ಮೈಸೂರು : ವಿಶ್ವ ಚೊಚ್ಚಲ ಖೋ ಖೋ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿದ್ದ ಮೈಸೂರಿನ ಗ್ರಾಮೀಣ ಪ್ರತಿಭೆ ಚೈತ್ರಾ ಕುರುಬೂರು ಹಾಗೂ ಮಂಡ್ಯ ಮೂಲದ ಗೌತಮ್ ಈಟಿವಿ ಭಾರತದ ಜತೆ ವಿಶ್ವ ಚಾಂಪಿಯನ್ಶಿಪ್ ಖೋ ಖೋದ ಬಗ್ಗೆ ಹಾಗೂ ಇತರ ವಿಚಾರಗಳ ಕುರಿತು ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಖೋ..ಖೋ.. ವಿಶ್ವ ಚಾಂಪಿಯನ್ಶಿಪ್ಗೆ ಭಾರತದ ತಂಡದಲ್ಲಿ ಭಾಗವಹಿಸಲು ಸಿಕ್ಕ ಅವಕಾಶ, ಕಲಿಕೆ, ಮನೆಯವರ ಪ್ರೋತ್ಸಾಹ ಹಾಗೂ ದೆಹಲಿಯಲ್ಲಿ ನಡೆದ ಫೈನಲ್ ಪಂದ್ಯದ ಜತೆಗೆ ಸರ್ಕಾರದಿಂದ ಹೆಚ್ಚಿನ ಸಹಾಯದ ಬಗ್ಗೆ ಮಾತನಾಡಿದ್ದಾರೆ.
ಚೈತ್ರಾ ಹೇಳಿದ್ದೇನು? 2011ರಲ್ಲಿ ನಾನು ಮೊದಲ ಬಾರಿಗೆ ಶಾಲೆಯಲ್ಲಿ ಪಿಟಿ ಸಮಯದ ವೇಳೆ ಖೋ ಖೋ ಆಡಲು ಪ್ರಾರಂಭ ಮಾಡಿದೆ. ನಾನು ಖೋ ಖೋ ಆಟ ಬಹಳ ಚೆನ್ನಾಗಿ ಆಡುತ್ತಿದ್ದ ಕಾರಣ ನಮ್ಮ ಶಿಕ್ಷಕರು ಅಭ್ಯಾಸ ಮಾಡಲು ಹೇಳಿದರು. ನಮ್ಮ ಅಣ್ಣ ಕೂಡಾ ಖೋ ಖೋ ಆಟಗಾರ ಆಗಿದ್ದ. ಹೀಗಾಗಿ ಆಟದ ಮೇಲೆ ಹೆಚ್ಚಿನ ಒಲವು ಬಂತು ಎಂದರು.
ಶ್ರೀ ದೇಗುಲ ಮಠದ ವಿದ್ಯಾದರ್ಶಿನಿ ಸಂಸ್ಥೆಯಲ್ಲಿ ನಾನು ಇಂದಿಗೂ ಅಭ್ಯಾಸ ಮಾಡುತ್ತಿದ್ದೇನೆ. ನಾನು ಬೆಳಗ್ಗೆ 5.30 ರಿಂದಲೇ ಅಭ್ಯಾಸ ಮಾಡುತ್ತೇನೆ. ಶಾಲಾ - ಕಾಲೇಜು ಮುಗಿಸಿಕೊಂಡು ಪ್ರತಿನಿತ್ಯ ಅಭ್ಯಾಸ ಮಾಡುತ್ತೇನೆ. ಇಂದು ನಾನು ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ನನ್ನ ಕೋಚ್ ಮಂಜು ಅವರು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಕರ್ನಾಟಕ ರಾಜ್ಯ ಮತ್ತು ಮೈಸೂರು ಜಿಲ್ಲಾ ಖೋ ಖೋ ಸಂಸ್ಥೆಗಳು ಕೂಡಾ ನನಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ ಎಂದು ಹೇಳಿದರು.
