ಬೆಂಗಳೂರು: "ಬೇರೆ ಜೈಲಿಗೆ ದರ್ಶನ್ ಸ್ಥಳಾಂತರ ಮಾಡುವ ತೀರ್ಮಾನ ನಾವು ಮಾಡುವುದಕ್ಕೆ ಆಗುವುದಿಲ್ಲ. ಕೋರ್ಟ್ ನಿರ್ದೇಶನದ ಮೇರೆಗೆ ಸ್ಥಳಾಂತರ ಆಗಲಿದೆ. ಇನ್ನೂ ಎರಡ್ಮೂರು ದಿನಗಳಲ್ಲಿ ಆಗಲಿದೆ" ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, "ಜೈಲು ಪ್ರಾಧಿಕಾರವು ಕೋರ್ಟ್ ನಿರ್ದೇಶನದ ಮೇರೆಗೆ ಸ್ಥಳಾಂತರ ಮಾಡಲಿದೆ. ವಿಚಾರಣಾ ಕೈದಿ ಆಗಿರುವ ಹಿನ್ನೆಲೆಯಲ್ಲಿ ಕೆಲವೊಂದು ನಿಯಮಗಳಡಿ ಎರಡ್ಮೂರು ದಿನಗಳಲ್ಲಿ ಆಗಲಿದೆ. ನಾನು ನಿನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟಿದ್ದೆ. ಕೆಲವು ಲೋಪಗಳು ನಮಗೆ ಕಂಡು ಬಂದವು. ವಿಲ್ಸನ್ ಗಾರ್ಡನ್ ನಾಗನಿಗೆ ಒಂದು ಬ್ಯಾರಕ್ನಿಂದ ಮತ್ತೊಂದು ಬ್ಯಾರಕ್ಗೆ ಹೋಗಲು ಅವಕಾಶ ಕೊಟ್ಟಿದ್ದಾರೆ ಅಂತ ಗೊತ್ತಾಗಿದೆ. ಅದು ಸಿಸಿಟಿವಿಯಲ್ಲೂ ದಾಖಲಾಗಿದೆ" ಎಂದರು.
"ಈ ಹಿನ್ನೆಲೆಯಲ್ಲಿ ನಾವು ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ. ಈಗಾಗಲೇ 9 ಅಧಿಕಾರಿಗಳನ್ನು, ಚೀಫ್ ಸೂಪರಿಂಟೆಂಡೆಂಟ್ ಸೇರಿ ಇನ್ನೋರ್ವ ಅಧೀಕ್ಷಕರನ್ನೂ ಸಸ್ಪೆಂಡ್ ಮಾಡಿದ್ದೇವೆ. ಇನ್ಯಾರ್ಯಾರು ದರ್ಶನ್ ಗೆ ಸಹಕಾರ ಕೊಟ್ಟಿದ್ದಾರೋ ಅವರನ್ನೂ ಸಸ್ಪೆಂಡ್ ಮಾಡಲಾಗಿದೆ. ತನಿಖೆ ಇನ್ನೂ ಮುಂದುವರೆದಿದೆ. ಮುಂದಿನ ತನಿಖೆಗಾಗಿ ಇಂದು ಒಬ್ಬರು ಐಪಿಎಸ್ ಅಧಿಕಾರಿ ನೇಮಕ ಮಾಡುತ್ತೇವೆ. ಇವರು ಕೊಡುವ ವರದಿ ಆಧರಿಸಿ ಶಾಶ್ವತ ಕ್ರಮಗಳನ್ನು ಕೈಗೊಳ್ಳುತ್ತೇವೆ" ಎಂದರು.
ಪರಪ್ಪನ ಅಗ್ರಹಾರ ಜೈಲು ಮೂರು ವಿಭಾಗ ಮಾಡುವ ಪ್ರಸ್ತಾಪ ವಿಚಾರವಾಗಿ ಮಾತನಾಡಿ, "ಭದ್ರತೆ ದೃಷ್ಟಿಯಿಂದ ಆಂತರಿಕ ಆಡಳಿತದ ಸೆಟಪ್ ಮಾಡಬಹುದು. ಆದರೆ ಮೂರು ಭಾಗ ಮಾಡಲು ಆಗಲ್ಲ. ಬ್ಲಾಕ್ವಾರು, ಬ್ಯಾರಕ್ವಾರು ವಿಭಾಗಗಳಾಗಿ ಮಾಡಬಹುದು. ಅದು ಜೈಲು ಆಡಳಿತದವರಿಗೆ ಸಂಬಂಧಿಸಿದ ವಿಚಾರ" ಎಂದು ತಿಳಿಸಿದರು.