ಬೆಂಗಳೂರು : ಬೇಲೇಕೇರಿ ಬಂದರಿನಲ್ಲಿ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಧಿಸಿರುವ ಶಿಕ್ಷೆ ಮತ್ತು ದಂಡದ ಆದೇಶ ರದ್ದುಪಡಿಸುವಂತೆ ಕೋರಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್, ಉದ್ಯಮಿಗಳಾದ ಸ್ವಸ್ತಿಕ್ ನಾಗರಾಜ್, ಕೆವಿಎನ್ ಗೋವಿಂದರಾಜ್ ಮತ್ತು ಚೇತನ್ ಶಾ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಮೆಸರ್ಸ್ ಮಲ್ಲಿಕಾರ್ಜುನ್ ಶಿಪ್ಪಿಂಗ್ ಪ್ರೈ. ಲಿಮಿಟೆಡ್ ಮತ್ತು ಅದರ ಮಾಲೀಕ ಸತೀಶ್ ಸೈಲ್ ಪ್ರತ್ಯೇಕವಾಗಿ ಸಲ್ಲಿಸಿರುವ ಆರು ಅರ್ಜಿಗಳು, ಉದ್ಯಮಿಗಳಾದ ಸ್ವಸ್ತಿಕ್ ನಾಗರಾಜ್, ಕೆವಿಎನ್ ಗೋವಿಂದರಾಜ್ ಮತ್ತು ಚೇತನ್ ಶಾ ಹಾಗೂ ಆಶಾಪುರ ಮೈನ್‌ಚೆಮ್ ಲಿಮಿಟೆಡ್, ಶ್ರೀಲಕ್ಷ್ಮಿವೆಂಕಟೇಶ್ವರ ಮಿನರಲ್ಸ್ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಪ್ರಕರಣ ಸಂಬಂಧ ಆಕ್ಷೇಪಣೆಗಳಿದ್ದರೆ ಸಲ್ಲಿಸಬೇಕೆಂದು ಕೇಂದ್ರೀಯ ತನಿಖಾ ದಳ(ಸಿಬಿಐ)ಕ್ಕೆ ನೋಟಿಸ್ ಜಾರಿ ಮಾಡಿ ಆದೇಶಿಸಿತು.
ವಿಚಾರಣೆವೇಳೆ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್, ಒಟ್ಟು 10 ಅರ್ಜಿಗಳು ಸಲ್ಲಿಕೆಯಾಗಿವೆ. ನವೆಂಬರ್ 12ರ ಬದಲಿಗೆ ಎಲ್ಲಾ ಅರ್ಜಿಗಳ ವಿಚಾರಣೆಯನ್ನು 14ಕ್ಕೆ ನಡೆಸಬೇಕು. ಸಿಆರ್‌ಪಿಸಿ ಸೆಕ್ಷನ್ 389 ಶಿಕ್ಷೆಯನ್ನು ಸ್ವಯಂಚಾಲಿತವಾಗಿ ಅಮಾನತಿನಲ್ಲಿಡಬೇಕು ಎಂದು ಹೇಳುವುದಿಲ್ಲ. ನಾಗೇಶ್ ಸಾಹೇಬ್ರು ಬಳ್ಳಾರಿ, ಸಂಡೂರಿಗೆ ಹೋಗಿಲ್ಲ. ಅಲ್ಲಿಗೆ ಹೋದರೆ ಏನಾಗಿದೆ ಎಂಬುದು ತಿಳಿಯುತ್ತದೆ ಎಂದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಿಆರ್‌ಪಿಸಿ ಸೆಕ್ಷನ್ 389 ಅಡಿ ಶಿಕ್ಷೆಯು ಹತ್ತು ವರ್ಷ ಅಥವಾ ಜೀವಾವಧಿ ಇಲ್ಲದ ಸಂದರ್ಭದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಿಗೆ ನೋಟಿಸ್ ನೀಡಲೇಬೇಕಿಲ್ಲ. ಅವರು ಆಕ್ಷೇಪಣೆ ಸಲ್ಲಿಸುವುದೇ ಬೇಕಿಲ್ಲ. ಹೀಗಿರುವಾಗ, ಸಿಬಿಐ ವಕೀಲರು ಆಕ್ಷೇಪಣೆ ಸಲ್ಲಿಸಲು ಸಮಯ ಕೇಳುವ ಪ್ರಶ್ನೆ ಉಂಟಾಗುವುದಿಲ್ಲ. ಆದರೂ, ಅಂತಿಮವಾಗಿ ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇವೆ. ಮೇಲ್ಮನವಿ ಸಲ್ಲಿಕೆ ಮಾಡಿದಾಗ ವಿಚಾರಣಾಧೀನ ನ್ಯಾಯಾಲಯದ ಶಿಕ್ಷೆಯು ಸ್ವಯಂಚಾಲಿತವಾಗಿ ಅಮಾನತಾಗುತ್ತದೆ. ಗರಿಷ್ಠ ಶಿಕ್ಷೆಯು ಮೂರು ವರ್ಷ ಮಾತ್ರ ಇದೆ. ಇದಕ್ಕೆ ಮ್ಯಾಜಿಸ್ಟ್ರೇಟ್, ಸತ್ರ ನ್ಯಾಯಾಲಯದಲ್ಲಿ ಜಾಮೀನಾಗುತ್ತದೆ. ಹೀಗಿರುವಾಗ ಹೈಕೋರ್ಟ್‌ನಲ್ಲಿ ಜಾಮೀನು ಮಂಜೂರಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.
ಅಲ್ಲದೆ, ಆದೇಶಕ್ಕೆ ಸಂಬಂಧಿಸಿದಂತೆ ಮೂರ್ನಾಲ್ಕು ಕಾನೂನಿನ ಅಂಶಗಳನ್ನು ಪರಿಗಣಿಸಿದ್ದೇವೆ. ವಿಚಾರಣಾಧೀನ ನ್ಯಾಯಾಧೀಶರು ಐಪಿಸಿ ಸೆಕ್ಷನ್ 420 ಅಡಿಯೂ ಆರೋಪ ನಿಗದಿಗೆ ಅನುಮತಿಸಿದ್ದಾರೆ. ಸೆಕ್ಷನ್ 379 ಅಡಿ ಸಹ ಅದೇ ಆರೋಪ ಮಾಡಲಾಗಿದೆ. ಕಳವು ಆರೋಪ ರುಜುವಾತವಾಗಲೂ ನೀವು ಮಾಲೀಕರಾಗಿರಬೇಕು, ನಿಮಗೆ ಅದು ಕಾನೂನುಬದ್ಧವಾಗಿ ಸೇರಿರಬೇಕು ಎಂದರು.