ನಮ್ಮ ತಂದೆ ರೈತರು. ಅಮ್ಮ ಗೃಹಿಣಿಯಾಗಿದ್ದಾರೆ. ಅಣ್ಣ ಖೋ ಖೋ ಆಟಗಾರ. ಅವನಿಂದಲೇ ನಾನು ಪ್ರೇರಣೆ ಪಡೆದಿದ್ದೇನೆ. ಕ್ರೀಡೆ ಜೊತೆಗೆ ಓದುವುದನ್ನು ಕೂಡಾ ನಮ್ಮ ಕೋಚ್ ನಮಗೆ ಹೇಳಿಕೊಟ್ಟಿದ್ದಾರೆ. ಆಟದ ಮೈದಾನದಲ್ಲೇ ನಮಗೆ ಓದಲು ಸಮಯ ನೀಡುತ್ತಿದ್ದರು. ನಾನು ಓದಿದ ಎಲ್ಲಾ ಸಂಸ್ಥೆಗಳಲ್ಲಿ ನನ್ನ ಕ್ರೀಡೆಗೆ ಸಹಕಾರ ನೀಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.
![world-kho-kho-champions-interview](https://etvbharatimages.akamaized.net/etvbharat/prod-images/06-02-2025/23486887_thumbnkj.jpg)
ಗ್ರಾಮೀಣ ಮಕ್ಕಳಿಗೆ ಕ್ರೀಡೆ ಬಗ್ಗೆ ಸಾಕಷ್ಟು ಆಸಕ್ತಿ ಇದೆ. ಆದರೆ ಸರಿಯಾದ ಮಾರ್ಗದರ್ಶನ ಮತ್ತು ಮೈದಾನ ಇರುವುದಿಲ್ಲ. ಹೀಗಾಗಿ, ಸರಿಯಾದ ಸೌಲಭ್ಯಗಳು ಸಿಕ್ಕರೆ ಗ್ರಾಮೀಣ ಭಾಗದ ಮಕ್ಕಳು ಇನ್ನೂ ಹೆಚ್ಚಿನ ಸಾಧನೆ ಮಾಡಬಹುದು ಎಂದು ಹೇಳಿದರು.
ನಮ್ಮ ರಾಜ್ಯದಿಂದ ನಾಲ್ಕು ಜನರು ಆಯ್ಕೆ ಆಗಿದ್ದೆವು. ನಮಗೆ ದೆಹಲಿಯಲ್ಲಿ ಒಂದು ತಿಂಗಳ ಕಾಲ ತರಬೇತಿ ನೀಡಿದರು. ನಾವು ಜಿಲ್ಲೆ, ರಾಜ್ಯವನ್ನು ಪ್ರತಿನಿಧಿಸುವ ಆಟವನ್ನು ಆಡುತ್ತಿದ್ದೆವು. ಈಗ ಇಡೀ ದೇಶವನ್ನೇ ಪ್ರತಿನಿಧಿಸುವ ಸಲುವಾಗಿ ಆಡುತ್ತಿದ್ದೇವೆ ಎಂದು ಹೇಳಿದರು.
ಆಡಿದ ಎಲ್ಲಾ ಮ್ಯಾಚ್ಗಳಲ್ಲಿ ಒಂದೊಂದು ವಿಷಯವನ್ನು ತಿಳಿದುಕೊಂಡಿದ್ದೇವೆ. ಅವರು ಆಟ ಆಡುವಾಗ ಬಳಸುವ ತಂತ್ರಗಳನ್ನು ನಾವು ಕೂಡಾ ಅಳವಡಿಸಿಕೊಂಡೆವು ಎಂದರು.
