ಪ್ರವೇಶಿಸಲು ಕಾರುಗಳಿಗೆ ಎರಡು ಲೇನ್ ಮತ್ತು ಬೈಕ್ಗಳಿಗೆ ಎರಡು ಲೇನ್ಗಳನ್ನು ನಿರ್ಮಿಸಲಾಗಿದೆ. ಈ ಲೇನ್ಗಳು ಸ್ವಯಂ ಚಾಲಿತವಾಗಿ ಕಾರ್ಯ ನಿರ್ವಹಿಸಲಿದೆ.
ಪ್ರವೇಶ ದ್ವಾರದ ಬಳಿ ವಾಹನದ ನಂಬರ್ ಪ್ಲೇಟ್ ಕ್ಯಾಮರಾದಲ್ಲಿ ಸೆರೆಯಾಗುತ್ತಿದ್ದಂತೆ ಪ್ರವೇಶಕ್ಕೆ ಅನುಮತಿಸುವ ಚೀಟಿಯನ್ನು ಚಾಲಕರೇ ಬಟನ್ ಒತ್ತುವ ಮೂಲಕ ಪಡೆಯದುಕೊಳ್ಳಬಹುದು. ಇಲ್ಲಿಯೂ ಕ್ಯಾಮರಾ ಇದ್ದು ಚಾಲಕರ ಮುಖದ ಚಿತ್ರವನ್ನು ದಾಖಲಿಸಿಕೊಳ್ಳಲಿದೆ. ನಂತರ ನಿರ್ಗಮಿಸುವ ವೇಳೆಯಲ್ಲಿಯೂ ಚಾಲಕರ ವಿಡಿಯೋ ಸೆರೆ ಹಿಡಿಯಲಿದೆ. ಹಾಗಾಗಿ ವಾಹನವನ್ನು ಯಾರು ತಂದರು ಮತ್ತು ಯಾರು ತೆಗೆದುಕೊಂಡು ಹೋದರು ಎನ್ನುವ ದಾಖಲೆ ಇರಲಿದೆ. ಇನ್ನೂ ನಿರ್ಗಮನ ದ್ವಾರದ ಬಳಿ ಆಟೋಮ್ಯಾಟಿಕ್ ಆಗಿ ಫಾಸ್ಟ್ ಟ್ಯಾಗ್ನಿಂದ ಹಣ ಕಡಿತವಾಗಲಿದೆ. ಇಲ್ಲವೇ ಯುಪಿಐ, ಡಿಜಿಟಲ್ ಮೂಲಕ ಹಣ ಪಾವತಿ ಮಾಡಬಹುದು. ನಗದು ಪಾವತಿಗೂ ಅವಕಾಶವಿದೆ.
ಈ ಪಾರ್ಕಿಂಗ್ ಲಾಟ್ನಲ್ಲಿ 600 ಕಾರುಗಳು ಹಾಗೂ 750 ಬೈಕ್ಗಳನ್ನು ನಿಲ್ಲಿಸುವಷ್ಟು ಸ್ಥಳಾವಕಾಶವಿದೆ. ಪ್ರತೀ ವಾಹನದ ಪಾರ್ಕಿಂಗ್ ಮಾಡಲು ಹಳದಿ ಬಣ್ಣದ ಗೆರೆಗಳನ್ನು ಹಾಕಲಾಗಿದ್ದು, ಅದಕ್ಕೆ ಸೆನ್ಸಾರ್ ಲೈಟ್ಗಳನ್ನು ಅಳವಡಿಸಲಾಗಿದೆ. ಪಾರ್ಕಿಂಗ್ ಜಾಗದಲ್ಲಿ ವಾಹನ ಇದ್ದರೆ ಆ ಜಾಗದ ಮೇಲಿನ ಲೈಟ್ ಕೆಂಪು ಬಣ್ಣಕ್ಕೆ ತಿರುಗಲಿದ್ದು, ಖಾಲಿಯಾಗುತ್ತಿದ್ದಂತೆ ಹಸಿರು ಬಣ್ಣಕ್ಕೆ ಬದಲಾಗಲಿದೆ. ದೂರದಿಂದಲೇ ಎಲ್ಲಿ ಜಾಗ ಖಾಲಿ ಇದೆ ಎನ್ನುವುದನ್ನು ಸುಲಭವಾಗಿ ಗುರಿತಿಸಿ ಅಲ್ಲಿಗೆ ವಾಹನ ಕೊಂಡೊಯ್ದು