ಕರ್ನಾಟಕ

karnataka

ETV Bharat / state

ಮೊದಲ ಚುನಾವಣೆಯಲ್ಲೇ ಡಾ.ಮಂಜುನಾಥ್​​ಗೆ ಭರ್ಜರಿ ಗೆಲುವು: ಡಾಕ್ಟರ್​ ಹೃದಯ ಬಡಿತಕ್ಕೆ ಮಿಡಿದ ಮತದಾರರು - Bengaluru Rural Lok Sabha - BENGALURU RURAL LOK SABHA

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಎನ್. ಮಂಜುನಾಥ್ ಅವರು ತಮ್ಮ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿದ್ದಾರೆ.

Dr. C.N. Manjunath
ಡಾ.ಸಿ.ಎನ್​. ಮಂಜುನಾಥ್​ (ETV Bharat)

By ETV Bharat Karnataka Team

Published : Jun 4, 2024, 10:15 AM IST

ಮೊದಲ ಚುನಾವಣೆಯಲ್ಲೇ ಡಾ.ಮಂಜುನಾಥ್​​ಗೆ ಭರ್ಜರಿ ಗೆಲುವು: ಡಾಕ್ಟರ್​ ಹೃದಯ ಬಡಿತಕ್ಕೆ ಬಂಡೆ ಪುಡಿ ಪುಡಿ (ETV Bharat)

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಕಾರ್ಯ ಮುಗಿದಿದ್ದು, ಬಿಜೆಪಿ ಅಭ್ಯರ್ಥಿ ಸಿ.ಎನ್. ಮಂಜುನಾಥ್ ಅವರು ತಮ್ಮ ಮೊದಲ ಚುನಾವಣೆಯಲ್ಲೇ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಡಿ.ಕೆ. ಸುರೇಶ್​​ಗೆ ಹೀನಾಯ ಸೋಲು ಕಂಡಿದ್ದಾರೆ.

ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ಫೈಟ್​ಗೆ ಸಾಕ್ಷಿಯಾಗಿದೆ. ಮೈತ್ರಿ ಅಭ್ಯರ್ಥಿಯಾಗಿ ಖ್ಯಾತ ವೈದ್ಯ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ಅಳಿಯ ಡಾ.ಸಿ.ಎನ್. ಮಂಜುನಾಥ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಒಕ್ಕಲಿಗ ಸಮುದಾಯದ ದೇವೇಗೌಡ ಮತ್ತು ಡಿ.ಕೆ. ಶಿವಕುಮಾರ್ ಅವರ ಕುಟುಂಬಕ್ಕೂ ಈ ಚುನಾವಣೆ ಪ್ರತಿಷ್ಠೆಯಾಗಿತ್ತು. ಈ ಎರಡು ಕುಟುಂಬದ ಸದಸ್ಯರು ರಾಜಕೀಯ ಅಖಾಡದಲ್ಲಿ ಮತ್ತೆ ಎದುರಾಗಿದ್ದು, ಇದೀಗ ಮಂಜುನಾಥ್​ ಅವರು ಮೇಲುಗೈ ಸಾಧಿಸಿದ್ದಾರೆ.

ಮತದಾರರು: 8 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ಷೇತ್ರಕ್ಕೆ ಏ.26 ರಂದು ನಡೆದ ಚುನಾವಣೆಯಲ್ಲಿ ಶೇ. 64.88 ಮತದಾನ ದಾಖಲಾಗಿತ್ತು. ಈ ಕ್ಷೇತ್ರದಲ್ಲಿ ಒಟ್ಟು 28,02,956 ಮತದಾರರಿದ್ದಾರೆ.

ಬೆಂಗಳೂರು ಲೋಕಸಭಾ ಕ್ಷೇತ್ರ (ETV Bharat)

ಕಾಂಗ್ರೆಸ್​ ಭದ್ರಕೋಟೆ: ಮೂಲತಃ ಕೃಷಿಕ ಹಾಗೂ ನಂತರ ವ್ಯಾಪಾರೋದ್ಯಮಿಯಾಗಿ ಬೆಳೆದ ಡಿ.ಕೆ. ಸುರೇಶ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ 2013 ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಉಪ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ 2014 ಹಾಗೂ 2019 ರಲ್ಲಿ ಜಯ ಸಾಧಿಸಿದ್ದರು. ಹ್ಯಾಟ್ರಿಕ್​ ಗೆಲವು ಕಂಡಿದ್ದ ಡಿ ಕೆ ಸುರೇಶ್​, ತಮ್ಮ ನಾಲ್ಕನೇ ಸ್ಪರ್ಧೆಯಲ್ಲಿ ಸೋಲು ಕಂಡಿದ್ದಾರೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಂದ ಮಹಿಳಾ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಬೀಳುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್​ ಅಭ್ಯರ್ಥಿಗೆ ಫಲಿತಾಂಶ ನಿರಾಸೆ ತಂದಿದೆ.

ಸರಳ ವ್ಯಕ್ತಿ ಜೊತೆಗೆ ಪ್ರಭಾವಿಗಳ ಬೆಂಬಲವಿದ್ದರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಮಂಜುನಾಥ್ ಅವರು ಹೊಸ ಮುಖ. ಅಷ್ಟೇ ಅಲ್ಲದೇ ವೈದ್ಯರಾಗಿದ್ದವರು ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದಾರೆ. ರಾಜಕೀಯದಲ್ಲಿ ಅನುಭವದ ಕೊರತೆ ಇದ್ದರೂ, ತಮ್ಮ ಮೊದಲ ಪ್ರಯತ್ನದಲ್ಲೇ ಭರ್ಜರಿಯಾಗಿ ಜಯಭೇರಿ ಭಾರಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು ಗ್ರಾಮಾಂತರ: ಬಿಜೆಪಿ​ ​ಅಭ್ಯರ್ಥಿ ಸಿ.ಎನ್. ಮಂಜುನಾಥ್ ಮುನ್ನಡೆ, ಡಿ.ಕೆ. ಸುರೇಶ್ ಹಿನ್ನಡೆ - BENGALURU RURAL LOK SABHA RESULT

ABOUT THE AUTHOR

...view details