![world-kho-kho-champions-interview](https://etvbharatimages.akamaized.net/etvbharat/prod-images/06-02-2025/23486887_thumbnakkk.jpg)
ಖೋ ಖೋ ಆಟಕ್ಕೆ ಸರ್ಕಾರ ಹೆಚ್ಚಿನ ಸಹಕಾರ ನೀಡಬೇಕೆಂದು ಬಯಸುತ್ತೇನೆ. ಇದು ಕೂಡಾ ಅಂತಾರಾಷ್ಟ್ರೀಯ ಆಟವಾಗಿದೆ, ಹೆಚ್ಚಿನ ಪ್ರೋತ್ಸಾಹ ನೀಡಿದರೆ, ಮಕ್ಕಳು ಖೋ ಖೋ ಆಟದಲ್ಲೂ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಗೌತಮ್ ಹೇಳಿದ್ದು ಹೀಗೆ; ಇಂದು ಬಹಳ ಖುಷಿಯಾಗಿದೆ. ಗ್ರಾಮೀಣ ಕ್ರೀಡೆ ಖೋ ಖೋ ಅಂತಾರಾಷ್ಟ್ರೀಯ ಮತ್ತು ಒಲಿಂಪಿಕ್ ಹಂತದಲ್ಲಿ ಬಂದಿದೆ. ಮಕ್ಕಳು ಈಗ ಧೈರ್ಯವಾಗಿ ಖೋ ಖೋ ಆಡಿ ಜೀವನ ರೂಪಿಸಿಕೊಳ್ಳಬಹುದು. ರಾಜ್ಯದಲ್ಲಿ ಖೋ ಖೋ ಕ್ಲಬ್ ಮತ್ತು ತಂದೆ ತಾಯಿ ಬಿಟ್ಟರೆ ಬೇರೆ ಕಡೆಯಿಂದ ಯಾವುದೇ ಪ್ರೋತ್ಸಾಹ ಇಲ್ಲ. ಹೀಗಾಗಿ ಎಲ್ಲರೂ ಖೋ ಖೋಗೆ ಪ್ರೋತ್ಸಾಹ ನೀಡಬೇಕು. 2008 ರಿಂದ ನಾನು ನಿರಂತರವಾಗಿ ಖೋ ಖೋ ಅಭ್ಯಾಸ ಮಾಡಿಕೊಂಡು ಬಂದಿದ್ದೇನೆ. ಬೇರೆ ಕ್ರೀಡೆಗಳ ರೀತಿ ಖೋ ಖೋ ಅಲ್ಲ. ಇದನ್ನು ಎಲ್ಲಾ ಕ್ರೀಡೆಗಳ ತಾಯಿ ಎಂದು ಕರೆಯುತ್ತಾರೆ ಎಂದರು.
ನಿರಂತರವಾದ ಅಭ್ಯಾಸ ಬೇಕು : ಯಾವುದೇ ಕ್ರೀಡೆಯನ್ನು ಅಭ್ಯಾಸ ಇಲ್ಲದೇ ಆಡಲು ಸಾಧ್ಯವಿಲ್ಲ. ಇದಕ್ಕೆ ನಿರಂತರವಾಗಿ ಅಭ್ಯಾಸ ಮಾಡಲೇಬೇಕು. ಅದರಲ್ಲೂ ಈಗ ಖೋ ಖೋಗೆ ಹೆಚ್ಚಿನ ಪೈಪೋಟಿ ಇದೆ. ದೇಶದ ಎಲ್ಲಾ ರಾಜ್ಯದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಆರೋಗ್ಯ ಸರಿ ಇಲ್ಲ ಎಂದರೂ ನಾವು ಅಭ್ಯಾಸ ಮಾಡುತ್ತಿದ್ದೆವು. ಅದಕ್ಕಾಗಿ ಇಂದು ನಾನು ಹಾಗೂ ಚೈತ್ರಾ ಈ ಹಂತಕ್ಕೆ ತಲುಪಿದ್ದೇವೆ. ರಾಜ್ಯದ ಎಲ್ಲಾ ಮಕ್ಕಳಿಗೂ ನಾವು ಸ್ಪೂರ್ತಿ ಆಗಿದ್ದೇವೆ ಎಂದು ಸಂತಸ ಹಂಚಿಕೊಂಡರು.
ನಮ್ಮ ತಂದೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ. ಮಲ್ಲಿಗೆರೆ ಗ್ರಾಮದವರು. ಮೂಲ ಕೃಷಿಕ ಕುಟುಂಬ ನಮ್ಮದು. ಅನಂತರ ನಾವು ಬೆಂಗಳೂರಿಗೆ ಹೋದೆವು. ಅಲ್ಲಿ ನಮ್ಮ ತಂದೆ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಶಾಲೆಗೆ ಹೋಗುವ ಸಮಯದಲ್ಲೇ ಖೋ ಖೋ ಆಡಲು ಶುರು ಮಾಡಿದೆ ಎಂದರು.