ನಿಲ್ಲಿಸಬಹುದಾಗಿದೆ. ಇನ್ನೂ ಮಹಿಳೆಯರಿಗೆ ಪ್ರತ್ಯೇಕವಾಗಿ ಪಿಂಕ್ ಪಾರ್ಕಿಂಗ್ ವ್ಯವಸ್ಥೆ, ವಿಶೇಷ ಚೇತನರಿಗೆ ಮೀಸಲು ಪಾರ್ಕಿಂಗ್ ಸ್ಥಳವಿದೆ. ಅಲ್ಲಿ ಮಹಿಳೆಯರು ಮತ್ತು ವಿಶೇಷ ಚೇತನರು ಮಾತ್ರ ವಾಹನ ಪಾರ್ಕ್ ಮಾಡಬಹುದಾಗಿದೆ. ಪಾರ್ಕಿಂಗ್ ಏರಿಯಾದ ಗೋಡೆಗಳನ್ನು ವಿಧಾನಸೌಧ ಸೇರಿ ನಾಡಿನ ಸಾಂಸ್ಕೃತಿಕ ಕಲಾ ಶ್ರೀಮಂತಿಕೆಯನ್ನು ಅನಾವರಣಗೊಳಿಸುವಂತ ಬಣ್ಣಗಳಿಂದ ವಿನ್ಯಾಸಗೊಳಿಸಲಾಗಿದೆ.
ಸೌಲಭ್ಯಗಳು: ಪ್ರತೀ ಮಹಡಿಯೂ ಸಂಪೂರ್ಣ ತುರ್ತು ಅಗ್ನಿಶಾಮಕ ವ್ಯವಸ್ಥೆ ಹೊಂದಿದೆ. ಮಹಿಳೆಯರ ಅನುಕೂಲಕ್ಕೆ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಪ್ರತೀ ಮಹಡಿಯಲ್ಲಿ ನಾಲ್ಕು ಕಡೆ ತುರ್ತು ಬಟನ್ ಅಳವಡಿಸಿದ್ದು, ಆತಂಕ ಅಥವಾ ತುರ್ತು ಸಂದರ್ಭದಲ್ಲಿ ಈ ಬಟನ್ ಒತ್ತಿದರೆ ಸೈರನ್ ಮೊಳಗಲಿದೆ. ಕೂಡಲೇ ಸಂಕೀರ್ಣ ನಿರ್ವಹಣೆ ಮಾಡುವ ಸಿಬ್ಬಂದಿ ಧಾವಿಸಿ ನೆರವಾಗಲಿದ್ದಾರೆ. ಪ್ರತೀ ಮಹಡಿಯಲ್ಲಿಯೂ ಆರ್.ಒ ಸಂಸ್ಕರಿತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಉಚಿತ ವೈಫೈ ವ್ಯವಸ್ಥೆ ಇದ್ದು, ಕಾಫಿ ಕಾರಿಡಾರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಕಾರ್ ಸ್ಪಾ, ಶೌಚಾಲಯ, ಇವಿ ಚಾರ್ಜಿಂಗ್, ವೀಲ್ ಚೇರ್, ಎಸ್‌ಒಎಸ್, ಆ್ಯಂಬುಲೆನ್ಸ್ ಸೇವೆ ಲಭ್ಯವಿರಲಿದೆ ಎಂದು ಪಾರ್ಕಿಂಗ್ ಸೌಲಭ್ಯ ಮತ್ತು ವ್ಯವಸ್ಥೆಗಳ ಕುರಿತು ರೈಟ್ ಪಾರ್ಕಿಂಗ್ ಸೂಪರ್ವೈಸರ್ ಸುನೀಲ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.