ಮಂಗಳೂರು:14ನೇ ಆವೃತ್ತಿಯ 'ಆಳ್ವಾಸ್ ಪ್ರಗತಿ -2024' ಬೃಹತ್ ಉದ್ಯೋಗ ಮೇಳ ಜೂನ್ 7 ಮತ್ತು 8ರಂದು ನಡೆಯಲಿದೆ ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದ್ದಾರೆ.
ವಿದ್ಯಾಗಿರಿಯ ಕಾಲೇಜು ಆವರಣದಲ್ಲಿ ನಡೆಯಲಿರುವ ಮೇಳದಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ, ಐಟಿಎಸ್, ಮ್ಯಾನುಫ್ಯಾಕ್ಚರಿಂಗ್, ಹೆಲ್ತ್ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಹಾಸ್ಪಿಟಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಮತ್ತು ಎನ್‌ಜಿಒಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ನೇಮಕಾತಿ ನಡೆಸಲಿವೆ.
ಈ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್‌ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ ಎಸ್‌ಎಸ್‌ಎಲ್‌ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳ ವಿವರ ಹಾಗೂ ನವೀಕೃತ ಮಾಹಿತಿಗಳನ್ನು ಅಧಿಕೃತ ವೆಬ್‌ಸೈಟ್ www.alvaspragati.comನಲ್ಲಿ ಪ್ರಕಟಿಸಲಾಗಿದೆ. ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ಈ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಉಚಿತ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬಹುದು. ಅಲ್ಲದೇ ಆಳ್ವಾಸ್ ಸಂಸ್ಥೆಯ ಪರಿಣತ ತಂಡದಿಂದ 'ಆಳ್ವಾಸ್ ಪ್ರಗತಿ'ಯಲ್ಲಿ ಉದ್ಯೋಗ ನೀಡುವ ಕಂಪೆನಿಗಳ ಮಾಹಿತಿ, ಸಂದರ್ಶನಾ ಕೌಶಲ್ಯಗಳ ತರಬೇತಿಯನ್ನು ವಿವಿಧ ಕಡೆಗಳಲ್ಲಿ ನೀಡಲಾಗುತ್ತದೆ.
200ಕ್ಕೂ ಅಧಿಕ ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇರುವುದರಿಂದ ವಿವಿಧ ಕಾಲೇಜುಗಳ ಪ್ರಾಂಶುಪಾಲರಿಗೆ ಮುಂಚಿತವಾಗಿ ತಿಳಿಸಿ, ಅಲ್ಲಿನ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಉತ್ತೇಜಿಸಲಾಗುತ್ತಿದೆ.
ಉತ್ತಮ ಉದ್ಯೋಗಾವಕಾಶಗಳ ಮಹಾಪೂರ:ಆಳ್ವಾಸ್ ಪ್ರಗತಿಗೆ ಈವರೆಗೆ 60 ಕಂಪೆನಿಗಳು ನೋಂದಾಯಿಸಿಕೊಂಡಿದ್ದು, ಹೆಚ್ಚುವರಿಯಾಗಿ 137 ಕಂಪೆನಿಗಳು ಪಾಲ್ಗೊಳ್ಳುವ ಭರವಸೆ ನೀಡಿವೆ. ಒಟ್ಟು 200ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಎಂಬಿಎ, ಎಂ.ಕಾಂ, ಬಿ.ಕಾಂ, ಬಿಬಿಎ, ಬಿಎಸ್ಸಿ, ಬಿಎ, ಬಿಸಿಎ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಹೈದರಾಬಾದ್‌ನ ಫ್ಯಾಕ್ಟ್ಸೆಟ್ ಸಂಸ್ಥೆ, ಇಎಕ್ಸ್ಎಲ್ ಸರ್ವೀಸ್, ಮಹೀಂದ್ರಾ ಫಿನಾನ್ಸ್, ಪ್ರತಿಷ್ಠಿತ ಬ್ಯಾಂಕ್‌ಗಳಾದ ಎಚ್‌ಡಿಎಫ್‌ಸಿ, ಆ್ಯಕ್ಸಿಸ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಬಂಧನ್ ಬ್ಯಾಂಕ್ ಹಾಗೂ ಇನ್ನಿತರ ಸಂಸ್ಥೆಗಳು ಉದ್ಯೋಗಾವಕಾಶಗಳನ್ನು ನೀಡುವ ನಿರೀಕ್ಷೆ ಇದೆ.
ಉತ್ಪಾದನಾ ವಲಯದಲ್ಲಿ ಕಿರ್ಲೋಸ್ಕರ್ ಟೊಯೋಟಾ ಟೆಕ್ಸ್ಟೈಲ್ ಮೆಷಿನರಿ, ಉಷಾ ಆರ್ಮರ್ ಮುಂತಾದ ಕಂಪೆನಿಗಳು ಭಾಗವಹಿಸಲಿವೆ. ಐಟಿ ವಲಯದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ದಿಯಾ ಸಿಸ್ಟಮ್ಸ್, 24*7ಎಐ, ಕಾನ್ಸೆಂಟ್ರಿಕ್ಸ್, ವಿನ್‌ಮ್ಯಾನ್ ಸಾಫ್ಟ್ವೇರ್ ಕಂಪೆನಿಗಳು ಯಾವುದೇ ಹಿನ್ನಲೆಯ ಪದವೀಧರರನ್ನು ನೇಮಿಸಿಕೊಳ್ಳಲಿವೆ.
ಮಾರಾಟ ವಲಯದಲ್ಲಿ ಕಲ್ಟ್ಫಿಟ್, ಐಟಿಸಿ ಲಿಮಿಟೆಡ್, ಬ್ಲೂಸ್ಟೋನ್ ಜ್ಯುವೆಲ್ಲರಿಗಳು ಪದವೀಧರರಿಗೆ ಉದ್ಯೋಗ ನೀಡಲಿವೆ. ಅಜಾಕ್ಸ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್, ಬುಹ್ಲರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ನೆಕ್ಸ್ಟೀರ್ ಆಟೋಮೋಟಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ವಂಡರ್ಲಾ ಹಾಲಿಡೇಸ್‌ನಂತಹ ಕಂಪೆನಿಗಳು ಮೆಕ್ಯಾನಿಕಲ್ ಇಂಜಿನಿಯರ್‌ಗಳಿಗೆ 50ಕ್ಕೂ ಹೆಚ್ಚಿನ ಉದ್ಯೋಗಾವಕಾಶ ನೀಡಲಿವೆ. ವೋಲ್ವೋಗ್ರೂಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಹಿಳಾ ಮೆಕ್ಯಾನಿಕಲ್ ಪದವೀಧರರಿಗೆ ಉದ್ಯೋಗ ನೀಡಲಿದೆ.