![world-kho-kho-champions-interview](https://etvbharatimages.akamaized.net/etvbharat/prod-images/06-02-2025/23486887_thumbnk.jpg)
ನಂತರ ಹೈಸ್ಕೂಲ್ನಲ್ಲಿದ್ದಾಗ ಬೆಂಗಳೂರಿನ ಯಂಗ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ತರಬೇತಿ ಪಡೆದುಕೊಂಡೆ. ಅಲ್ಲಿ ಕುಮಾರ್ ಎನ್ನುವವರು ನನ್ನ ನೋಡಿ ಅವರ ಸಂಘಕ್ಕೆ ಸೇರಿಸಿಕೊಂಡರು. ಇದುವರೆಗೂ ನಾನು 24 ಬಾರಿ ರಾಜ್ಯ ಮಟ್ಟದಲ್ಲಿ ಖೋ ಖೋ ಆಡಿದ್ದೇನೆ. 2018 ರಲ್ಲಿ ಮೊದಲ ಬಾರಿಗೆ ಟೆಸ್ಟ್ ಮ್ಯಾಚ್ನಲ್ಲಿ ಆಡಿದ್ದೇನೆ ಎಂದು ಹೇಳಿದರು.
ಯುವಕರು ಧೈರ್ಯವಾಗಿ ಕ್ರೀಡಾ ಕ್ಷೇತ್ರಕ್ಕೆ ಬರಬಹುದು : ಈಗಿನ ಯುವಕರು ಧೈರ್ಯವಾಗಿ ಕ್ರೀಡಾ ಕ್ಷೇತ್ರಕ್ಕೆ ಬರಬಹುದು. ನಾವು ಇದುವರೆಗೂ ಬೇರೆ ದೇಶದ ಕ್ರೀಡೆಗೆ ಹೆಚ್ಚು ಆಕರ್ಷಿತರಾಗಿದ್ದೇವೆ. ನಮ್ಮ ದೇಶದ ಆಟಗಳನ್ನು ಹೆಚ್ಚು ಆಡುವ ಮೂಲಕ ನಮ್ಮ ದೇಶಕ್ಕೂ ಒಲಂಪಿಕ್ನಲ್ಲಿ ಹೆಚ್ಚಿನ ಮೆಡಲ್ ತರಬಹುದು. ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಇದೇ ಮಾತು ಹೇಳಿದ್ದಾರೆ. ಚುನಾವಣೆ ಮುಗಿದ ಬಳಿಕ ಭೇಟಿ ಮಾಡಲು ಅವಕಾಶ ನೀಡಿದ್ದಾರೆ. ಕ್ರೀಡಾ ಸಚಿವರು ಕೂಡಾ ನಮಗೆ ಭರವಸೆ ನೀಡಿದ್ದಾರೆ. ಖೋ ಖೋ ಅಂತಾರಾಷ್ಟ್ರೀಯ ಕ್ರೀಡೆಯಾಗಿ ಒಲಿಂಪಿಕ್ನಲ್ಲಿ ಸೇರ್ಪಡೆಯಾಗಿದೆ ಎಂದು ತಿಳಿಸಿದರು.
ಫೈನಲ್ ಆಡುವಾಗ ಸ್ವಲ್ಪ ಭಯ ಇತ್ತು : ಸೆಮಿಫೈನಲ್ ಸೌತ್ ಆಫ್ರಿಕಾ ಮೇಲೆ ಆಡುವಾಗ ಸ್ವಲ್ಪ ಕಷ್ಟವಾಗಿತ್ತು. ನಾವು ಮೊದಲ ಬಾರಿ ಫೈನಲ್ ತಲುಪಿದ್ದೆವು. ನಮ್ಮ ಭಯವನ್ನು ಎಲ್ಲಿಯೂ ಕೂಡಾ ತೋರಿಸಿಕೊಳ್ಳುವಂತೆ ಇರಲಿಲ್ಲ. ಆದರೆ, ಕೊನೆಯಲ್ಲಿ ನೇಪಾಳ ಮೇಲೆ ಫೈನಲ್ ಆಡುವಾಗ ನೆರೆದಿದ್ದ ಜನ ಮತ್ತು ನಮ್ಮ ತಂಡದವರ ಸಹಾಯದಿಂದ ನಾವು ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದೆವು. ನಮ್ಮ ಕೋಚ್ಗಳು ನಮಗೆ ಸಾಕಷ್ಟು ವಿಶ್ವಾಸ ತುಂಬುತ್ತಿದ್ದರು. ಇದು ನಮಗೆ ಆಟದಲ್ಲಿ ಗೆಲುವು ಸಾಧಿಸಲು ಸಹಾಯವಾಯಿತು ಎಂದರು.
