ಬೆಂಗಳೂರಿನಲ್ಲಿರುವ ಹೆಚ್.ಡಿ.ದೇವೇಗೌಡರ ನಿವಾಸದ ಮುಂದೆ ಜೆಡಿಎಸ್ ಕಾರ್ಯಕರ್ತರನ್ನು ಹೆಚ್.ಡಿ.ರೇವಣ್ಣ ಭೇಟಿ ಮಾಡಿದರು. (ETV Bharat) ಬೆಂಗಳೂರು: ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ, ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ ಇಂದು ಮಧ್ಯಾಹ್ನ ಜೈಲಿನಿಂದ ಬಿಡುಗಡೆಯಾಗಿ ತಮ್ಮ ತಂದೆ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ನಿವಾಸದ ಎದುರು ನೆರೆದಿದ್ದ ಪಕ್ಷದ ಕಾರ್ಯಕರ್ತರನ್ನು ಕಂಡು ರೇವಣ್ಣ ಕಣ್ಣೀರು ಹಾಕಿದರು.
ಹೆಚ್.ಡಿ. ರೇವಣ್ಣ ಅವರಿಗೆ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. 6 ದಿನಗಳ ಕಾಲ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಅವರು ಇಂದು ಬಿಡುಗಡೆಯಾದರು. ಅಲ್ಲಿಂದ ನೇರವಾಗಿ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಆಗಮಿಸಿದರು. ತಂದೆ ದೇವೇಗೌಡ ಹಾಗೂ ಸಹೋದರ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಜೊತೆ ಕೆಲ ಸಮಯ ಚರ್ಚೆ ನಡೆಸಿದರು.
ಇದಕ್ಕೂ ಮುನ್ನ ಗೌಡರ ಮನೆಯಲ್ಲಿ ಪೂಜೆ ನೆರವೇರಿಸಿದ ರೇವಣ್ಣ, ಬಳಿಕ ತಂದೆ-ತಾಯಿ ಆಶೀರ್ವಾದ ಪಡೆದರು. ಈ ವೇಳೆ ದೇವೇಗೌಡರ ನಿವಾಸಕ್ಕೆ ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕರಾದ ಮಂಜುನಾಥ್, ಮಾಜಿ ಶಾಸಕ ಮಂಜುನಾಥ್ ಸೇರಿದಂತೆ ಜೆಡಿಎಸ್ ನ ಹಲವಾರು ನಾಯಕರು, ಕಾರ್ಯಕರ್ತರು ಆಗಮಿಸಿದರು. ಇದರ ಜೊತೆಗೆ ಬಿಜೆಪಿ ಶಾಸಕ ಮುನಿರತ್ನ ಸಹ ಗೌಡರ ನಿವಾಸಕ್ಕೆ ಆಗಮಿಸಿ ರೇವಣ್ಣ ಅವರಿಗೆ ಧೈರ್ಯ ಹೇಳಿದರು.
ಕಾರ್ಯಕರ್ತರ ಕಂಡು ರೇವಣ್ಣ ಕಣ್ಣೀರು: ದೇವೇಗೌಡರ ನಿವಾಸದ ಎದುರು ನೆರೆದಿದ್ದ ಕಾರ್ಯಕರ್ತರನ್ನು ರೇವಣ್ಣ ಭೇಟಿಯಾದರು. ಈ ಸಮಯದಲ್ಲಿ ಕಾರ್ಯಕರ್ತರನ್ನು ಕಂಡು ಕಣ್ಣೀರು ಹಾಕಿದರು. ಆಗ ರೇವಣ್ಣ ಅವರನ್ನು ಕಾರ್ಯಕರ್ತರೇ ಸಮಾಧಾನಪಡಿಸಿದರು. ಇದೇ ವೇಳೆ, ಡಿ.ಕೆ. ಶಿವಕುಮಾರ್ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಲು ಮುಂದಾದರು. ಈ ವೇಳೆ ರೇವಣ್ಣ ಅವರೇ, ಹಂಗೆಲ್ಲ ಮಾತನಾಡಬಾರದೆಂದು ಕಾರ್ಯಕರ್ತರಿಗೆ ಸಮಾಧಾನ ಮಾಡಿದರು. ಬಳಿಕ ರೇವಣ್ಣ ಅಲ್ಲಿಂದ ಜೆ.ಪಿ. ನಗರದಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿದರು.
ಸಂತ್ರಸ್ತೆ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ರೇವಣ್ಣ ಅವರಿಗೆ ಸೋಮವಾರ ಸಂಜೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ನ್ಯಾಯಾಲಯದ ಆದೇಶ ಪ್ರತಿಯನ್ನು ಸಂಜೆ 7 ಗಂಟೆಯೊಳಗೆ ಜೈಲಿನ ಅಧಿಕಾರಿಗಳಿಗೆ ತಲುಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸೋಮವಾರ ಬಿಡುಗಡೆಯಾಗಲು ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗೆ ರೇವಣ್ಣ ಅವರ ಪರ ವಕೀಲರು ಆದೇಶದ ಪ್ರತಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ತಲುಪಿಸಿ ಜಾಮೀನು ಷರತ್ತು ಪ್ರಕ್ರಿಯೆಗಳನ್ನು ಪೂರೈಸಿದ ನಂತರ ರೇವಣ್ಣ ಜೈಲಿನಿಂದ ಹೊರಬಂದರು.
ಇದನ್ನೂ ಓದಿ:6 ದಿನಗಳ ಜೈಲು ವಾಸ ಅಂತ್ಯ: ಪರಪ್ಪನ ಅಗ್ರಹಾರದಿಂದ ಹೆಚ್.ಡಿ.ರೇವಣ್ಣ ರಿಲೀಸ್