ಬೆಂಗಳೂರು:ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನದ ಬಹುಶಾಸ್ತ್ರಿಯ ಸಂಶೋಧನಾ ವಿಶ್ವವಿದ್ಯಾಲಯ ಯೋಜನೆಯಡಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ 100 ಕೋಟಿ ಅನುದಾನ ಘೋಷಣೆಯಾಗಿದೆ. ದೇಶದ 1,472 ವಿಶ್ವವಿದ್ಯಾಲಯಗಳಲ್ಲಿ ಕೇವಲ 26 ವಿಶ್ವವಿದ್ಯಾಲಯಗಳು ಮಾತ್ರ ಪಿಎಂ- ಉಷಾ ಬಹುಶಾಸ್ತ್ರಿಯ ಸಂಶೋಧನಾ ವಿಶ್ವವಿದ್ಯಾಲಯ ಯೋಜನೆಯ ಮಾನದಂಡದಡಿ ಸ್ಥಾನ ಪಡೆದಿದ್ದು, ಅದರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಕೂಡ ಒಂದಾಗಿದೆ.
ಪಿ ಎಂ ಉಷಾ ಯೋಜನೆಯಡಿ 100 ಕೋಟಿ ಘೋಷಣೆಯಾಗಿರುವುದು ಇಡೀ ವಿವಿಗೆ ಹೆಮ್ಮೆ ತಂದಿದೆ. ಯೋಜನೆಯ ಎಲ್ಲಾ ಮಾನದಂಡಗಳಲ್ಲಿ ಶ್ರೇಷ್ಠ ಸಾಧನೆ ಮಾಡಿ ವಿವಿ ಅನುದಾನ ಪಡೆದುಕೊಂಡಿದೆ. ಇದು ಬೆಂಗಳೂರು ವಿಶ್ವವಿದ್ಯಾಲಯದ ಸಾಧನೆಯ ಪ್ರತೀಕವಾಗಿದೆ. ಶಿಕ್ಷಣ, ಅಧ್ಯಯನ ಹಾಗೂ ಸಂಶೋಧನೆಗೆ ನಿರಂತರ ಆದ್ಯತೆ ನೀಡಿದ್ದ ವಿಶ್ವವಿದ್ಯಾಲಯಕ್ಕೆ ಈ ಯೋಜನೆಯ ಮೂಲಕ ಮತ್ತಷ್ಟು ಬಲ ಬಂದಿದೆ. 100 ಕೋಟಿ ರೂಪಾಯಿ ಅನುದಾನವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಏಳ್ಗೆಗೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಸಮರ್ಪಕವಾಗಿ ಬಳಸುತ್ತೇವೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಕಾರ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ ಎಸ್ ಎಂ ಜಯಕರ ಸಂತಸ ವ್ಯಕ್ತಪಡಿಸಿದ್ದಾರೆ.
ವಿವಿ ಅಭಿವೃದ್ಧಿಗೆ ಅನುದಾನ:ಈ ಅನುದಾನದಡಿ 50 ಕೋಟಿಯನ್ನು ಪ್ರಸ್ತಾವಿತ ಹೊಸ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಶೈಕ್ಷಣಿಕ ಕಟ್ಟಡಗಳು, ಆಂಪಿಥಿಯೇಟರ್ ಮತ್ತು ಹಾಸ್ಟೆಲ್‌ಗಳನ್ನು ನಿರ್ಮಿಸಲು ಮೀಸಲಿಡಲಾಗುವುದು. 30 ಕೋಟಿ ರೂ.ಗಳಲ್ಲಿ ಕ್ಯಾಂಪಸ್ ನೆಟ್‌ವರ್ಕಿಂಗ್ ಉನ್ನತೀಕರಣ, ಕ್ರೀಡಾ ಸೌಲಭ್ಯಗಳ ಹೆಚ್ಚಳ, ಸ್ಮಾರ್ಟ್ ಕ್ಲಾಸ್, ಆರೋಗ್ಯ ಕೇಂದ್ರದ ಉನ್ನತೀಕರಣ, ಮ್ಯೂಸಿಯಂ ಸಂಪನ್ಮೂಲಗಳ ಡಿಜಿಟಲೀಕರಣ, ಪರಿಸರ ಸಂರಕ್ಷಣೆ ಮತ್ತು ಹಸಿರು ಕ್ಯಾಂಪಸ್ ಮಾಡಲು ಬಳಸಲಿದ್ದೇವೆ.