ಬೆಂಗಳೂರು: ರಾಜ್ಯದ ವಿದ್ಯುತ್ ಬೇಡಿಕೆ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಲು ನವೀಕರಿಸಬಹುದಾದ ಇಂಧನ ಮೂಲಗಳಿಗೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರ, ಮತ್ತೊಂದು ಬೃಹತ್ ಸೋಲಾರ್ ಪವರ್ ಪಾರ್ಕ್ ಸ್ಥಾಪನೆಗೆ ಮುಂದಾಗಿದೆ. ಪಾವಗಡದಲ್ಲಿಯೇ ರಾಜ್ಯದ ಎರಡನೇ ಸೋಲಾರ್ ಪವರ್ ಪಾರ್ಕ್ ಆರಂಭಕ್ಕೆ ಸಿದ್ಧತೆ ನಡೆದಿದೆ.
ದೇಶದ ಮೊದಲ ಸೋಲಾರ್ ಪವರ್ ಪಾರ್ಕ್ ತಲೆಎತ್ತಿರುವ ಪಾವಗಡದಲ್ಲಿ ಮತ್ತೊಂದು ಬೃಹತ್ ಸೋಲಾರ್ ಪವರ್ ಪಾರ್ಕ್ ಸ್ಥಾಪನೆ ಆಗಲಿದೆ. ಸದ್ಯ ಇರುವ ಸೋಲಾರ್ ಪವರ್ ಪಾರ್ಕ್ 13 ಸಾವಿರ ಎಕರೆ ವ್ಯಾಪ್ತಿಯಲ್ಲಿದ್ದು, 2,050 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿದೆ. ಇದು ದೇಶ ಮಾತ್ರವಲ್ಲ, ಜಗತ್ತಿನ ಅತಿದೊಡ್ಡ ಸೋಲಾರ್ ಪವರ್ ಪಾರ್ಕ್ ಆಗಿತ್ತು. ಆದರೆ, ನಂತರ ರಾಜಸ್ಥಾನದ ಭಡ್ಲಾ ಸೋಲಾರ್ ಪಾರ್ಕ್ ಸ್ಥಾಪನೆಯಾಗಿ 2,245 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭಿಸಿದ ನಂತರ, ವಿಶ್ವದ ಎರಡನೇ ಅತಿದೊಡ್ಡ ದ್ಯುತಿವಿದ್ಯುಜ್ಜನಕ ಸೌರ ಪಾರ್ಕ್ ಆಗಿದೆ.
ಇದೇ ಪಾವಗಡದಲ್ಲಿ ಇದೀಗ ಮತ್ತೆ 10 ಸಾವಿರ ಎಕರೆ ಪ್ರದೇಶದಲ್ಲಿ ಮತ್ತೊಂದು ಸೋಲಾರ್ ಪವರ್ ಪಾರ್ಕ್ ಸ್ಥಾಪನೆಗೆ ನಿರ್ಧರಿಸಲಾಗಿದೆ. ಈ ಬಾರಿ ಪಿಪಿಪಿ ಮಾದರಿಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಭೂಮಿ ಖರೀದಿ ಕುರಿತ ಪ್ರಕ್ರಿಯೆ ನಡೆದಿದ್ದು, ಜಮೀನು ನೀಡಲು ರೈತರು ಒಪ್ಪಿಕೊಂಡಿದ್ದಾರೆ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.
ತಿರುಮಣಿ ಸೌರ ವಿದ್ಯುತ್ ಘಟಕದ ನಿರ್ಮಾಣದ ನಂತರ ರಾರಯಪ್ಟೆ ಭಾಗದಲ್ಲಿ ಸುಮಾರು 10 ಸಾವಿರ ಎಕರೆ ಜಾಗದಲ್ಲಿ ಸೌರ ಘಟಕ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ ಸ್ಥಳೀಯ ರೈತರಿಗೆ ವರದಾನವಾಗಲಿದ್ದು, ಉದ್ಯೋಗ ಸೃಷ್ಟಿಯೂ ಸಾಧ್ಯವಾಗಿದೆ. ಜೊತೆಗೆ ಕೈಗಾರಿಕೆಗಳೂ ಸ್ಥಾಪನೆಯಾಗಲಿದೆ. ಅಷ್ಟು ಮಾತ್ರವಲ್ಲದೆ ಪಾವಗಡವು ವಿಶ್ವದ ಬೃಹತ್ ಸೌರ ವಿದ್ಯುತ್ ಘಟಕ ಆಗಲಿದೆ ಎಂಬ ನಿರೀಕ್ಷೆ ಮೂಡಿಸಿದೆ.
ಮೊದಲ ಸೋಲಾರ್ ಪಾರ್ಕ್ಗೆ 13,000 ಎಕರೆ ಜಮೀನನ್ನು ರೈತರಿಂದ ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗಿದೆ. ಈ ರೀತಿ ಪಡೆದುಕೊಂಡಿರುವ ಪ್ರತಿ ಎಕರೆ ಜಮೀನಿಗೆ ವಾರ್ಷಿಕವಾಗಿ 25 ಸಾವಿರ ಹಣವನ್ನು ಪಾವತಿ ಮಾಡಲಾಗುತ್ತಿದೆ. ಆದರೆ, ಈ ಬಾರಿ ಪಾವಗಡದ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಬೇಕಾದ ಜಮೀನನ್ನು ಮೊದಲ ಯೋಜನೆಯಂತೆ ಅಷ್ಟೇ ದರ ನೀಡಿ ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುವ ಜೊತೆಗೆ ಯೋಜನೆಯಲ್ಲಿ ರೈತರನ್ನೂ ಪಾಲುದಾರರನ್ನಾಗಿ ಸೇರಿಸಿಕೊಳ್ಳುವ ನಿರ್ಧಾರ ಮಾಡಲಾಗಿದೆ.
ಹಾಗಾಗಿ, ಈ ಬಾರಿ ಪಿಪಿಪಿ ಮಾದರಿಯಲ್ಲಿ ಪಾವಗಡದ ಎರಡನೇ ಸೋಲಾರ್ ಪಾರ್ಕ್ ಸ್ಥಾಪನೆಯಾಗಲಿದೆ.
ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ಪ್ರತಿ ಯೂನಿಟ್‌ಗೆ 3.50ಕ್ಕೆ ಗ್ರಾಹಕರನ್ನು ತಲುಪುತ್ತಿದ್ದು, ಕಡಿಮೆ ದರಕ್ಕೆ ವಿದ್ಯುತ್ ಲಭಿಸುತ್ತಿದೆ. ಇಷ್ಟೇ ದರದಲ್ಲಿ ಹೊಸ ಘಟಕದಲ್ಲಿಯೂ ವಿದ್ಯುತ್ ಉತ್ಪಾದನೆಯಾಗಲಿದೆ. ಇದು ಇಂಧನ ಇಲಾಖೆಗೆ ಹೆಚ್ಚುವರಿ ಹಣ ನೀಡಿ ವಿದ್ಯುತ್ ಖರೀದಿಸಬೇಕಾದ ಹೊರೆಯನ್ನು ತಗ್ಗಿಸಲಿದೆ. ಹಾಗಾಗಿ, ಸರ್ಕಾರ ಎರಡನೇ ಸೋಲಾರ್ ಪಾರ್ಕ್ ಸ್ಥಾಪನೆಗೆ ಮುಂದಾಗಿದೆ.