ರಾಜ್ಯ ಸರ್ಕಾರ ಖೋ ಖೋ ಕ್ರೀಡೆಗೆ ಸಹಕಾರ ನೀಡಬೇಕು : ಖೋ ಖೋ ಕ್ರೀಡೆಗೆ ಕೇಂದ್ರ ಸರ್ಕಾರದಿಂದ ಸಹಾಯ ಮಾಡುತ್ತಾರೆ. ಆದರೆ ನಮಗೆ ರಾಜ್ಯ ಸರ್ಕಾರದಿಂದ ಸಲ್ಲಬೇಕಾದ ಗೌರವ ಸರಿಯಾದ ರೀತಿಯಲ್ಲಿ ಸಲ್ಲಿಕೆ ಆಗಲಿಲ್ಲ. ರಾಜ್ಯ ಸರ್ಕಾರ ನೀಡಿದ ನಗದು ಬಹುಮಾನವನ್ನು ತಿರಸ್ಕರಿಸುವ ಮೂಲಕ ಸಿಎಂ ಅವರಿಗೆ ನಾವು ಅವಮಾನ ಮಾಡಿಲ್ಲ. ಎಲ್ಲರೂ ತಪ್ಪು ತಿಳಿದುಕೊಂಡಿದ್ದಾರೆ. ಆದರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ನಗದು ಬಹುಮಾನ ಸ್ವಲ್ಪ ಕಡಿಮೆ ಇದೆ. ಇದರಿಂದಾಗಿ ತಂದೆ -ತಾಯಿ ಮಕ್ಕಳನ್ನು ಖೋ ಖೋಗೆ ಕಳುಹಿಸಲು ಯೋಚನೆ ಮಾಡುತ್ತಾರೆ. ಹೆಚ್ಚು ಗೌರವಧನ ನೀಡಿದರೆ ತಂದೆ - ತಾಯಿಗಳು ತಮ್ಮ ಮಕ್ಕಳನ್ನು ಹೆಚ್ಚಿಗೆ ಕಳುಹಿಸಲು ಒಲವು ತೋರುತ್ತಾರೆ ಎಂದು ಹೇಳಿದರು.
ಸಿಎಂ ಕೂಡ ಇದರ ಬಗ್ಗೆ ಯೋಚನೆ ಮಾಡಿ ನಿರ್ಧಾರ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಸಿಕ್ಕರೆ ಹೆಚ್ಚಿನ ಮಕ್ಕಳು ಖೋ ಖೋ ಆಡಲು ಮುಂದಾಗುತ್ತಾರೆ. ಪ್ರತಿಯೊಂದು ಖೋ ಖೋ ಕ್ಲಬ್ನಲ್ಲಿ ಹಾಸ್ಟೆಲ್ ಮಾಡಿ, ಮುಂದೆ ಬರುವ ಮಕ್ಕಳಿಗೆ ದಾರಿ ದೀಪವಾಗಬೇಕು ಎಂಬ ಆಸೆ ಇದೆ. ಅದನ್ನು ಮಾಡಲು ಪ್ರಯತ್ನ ಪಡುತ್ತೇನೆ ಎಂದರು.
ಇದನ್ನೂ ಓದಿ : ಕರ್ನಾಟಕ ಖೋ ಖೋ ತಂಡದ ಸಹಾಯಕ ತರಬೇತುದಾರರಾಗಿ ಪುತ್ತೂರಿನ ಕಾರ್ತಿಕ್ ಎನ್ ಆಯ್ಕೆ - KHO KHO TEAM ASSISTANT COACH