ಕರ್ನಾಟಕ

karnataka

ETV Bharat / state

ಸಿರವಾರದಲ್ಲಿ ಟಿಪ್ಪು ನಾಮಫಲಕಕ್ಕೆ ಅವಮಾನ ಪ್ರಕರಣ: ಓರ್ವ ಆರೋಪಿ ಬಂಧನ - ರಾಯಚೂರಲ್ಲಿ ಟಿಪ್ಪು ಸುಲ್ತಾನ್​ಗೆ ಅವಮಾನ

ಟಿಪ್ಪು ಸುಲ್ತಾನ್ ನಾಮಫಲಕಕ್ಕೆ ಅವಮಾನ ಮಾಡಿರುವ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ.

ಟಿಪ್ಪು ನಾಮಫಲಕಕ್ಕೆ ಅವಮಾನ
ಟಿಪ್ಪು ನಾಮಫಲಕಕ್ಕೆ ಅವಮಾನ

By ETV Bharat Karnataka Team

Published : Feb 2, 2024, 8:13 AM IST

Updated : Feb 2, 2024, 1:37 PM IST

ಎಸ್​ಪಿ ನಿಖಿಲ್ ಬಿ

ರಾಯಚೂರು: ಜಿಲ್ಲೆಯ ಸಿರವಾರ ಪಟ್ಟಣದ ಹಜರತ್ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಇರುವ ಟಿಪ್ಪು ಸುಲ್ತಾನ್ ಭಾವಚಿತ್ರದ ನಾಮಫಲಕವನ್ನು ಕೆಲವು ಕಿಡಿಗೇಡಿಗಳು ಜ.31ರಂದು ಅವಮಾನಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಿರವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ರಚಿಸಿದ್ದರು. ಇದೀಗ ಸಿರವಾರ ಪಟ್ಟಣದ ನಿವಾಸಿ ಆಕಾಶ್ ತಳವಾರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಘಟನೆ ಖಂಡಿಸಿ ಕೆಲವು ಯುವಕರು, ಮುಖಂಡರು ಪ್ರತಿಭಟನೆ ನಡೆಸಿದ್ದರು. ಟೈರ್‌ಗೆ ಬೆಂಕಿ ಹಚ್ಚಿ ರಾಯಚೂರು-ಲಿಂಗಸೂಗುರು ರಸ್ತೆ ಬಂದ್‌ ಮಾಡಿದ್ದರು. ಇದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆ ಕಾರಣರಾದವರನ್ನು ಬಂಧಿಸಿ ಶಿಕ್ಷೆ ವಿಧಿಸುವುದಾಗಿ ಪೊಲೀಸರು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದಿದ್ದರು. ಇದಾದ ನಂತರ ಸ್ಥಳೀಯ ಶಾಸಕ ಜಿ‌.ಹಂಪಯ್ಯ ನಾಯಕ, ಟಿಪ್ಪು ಸುಲ್ತಾನ್ ನಾಮಫಲಕಕ್ಕೆ ಹೂವಿನ ಹಾರ ಹಾಕಿ ಗೌರವಿಸಿ, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದರು.

ಹಿರಿಯ ಪೊಲೀಸ್ ಅಧಿಕಾರಗಳ ಮಾರ್ಗದರ್ಶನದಲ್ಲಿ ಎರಡು ತಂಡಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಅರ್ಧ ಹೆಲ್ಮೆಟ್, ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ರೋಲರ್‌ ಹತ್ತಿಸಿ ನಾಶಪಡಿಸಿದ ಪೊಲೀಸರು

"ಸಿರವಾರ ಪೊಲೀಸ್ ಠಾಣೆಯಲ್ಲಿ ಜ.31 ರಂದು ಟಿಪ್ಪು ಸುಲ್ತಾನ್ ಭಾವಚಿತ್ರ ಇರುವ ಫಲಕಕ್ಕೆ ಅವಮಾನ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ಬಳಿಕ ಕೆಲವರು ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಎರಡು ತಂಡ ರಚಿಸಿ, 24 ಗಂಟೆಯಲ್ಲಿ 24 ವರ್ಷದ ಸಿರವಾರದ ಆರೋಪಿ ಆಕಾಶ್ ಎಂಬಾತನನ್ನು ಬಂಧಿಸಿದ್ದೇವೆ. ಕುಡಿದ ಮತ್ತಿನಲ್ಲಿ ಆರೋಪಿ ನಸುಕಿನ ಜಾವ ಈ ಕೃತ್ಯ ಎಸಗಿದ್ದಾನೆ. ಬಳಿಕ ಆರೋಪಿ ರಾಯಚೂರಿಗೆ ಬಂದು ಬಸ್ಸಿನಲ್ಲಿ ತೆರಳಿದ್ದ. ಪೊಲೀಸರು ತಕ್ಷಣವೇ ಟ್ರ್ಯಾಕ್ ಮಾಡಿ ಬಂಧಿಸಿದ್ದಾರೆ. ಆರೋಪಿ ಗಾರೆ ಕೆಲಸ ಮಾಡಿಕೊಂಡಿದ್ದ. ಕೆಲ ದಿನ ಬೆಂಗಳೂರಿನಲ್ಲಿ ಕೆಲಸ ಮಾಡಿ ಬಳಿಕ ಸಂಕ್ರಾಂತಿಗೆ ಊರಿಗೆ ಬಂದಿದ್ದ. ಆರೋಪಿಗೆ ಯಾವುದೇ ಸಂಘಟನೆಯ ನಂಟಿಲ್ಲ ಎಂಬುದು ಸದ್ಯದ ವಿಚಾರಣೆಯಲ್ಲಿ ತಿಳಿದುಬಂದಿದೆ. ಹೆಚ್ಚಿನ ವಿಚಾರಣೆ ಕೈಗೊಂಡಿದ್ದೇವೆ" ಎಂದು ರಾಯಚೂರು ಎಸ್​ಪಿ ನಿಖಿಲ್ ಬಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Last Updated : Feb 2, 2024, 1:37 PM IST

ABOUT THE AUTHOR

...view details